ಸೋಮವಾರ, ಆಗಸ್ಟ್ 26, 2019
21 °C

ಕಾರ್ಮೋಡಗಳ ನಡುವೆ ಬೆಳ್ಳಿಗೆರೆ

Published:
Updated:

ಜಿಂಬಾಬ್ವೆ ವಿರುದ್ಧದ ಐದೂ ಪಂದ್ಯಗಳಲ್ಲಿ ಭಾರತದ ಜಯಭೇರಿ, ಯುವ ಪಡೆಯ ಮೇಲೆ ಮತ್ತಷ್ಟು ಭರವಸೆ ಮೂಡಿಸಿದೆ. ನಾಯಕ ದೋನಿ ಸೇರಿದಂತೆ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರು ಇಲ್ಲದ ಈ ತಂಡ ವಿದೇಶಿ ನೆಲದಲ್ಲಿ ತೋರಿದ ಸಾಧನೆ ಶ್ಲಾಘನೀಯ.ಭಾರತ ಅಲ್ಲಿ ಈ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಗೆಲ್ಲಬಹುದೆಂಬ ನಿರೀಕ್ಷೆ ಇತ್ತು. ಆದರೆ ಅಲ್ಲಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಸಾಮರ್ಥ್ಯ, ವಿರಾಟ್ ಕೊಹ್ಲಿಯ ನಾಯಕತ್ವದ ಚಾತುರ್ಯ ಪ್ರಖರ ಗೊಂಡಿದ್ದು ಅನಿರೀಕ್ಷಿತ. ಅನಿಲ್ ಕುಂಬ್ಳೆ, ಹರಭಜನ್ ನಂತರ ಯಾರು ಎಂದಾಗ ಅಶ್ವಿನ್ ಮುಗಿಲೆತ್ತರ ನಿಂತಿದ್ದರು.ಇದೀಗ ಮಿಶ್ರಾ ಹದಿನೆಂಟು ವಿಕೆಟ್‌ಗಳ ದಾಖಲೆ ಸಾಧನೆಯೊಂದಿಗೆ ಅಬ್ಬರಿಸಿದ್ದಾರೆ. ಶಿಖರ್ ಧವನ್, ಅಂಬಟಿ ರಾಯುಡು ಬ್ಯಾಟುಗಳು ಯಶಸ್ಸಿನ ಸದ್ದು ಮಾಡಿವೆ. ಮೂರನೇ ಪಂದ್ಯದಲ್ಲಿ ಕೊಹ್ಲಿ ಅವರ ರನ್ ಗಳಿಕೆ ಭಾರತದ ಗೆಲುವಿಗೆ ಕಾರಣ ವಾಯಿತು. ನಾಯಕತ್ವದ ಜವಾಬ್ದಾರಿಯ ನಡುವೆಯೂ ತಾನು ನೆಲಕಚ್ಚಿ ಆಡಬಲ್ಲೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಅಂಪೈರ್ ಜತೆ ವಾದಕ್ಕಿಳಿದಂತಹ ಘಟನೆಯನ್ನು ಹೊರತುಪಡಿಸಿದರೆ, ಕೊಹ್ಲಿ ಅತ್ಯಂತ ಗಂಭೀರವಾಗಿ ತಂಡವನ್ನು ಮುನ್ನಡೆಸಿದ್ದಾರೆ. ತಂಡಕ್ಕೆ ಸ್ಫೂರ್ತಿ ತುಂಬಿದ್ದಾರೆ.ಜಿಂಬಾಬ್ವೆ ಎದುರು ಈವರೆಗೆ ಆಡಿದ ಒಟ್ಟು 56 ಪಂದ್ಯಗಳಲ್ಲಿ 44ರಲ್ಲಿ ಭಾರತವೇ ಗೆದ್ದಿದೆ. ಹೀಗಾಗಿ ಭಾರತೀಯರು ಈ ಸರಣಿ ಗೆಲುವಿನ ಬಗ್ಗೆ ಅತಿಯಾದ ಸಂಭ್ರಮಪಡಬೇಕಾಗಿಲ್ಲ. ಆದರೆ ಮೂರು ವರ್ಷಗಳ ಹಿಂದೆ ಭಾರತ ತಂಡ ಜಿಂಬಾಬ್ವೆ ನೆಲದಲ್ಲಿ ಆಡಿದ್ದ ಎರಡೂ ಪಂದ್ಯ ಗಳಲ್ಲಿ ಸೋತಿದ್ದನ್ನು ನೆನಪಿಸಿಕೊಂಡರೆ ಇದು ಅತ್ಯುತ್ತಮ ಸಾಧನೆಯೇ ಹೌದು.ಐಪಿಎಲ್ ಬೆನ್ನಲ್ಲೇ ಪೆಡಂಭೂತವಾಗಿ ಕಾಡುತ್ತಿರುವ ಸ್ಪಾಟ್ ಫಿಕ್ಸಿಂಗ್ ಹಗರಣ, ಇದರ ಜತೆಯಲ್ಲೇ ಸುದ್ದಿಯ ತಾರಕದಲ್ಲಿರುವ ಬಿಸಿಸಿಐ ಅಧ್ಯಕ್ಷರು ಮತ್ತು ಅವರೇ ನೇಮಿಸಿದ ತನಿಖಾ ಸಮಿತಿ, ಅದರ ವಿರುದ್ಧ ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ಇತ್ಯಾದಿ ಸಂಗತಿಗಳೆಲ್ಲವೂ ಕ್ರಿಕೆಟ್ ಬಗ್ಗೆ ಜನ ಕ್ರಮೇಣ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿವೆ.

ಇಂತಹ ಸಂದಿಗ್ಧದಲ್ಲಿ ಬಹುತೇಕ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತೀಯರು ಜಿಂಬಾಬ್ವೆನಲ್ಲಿ ಗಳಿಸಿದ ಯಶಸ್ಸು ಕಾರ್ಮೋಡಗಳ ನಡುವಣ ಬೆಳ್ಳಿಗೆರೆಯಂತಿದೆ.2015ರಲ್ಲಿ ನಡೆಯಲಿರುವ ವಿಶ್ವಕಪ್ ಪೈಪೋಟಿಗೆ ಈಗಿನಿಂದಲೇ ತಂಡ ರೂಪಿಸುವ ದೂರದೃಷ್ಟಿಯಿಂದ ಹೇಳುವುದಾದರೆ ಈ ಸರಣಿ ನಮ್ಮ ಮಟ್ಟಿಗೆ ಯಶಸ್ಸಿನ ಮಹತ್ತರ ಮೈಲುಗಲ್ಲು. ಈ ಸರಣಿಯಲ್ಲಿ ಹಲವು ಪ್ರತಿಭೆಗಳು ಕಣ್ಣು ಕೋರೈಸಿರುವುದರಿಂದ ಮುಂದಿನ ದಿನಗಳಲ್ಲಿ ಬಿಸಿಸಿಐನ ಆಯ್ಕೆ ಸಮಿತಿಗೆ ತಲೆನೋವಾಗಲಿರುವುದಂತೂ ನಿಜ.ಇದು ನಾವು ಹೆಮ್ಮೆಪಡಬೇಕಾದ ಸಂಗತಿ ಕೂಡಾ. ಭಾರತ ಕ್ರಿಕೆಟ್, ಪ್ರತಿಭಾವಂತರ ಅಕ್ಷಯಪಾತ್ರೆ ಎಂಬುದು ಮತ್ತೆ ಸಾಬೀತಾಗಿದೆ. ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ಪರ್ವೇಜ್ ರಸೂಲ್ ಕಳೆದ ರಣಜಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದರು. ತಂಡದಲ್ಲಿದ್ದೂ ಆಡದೇ ಬರುತ್ತಿರುವವರು ಇವರೊಬ್ಬರೇ. ರಸೂಲ್‌ಗೆ ಈ ಸರಣಿಯ ಕೊನೆಯ ಪಂದ್ಯದಲ್ಲಾದರೂ ಒಂದು ಅವಕಾಶ ನೀಡಬಹುದಿತ್ತು ಎಂದೆನಿಸುವುದು ಸಹಜವಾದರೂ ಕ್ರೀಡಾ ವಿಚಾರದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು.

Post Comments (+)