ಕಾರ್ಮಿಕ ಸಂಘಟನೆಗಳ ಮುಷ್ಕರ ಯಶಸ್ವಿ

7

ಕಾರ್ಮಿಕ ಸಂಘಟನೆಗಳ ಮುಷ್ಕರ ಯಶಸ್ವಿ

Published:
Updated:
ಕಾರ್ಮಿಕ ಸಂಘಟನೆಗಳ ಮುಷ್ಕರ ಯಶಸ್ವಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಡ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಕರೆ ನೀಡಿದ್ದ ದೇಶ ವ್ಯಾಪಿ ಬಂದ್ ಬೆಂಬಲಿಸಿ ಕಾರ್ಮಿಕ ಸಂಘಟನೆಗಳು, ಬ್ಯಾಂಕ್ ನೌಕರರು ಹಾಗೂ ಆಟೊ ಚಾಲಕರ ಒಕ್ಕೂಟಗಳು ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿ ಮಂಗಳವಾರ ನಡೆಸಿದ ಮುಷ್ಕರ ಯಶಸ್ವಿಯಾಯಿತು.ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಜೀವ ವಿಮಾ ಕಂಪೆನಿಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಹಾಗೂ ಆಟೊ ಚಾಲಕರು ಆಟೊ ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಜನಜೀವನಕ್ಕೆ ತೊಂದರೆಯಾಯಿತು. ಅಲ್ಲದೇ ಸಿದ್ಧ ಉಡುಪು ಕಾರ್ಖಾನೆಗಳು ಸೇರಿದಂತೆ ಬಹುತೇಕ ಕಾರ್ಖಾನೆಗಳ ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗವಹಿಸಿದ್ದರು.ಬಂದ್‌ನ ಪ್ರಯುಕ್ತ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮುಷ್ಕರನಿರತರು ಆಯೋಜಿಸಿದ್ದ ಬೃಹತ್ ರ‌್ಯಾಲಿ ಉದ್ಘಾಟಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ ಅವರು, `ಮುಷ್ಕರ ನಿರತರ  ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು~ ಎಂದರು.ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು, ಗುತ್ತಿಗೆ ನೌಕರಿ ಪದ್ಧತಿ ರದ್ದುಪಡಿಸಬೇಕು, ಕನಿಷ್ಠ ಕೂಲಿ ನೀತಿ ಜಾರಿಗೊಳಿಸಬೇಕು, ಆಟೊ ಪ್ರಯಾಣ ದರ ಪರಿಷ್ಕರಿಸಬೇಕು, ಎಲ್ಲ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಬ್ಯಾಂಕ್‌ಗಳ ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಬೇಕು, ಬ್ಯಾಂಕಿಂಗ್ ಕಾರ್ಯ ಚಟುವಟಿಕೆಗಳನ್ನು ಹೊರ ಗುತ್ತಿಗೆಗೆ ನೀಡಬಾರದು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಬಾರದು, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮುಷ್ಕರನಿರತರು ಒತ್ತಾಯಿಸಿದರು.ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಭಾರತೀಯ ಮಜ್ದೂರ್ ಸಂಘ, ಸಿಐಟಿಯು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ, ನ್ಯಾಷನಲ್ ಕೌನ್ಸಿಲ್ ಆಫ್ ಬ್ಯಾಂಕ್ ಎಂಪ್ಲಾಯೀಸ್, ಬೆಂಗಳೂರು ಆಟೊ ಚಾಲಕರ ಒಕ್ಕೂಟ, ಆಟೊ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಕರ್ನಾಟಕ ವರ್ಕರ್ಸ್‌ ಯೂನಿಯನ್, ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.ಸಂಚಾರ ಅಸ್ತವ್ಯಸ್ತ: ಮುಷ್ಕರನಿರತರು ಬೆಳಿಗ್ಗೆ 11.30ರಸುಮಾರಿಗೆ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ರ‌್ಯಾಲಿ ನಡೆಸಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಿತು.ಕಾರ್ಪೋರೇಷನ್ ವೃತ್ತ, ಜೆ.ಸಿ.ರಸ್ತೆ, ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತಲು ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.ಪೊಲೀಸರು ಹಲವೆಡೆ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದರಿಂದ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು. ಜೆ.ಸಿ.ರಸ್ತೆ, ಸಿಟಿ ಮಾರುಕಟ್ಟೆ ಬಳಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry