ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಿ ಸಿಂಗ್ ವಿರುದ್ಧ ಆಕ್ರೋಶ

7

ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಿ ಸಿಂಗ್ ವಿರುದ್ಧ ಆಕ್ರೋಶ

Published:
Updated:
ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಿ ಸಿಂಗ್ ವಿರುದ್ಧ ಆಕ್ರೋಶ

ನವದೆಹಲಿ (ಪಿಟಿಐ): `ಗುತ್ತಿಗೆ ಆಧಾರಿತ ಕೆಲಸಗಳು ವ್ಯಾಪಕವಾಗುತ್ತಿರುವುದರ ಜೊತೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ~ ಎಂದು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮಂಗಳವಾರ ಇಲ್ಲಿ ನಡೆದ ವಾರ್ಷಿಕ ಕಾರ್ಮಿಕ ಸಮ್ಮೇಳನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಹರಿಹಾಯ್ದರು.ಸಿಂಗ್ ಅವರ ಸಮ್ಮುಖದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಪ್ರತಿನಿಧಿಗಳು, ಪ್ರಧಾನಿ ಕಾರ್ಪೊರೇಟ್ ಮುಖಂಡರೊಂದಿಗೆ ಮಾತ್ರ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.ಈ ಮಧ್ಯೆ, ಟೀಕಾಸ್ತ್ರವನ್ನು ಹಣಕಾಸು ಮತ್ತು ವಾಣಿಜ್ಯ ಸಚಿವಾಲಯದತ್ತಲೂ ಹರಿಬಿಟ್ಟ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಸಿ.ಕೆ.ಸಜಿ ನಾರಾಯಣನ್, ಇಪಿಎಫ್ ಮೇಲೆ ಬಡ್ಡಿ ದರ ನಿಗದಿಪಡಿಸುವುದಲ್ಲದೆ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಒತ್ತಡ ಹೇರುವ ಮೂಲಕ ಕಾರ್ಮಿಕ ಸಚಿವಾಲಯದ ಆಂತರಿಕ ವ್ಯವಹಾರದಲ್ಲಿ ಈ ಎರಡೂ ಸಚಿವಾಲಯಗಳು ತಲೆತೂರಿಸುತ್ತಿವೆ ಎಂದು ಗುಡುಗಿದರು.ಸರ್ಕಾರ ಎಷ್ಟೇ ಅಭಿವೃದ್ಧಿಯ ಮಾತನಾಡಿದರೂ ಭಾರತದ ಕರಾಳ ಮುಖದ ಮುಂದೆ ಅವೆಂದೂ ಸರಿದೂಗಲಾರವು. ವಾಸ್ತವ ಬದುಕಿಗೆ ಹೋಲಿಸಿ ನೋಡಿದಾಗ ಅಭಿವೃದ್ಧಿಯ ಸುಂದರ ಪದಗಳಾವುವೂ ತಾಳೆಯಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ ಅವರು, ಜಾಗತೀಕರಣದ ಪ್ರಭಾವದಿಂದ ದೇಶ ಎದುರಿಸುತ್ತಿರುವ ನಿರುದ್ಯೋಗ ಮತ್ತು ಅಸಮತೋಲನ ಪರಿಸ್ಥಿತಿಯನ್ನು ಪರಾಮರ್ಶಿಸಲು ಇದು ಸಕಾಲ ಎಂದು ಪ್ರಧಾನಿಯನ್ನು ಉದ್ದೇಶಿಸಿ ಹೇಳಿದರು.ಸರ್ಕಾರ ಬದ್ಧ: ಕಾರ್ಮಿಕ ಸಂಘಟನೆಗಳ ತೀವ್ರ ಟೀಕೆಯ ನಡುವೆಯೇ ಮಾತನಾಡಿದ ಪ್ರಧಾನಿ, `ಸರ್ಕಾರ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಲ್ಲಿ ಬದ್ಧವಾಗಿದ್ದರೂ ಕಾರ್ಮಿಕರ ಕಲ್ಯಾಣ ಕುರಿತ ನೀತಿ ಮತ್ತು ಯೋಜನೆಗಳು ಆ ವಲಯದ ಅಭಿವೃದ್ಧಿಗೆ ಪೂರಕವಾಗಿವೆಯೇ ಎಂಬ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ~ ಎಂದರು. ತಮ್ಮ ಸರ್ಕಾರ ರೆಕಾಲಿಕ ಉದ್ಯೋಗವು ಪೂರ್ಣಕಾಲಿಕ ಉದ್ಯೋಗಕ್ಕೆ ಸರಿಸಮಾನವಾಗಿರುವಂತೆಯೇ ನೀತಿಗಳನ್ನು ರೂಪಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಒಂದು ವೇಳೆ ಇದಕ್ಕೆ ಶಾಸನ ರೂಪದಲ್ಲಿ ಬದಲಾವಣೆ ಮಾಡಬೇಕೆಂದಿದ್ದಲ್ಲಿ ಅದಕ್ಕೂ ಸಿದ್ಧ ಎಂದರು.

ಕಾನೂನು ಮಾರ್ಪಾಡು

ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಕಾನೂನಿನಲ್ಲಿ ಬದಲಾವಣೆ ತರಲಿದೆ ಎಂದು ಪ್ರಧಾನಿ ಸಿಂಗ್ ತಿಳಿಸಿದರು.`ದೇಶದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ ಮತ್ತು ಇತ್ತೀಚಿನ ದಶಕಗಳಲ್ಲಂತೂ ಈ ಪ್ರಮಾಣ ಹೆಚ್ಚು ಕಡಿಮೆ ಒಂದೇ ತೆರನಾಗಿದೆ. ಇದರಲ್ಲಿ ಬದಲಾವಣೆ ತರಬೇಕಾದರೆ, ಕುಟುಂಬ ಮತ್ತು ಕೆಲಸದ ಹೊಣೆಗಾರಿಕೆಯ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹಿಳೆಯರಿಗಿರುವ ಇತಿಮಿತಿಗಳನ್ನೂ ನಾವು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಇದೆ~ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry