ಕಾರ್ಮಿಕ ನಷ್ಟ ಪರಿಹಾರ ಕಲಾಪ ಸ್ಥಗಿತ!

7
ಮಧ್ಯಂತರ ಆದೇಶ ಹೊರಡಿಸಿದ ಹೈಕೋರ್ಟ್

ಕಾರ್ಮಿಕ ನಷ್ಟ ಪರಿಹಾರ ಕಲಾಪ ಸ್ಥಗಿತ!

Published:
Updated:

ದಾವಣಗೆರೆ: ರಾಜ್ಯದಲ್ಲಿ ಕಾರ್ಮಿಕ ನಷ್ಟ ಪರಿಹಾರ ಕಚೇರಿಯ ಜಿಲ್ಲಾ ಆಯುಕ್ತರು ನಡೆಸುತ್ತಿದ್ದ ಕಲಾಪ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಈ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ, ಕಾರ್ಮಿಕರ ಇಲಾಖೆ, 43 ಮಂದಿ ಜಿಲ್ಲಾ ಆಯುಕ್ತರಿಗೆ (ಜಿಲ್ಲಾ ಕಾರ್ಮಿಕ ಅಧಿಕಾರಿಗಳು) ನೋಟಿಸ್ ಜಾರಿ ಮಾಡಿದೆ.ಕಾರ್ಮಿಕರ-ಮಾಲೀಕರ ನಡುವಣ ಬಾಂಧವ್ಯ ಬಿರುಕು ಪ್ರಕರಣಗಳು, ಪ್ರಾಣ ಹಾನಿ, ಅಂಗವೈಕಲ್ಯದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯ ಆಯಾ ಜಿಲ್ಲಾ ಕಚೇರಿಗಳಲ್ಲಿ ಜಿಲ್ಲಾ ಆಯುಕ್ತರು ಕಲಾಪ ನಡೆಸುತ್ತಿದ್ದರು. ಅವರೇ ಅಂತಿಮ ನ್ಯಾಯದಾನ ನೀಡುವ ಮಹತ್ವದ ಅಧಿಕಾರ ಹೊಂದಿದ್ದರು. ಈ ಆಯುಕ್ತರಿಗೆ ಕಾನೂನು ವಿದ್ಯಾರ್ಹತೆ ಅಥವಾ ಕಾನೂನು ತಿಳಿವಳಿಕೆ ಇಲ್ಲದ ಕಾರಣ ನ್ಯಾಯದಾನ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಕಾರ್ಮಿಕರ ವರ್ಗದಿಂದ ಕೇಳಿ ಬರುತ್ತಿತ್ತು.ನ್ಯಾಯದಾನದ ತೀರ್ಪು ನೀಡುವ ವ್ಯಕ್ತಿಗೆ ಕನಿಷ್ಠ ಕಾನೂನಿನ ಅರಿವು ಇರಲೇಬೇಕು ಎಂಬುದನ್ನು ಅರಿತ ಕೇಂದ್ರ ಸರ್ಕಾರವು 2008ರಲ್ಲಿ `ಕಾರ್ಮಿಕ ನಷ್ಟ ಪರಿಹಾರ 1923ರ ಕಾಯ್ದೆ ಕಲಂ 20'ರ ಪ್ರಕಾರ ಕಾರ್ಮಿಕ ಕಲಾಪ ನಡೆಸುವ ಜಿಲ್ಲಾ ಆಯುಕ್ತರು ಕಾನೂನು ಪದವಿ ವಿದ್ಯಾರ್ಹತೆ ಗಳಿಸಿರಬೇಕು ಮತ್ತು ಕಾನೂನು ವಿದ್ಯಾರ್ಹತೆ ಇರುವ ವ್ಯಕ್ತಿಗಳನ್ನೇ ಆಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯಲ್ಲಿ ಉಲ್ಲೇಖಿಸಿತ್ತು. ಈ ಕಾಯ್ದೆ ಅನ್ವಯ ಕೇರಳ, ಒರಿಸ್ಸಾ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳು ಕೇಂದ್ರ ಮಂಡಿಸಿದ ನಿಯಮಾವಳಿಗಳನ್ನೇ ರಾಜ್ಯ ಸರ್ಕಾರದ ನಡಾವಳಿಗಳನ್ನಾಗಿ ರೂಪಿಸಿಕೊಂಡು ಕಾನೂನು ಪದವೀಧರರನ್ನು ಜಿಲ್ಲಾ ಆಯುಕ್ತರ ಹುದ್ದೆಗೆ ನೇಮಕಾತಿ ನಡೆಸಿವೆ. ಆದರೆ, ರಾಜ್ಯದ ಬಿಜೆಪಿ ಸರ್ಕಾರ ಇದನ್ನು ನಿರ್ಲಕ್ಷಿಸಿತ್ತು.  ಹೀಗಾಗಿ ಜಿಲ್ಲಾ ಕಾರ್ಮಿಕ ಕಚೇರಿ ಅಧಿಕಾರಿಗಳು ಆಯುಕ್ತರಾಗಿ ಕಲಾಪ ನಡೆಸುವಂತೆ ರಾಜ್ಯದಲ್ಲಿ ಯಥಾಸ್ಥಿತಿ ಮುಂದವರಿಸಲಾಯಿತು.ಈಚೆಗೆ ಐಸಿಐಸಿಐ ಲೋಂಬಾರ್ಡ್ ಜನರಲ್ ಇನ್ಷೂರೆನ್ಸ್ ಕಂಪೆನಿಯು ಸರ್ಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಆಯುಕ್ತರ ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು, `ರಾಜ್ಯದಲ್ಲಿ ಕಾರ್ಮಿಕ ನಷ್ಟ ಪರಿಹಾರ ಕಚೇರಿ ಆಯುಕ್ತರ ಕಲಾಪ ತಕ್ಷಣ ಸ್ಥಗಿತಗೊಳಿಸುವ ಮೂಲಕ ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ಆ. 27ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಆ. 28ರಿಂದ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನಷ್ಟ ಪರಿಹಾರ ಕಲಾಪ ವಿಚಾರಣೆ ಸ್ಥಗಿತಗೊಳಿಸಲಾಗಿದೆ.ಸರ್ಕಾರದ ಹೊಣೆಗೇಡಿತನ

ಹೈಕೋರ್ಟ್ ಆದೇಶದಲ್ಲಿಮುಂದಿನ  ಆದೇಶದವರೆಗೆ ಎಂದು ಉಲ್ಲೇಖಿಸಿರುವುದರಿಂದ ಎಷ್ಟು ವರ್ಷಗಳಾದರೂ ಆಗಬಹುದು. ಸರ್ಕಾರದ ಹೊಣೆಗೇಡಿತನದಿಂದಾಗಿ ಕಾರ್ಮಿಕರು ವಿಚಾರಣೆಯಿಂದ ವಂಚಿತರಾಗುವಂತಾಗಿದೆ. ಕಾನೂನು ಪದವೀಧರ ಅರ್ಹತೆ ಪಡೆದಿರುವ ಆಯುಕ್ತರ ನೇಮಕ ಆಗುವವರೆಗಾದರೂ, ಕಲಾಪವನ್ನು ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಲು ಸರ್ಕಾರ ಕ್ರಮಕೈಗೊಳ್ಳಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಹಿಂದಿನ ಸರ್ಕಾರದ ನಿರ್ಲಕ್ಷ್ಯ ಹಾಗೂ ಪ್ರಸ್ತುತ ಕಾನೂನು ಪದವೀಧರ ವಿದ್ಯಾರ್ಹತೆವುಳ್ಳ ಜಿಲ್ಲಾ ಆಯುಕ್ತರ ನೇಮಕಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಗತ್ಯ ದಾಖಲಾತಿ ಸಲ್ಲಿಸುವ ಮೂಲಕ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರೆ ಮಧ್ಯಂತರ ಆದೇಶ ಹಿಂಪಡೆಯುವ ಅವಕಾಶವಿದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ.

-ಜಿ.ಎಂ.ಈಶ್ವರ್, ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry