ಕಾರ್ಯಕರ್ತರ ಕಡೆಗಣನೆ ಸರಿಯಲ್ಲ

7

ಕಾರ್ಯಕರ್ತರ ಕಡೆಗಣನೆ ಸರಿಯಲ್ಲ

Published:
Updated:

ಬಂಗಾರಪೇಟೆ: ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಿ ಜನರಿಗೆ ಸ್ಪಂದಿಸಿದರೆ ಮಾತ್ರ ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಾಧ್ಯ ಎಂದು ಕಾಂಗ್ರೆಸ್‌ ಪದಾಧಿಕಾರಿಗಳು ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮುಂದಿನ ಚುನಾವಣೆಗೆ ಸಿದ್ಧರಾಗಲು ಬೇಕಾದ ರೂಪು ರೇಷೆ­ಗಳನ್ನು ರೂಪಿಸಲಾಯಿತು. ಜಿಲ್ಲೆಯಲ್ಲಿ ಕೆಲ ಮುಖಂಡರು ಅನುಸರಿಸಿದ ಧೋರಣೆಯಿಂದ ಪಕ್ಷದ ಸಂಘಟನೆಯಲ್ಲಿ ಹಿನ್ನಡೆಯಾಗಿದೆ. ಭಿನ್ನ ಅಭಿಪ್ರಾಯ ಇದ್ದರೆ ಪಕ್ಷದ ಮುಖಂಡ­ರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳ­ಬೇಕು ಎಂದು ಕೆಲವರು ಸೂಚಿಸಿದರು.ಚುನಾವಣೆ ವೇಳೆ ಮಾತ್ರ ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ನಂತರ ಕಡೆಗಣಿಸುವುದು ಸಮಂಜಸ­ವಲ್ಲ. ಜಿಲ್ಲೆಯಲ್ಲಿನ ಮೂವರು ಶಾಸಕರು ಪಕ್ಷ ಬಲಗೊಳಿಸುವಲ್ಲಿ ಶ್ರಮ ವಹಿಸಬೇಕು ಎಂದು ಕೆಲ ಹಿರಿಯ ಮುಖಂಡರು ಸೂಚನೆ ನೀಡಿದರು.ಪಕ್ಷದ ತತ್ವಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬಂದರೆ ಮಾತ್ರ ಲೋಕಸಭೆ ಚುನಾವಣೆ ಸಮರ್ಥವಾಗಿ ಎದುರಿಸಲು ಸಾಧ್ಯ. ಇಲ್ಲದಿದ್ದರೆ ಮತ ಕೇಳಲು ಗ್ರಾಮಗಳಿಗೆ ಹೋಗಲು ಆಗುವುದಿಲ್ಲ ಎಂದು ಶಾಸಕ ರಮೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.ಚರ್ಚೆ ಬಳಿಕ ಪದಾಧಿಕಾರಿ­ಗಳೊಂದಿಗೆ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್,  ಕಾಂಗ್ರೆಸ್‌ ಸರ್ಕಾರ ಕೈಗೊಂಡಿ­ರುವ ಜನಪರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಗ್ರಾಮ­ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದರು.ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕ ಎಸ್.­ಎನ್.­ನಾರಾಯಣಸ್ವಾಮಿ, ಮುಖಂಡ­ರಾದ ಕೆ.ಚಂದ್ರಾರೆಡ್ಡಿ, ಶಂಶುದ್ದೀನ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ, ಜನ್ನಘಟ್ಟ ವೆಂಕಟ­ಮುನಿಯಪ್ಪ, ಗೋಪಾಲಗೌಡ, ಕಮಲಮ್ಮ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry