ಕಾರ್ಯಕರ್ತರನ್ನು ಗುರುತಿಸಿಲ್ಲ

7

ಕಾರ್ಯಕರ್ತರನ್ನು ಗುರುತಿಸಿಲ್ಲ

Published:
Updated:
ಕಾರ್ಯಕರ್ತರನ್ನು ಗುರುತಿಸಿಲ್ಲ

ಪಟ್ನಾ (ಪಿಟಿಐ): ಭ್ರಷ್ಟಾಚಾರ ವಿರುದ್ಧ ಹಾಗೂ ಪ್ರಬಲ ಜನಲೋಕಪಾಲ ಮಸೂದೆಗೆ ಒತ್ತಾಯಿಸಿ ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಾಗರಿಕ ಸಮಾಜ ಕಳೆದ ವರ್ಷ ನಡೆಸಿದ ಪ್ರತಿಭಟನೆಗೆ ವೈಯಕ್ತಿಕ ನೆಲೆಯಲ್ಲಿ ಬೆಂಬಲ ನೀಡಿದ ತನ್ನ ಕಾರ್ಯಕರ್ತರನ್ನು ಗುರುತಿಸುವಲ್ಲಿ ಅಣ್ಣಾ ವಿಫಲವಾಗಿದ್ದಾರೆ ಎಂದು ಆರ್‌ಎಸ್‌ಎಸ್ ಹರಿಹಾಯ್ದಿದೆ.ಭ್ರಷ್ಟಾಚಾರದ ವಿರುದ್ಧ ನಡೆದ ಚಳವಳಿಯಲ್ಲಿ ಸಂಘ ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲಿ ಪಾಲ್ಗೊಳ್ಳುವ ಮೂಲಕ ಚಳವಳಿ ಯಶಸ್ವಿಯಾಗಲು ಕಾರಣರಾಗಿದ್ದರು ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸುದ್ದಿಗಾರರಿಗೆ ತಿಳಿಸಿದರು.ನಾಗರಿಕ ಸಮಾಜ ಅಣ್ಣಾ ನೇತೃತ್ವದಲ್ಲಿ ಚಳವಳಿ ನಡೆಸಿದ ಸಂದರ್ಭದಲ್ಲಿ ಅದರಲ್ಲಿ ಪಾಲ್ಗೊಳ್ಳುವಂತೆ ಸಂಘ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿರಲಿಲ್ಲ. ಆದರೆ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಭ್ರಷ್ಟಾಚಾರದ ವಿರುದ್ಧ ನಡೆದ ಆಂದೋಲನದಲ್ಲಿ ಸ್ವಯಂ ಪ್ರೇರಿತರಾಗಿ ದೇಶಾದ್ಯಂತ ಪಾಲ್ಗೊಂಡಿದ್ದರು. ತನ್ಮೂಲಕ ಚಳವಳಿ ಯಶಸ್ವಿಯಾಗಲು ಕಾರಣಕರ್ತರಾಗಿದ್ದರು ಎಂಬ ಅಂಶವನ್ನು ಭಾಗವತ್ ಬಯಲುಗೊಳಿಸಿದರು.ಆರ್‌ಎಸ್‌ಎಸ್ ಆಂದೋಲನದಲ್ಲಿ ಪಾಲ್ಗೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದ ಸಂದರ್ಭದಲ್ಲಿ ಅದನ್ನು ಸಮರ್ಥಿಸುವಲ್ಲಿ ಅಣ್ಣಾ ಸಂಪೂರ್ಣ ವಿಫಲರಾಗಿದ್ದು ತಮಗೆ ನೋವು ತಂದಿದೆ ಎಂದು ಅವರು ಹೇಳಿದರು.ಭ್ರಷ್ಟಾಚಾರ ನಿಗ್ರಹ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಸಹ ನಾಗರಿಕ ಸಮಾಜದ ನಿಲುವನ್ನೇ ಹೊಂದಿದೆ. ಈ ಬಗ್ಗೆ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ತಮ್ಮ ಸಂಘಟನೆ ನಾಗರಿಕ ಸಮಾಜದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಭಾಗವತ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರಿಂದಲೇ ರಾಜಕೀಯ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು. ಬದಲಾಗಿ ಚುನಾವಣೆ ಕ್ರಮದಲ್ಲಿ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry