ಕಾರ್ಮಿಕರ ಸಂಬಳಕ್ಕೆ ಆಗ್ರಹ: ಪ್ರತಿಭಟನೆ

7

ಕಾರ್ಮಿಕರ ಸಂಬಳಕ್ಕೆ ಆಗ್ರಹ: ಪ್ರತಿಭಟನೆ

Published:
Updated:

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಸುಶೀಲಾ ನಗರ ಗ್ರಾಮದಲ್ಲಿನ  ಜೀನತ್ ಟ್ರಾನ್ಸ್‌ಪೋರ್ಟ್ಸ್ ಕಂಪೆನಿಯ ಕಾರ್ಮಿಕರಿಗೆ ವೇತನ ನೀಡದೆ ವಂಚಿಸಲಾಗಿದ್ದು, ಕೂಡಲೇ ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾರ್ಮಿಕರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ  ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.



ಕರವೇ ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು,  ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಕಂಪೆನಿ ವಿರುದ್ಧ ಘೋಷಣೆ ಕೂಗಿದರು.

ಅನೇಕ ವರ್ಷಗಳಿಂದ ಕಂಪೆನಿಯಲ್ಲಿ ದುಡಿಯುತ್ತಿರುವ ನೂರಾರು ಕಾರ್ಮಿಕರನ್ನು ನೋಟಿಸ್ ನೀಡದೆ ದಿಢೀರ್ ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಕಾರ್ಮಿಕರು, ಕುಟುಂಬ ಸದಸ್ಯರು ಬೀದಿ ಪಾಲಾಗಿದ್ದಾರೆ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ತಿಳಿಸಿದರು.



ಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯಬೇಕಿರುವ ಸಂಬಳವನ್ನೂ, ಪರಿಹಾರವನ್ನೂ ನೀಡದೆ ಕಂಪೆನಿಯ ಆಡಳಿತ ಮಂಡಳಿ ವಂಚಿಸಿದೆ. ಅನೇಕ ವರ್ಷಗಳಿಂದ ಬಡ ಕಾರ್ಮಿಕರನ್ನು ದುಡಿಸಿಕೊಂಡರೂ, ಸೌಲಭ್ಯ ನೀಡಿಲ್ಲ  ಎಂದು ಅವರು ಆರೋಪಿಸಿದರು.



ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿರುವ ಕಾರ್ಮಿಕರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು. ಬಾಕಿ ವೇತನ ನೀಡಬೇಕು. ಸರ್ಕಾರ ಈ ನೌಕರರ ನೆರವಿಗೆ ಬರಬೇಕು, ಕಂಪೆನಿಯು ಸುಶೀಲಾ ನಗರ ಗ್ರಾಮವನ್ನು ದತ್ತು ಸ್ವೀಕರಿಸುವ ಮೂಲಕ ಗ್ರಾಮಸ್ಥರಿಗೆ ಎಲ್ಲ ಸೌಕರ್ಯಗಳನ್ನೂ ಒದಗಿಸಬೇಕು, ರೈತರಿಗೆ ಬೆಳೆ ಪರಿಹಾರ ನೀಡಿ, ಬಿತ್ತನೆ ಬೀಜವನ್ನೂ ಒದಗಿಸಬೇಕು ಎಂದು ಪ್ರತಿಭಟನಾಕಾರರು ಕೋರಿದರು. ನಂತರ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಯಿತು.



ಜೆ. ಬಾಬುನಾಯ್ಕ, ಎಂ. ವಿಜಯಸಿಂಗ್, ಚೆನ್ನಬಸವ, ಆತ್ಮಾನಂದ ರೆಡ್ಡಿ, ಜಗನ್, ಶಿವಕುಮಾರ್, ಕಾರ್ಮಿಕರು, ಮಹಿಳಾ ಕಾರ್ಮಿಕರು, ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry