ಗುರುವಾರ , ಮೇ 13, 2021
34 °C

ಕಾರ್ಯಕರ್ತರ ನಡುವೆ ಹೊಯ್-ಕೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾನುವಾರ ಕಿಮ್ಸ ಅಧ್ಯಕ್ಷ ಬಿ.ಮುನೇಗೌಡ ಹಾಗೂ ಮಾಜಿ ಸಚಿವ ಸಿ.ಚನ್ನಿಗಪ್ಪ ಬೆಂಬಲಿಗ ಕಾರ್ಯಕರ್ತರ ಮಧ್ಯೆ ಕೈ ಕೈ ಮಿಲಾಯಿಸಿದ ಪ್ರಸಂಗ ನಡೆಯಿತು.ಚನ್ನಿಗಪ್ಪ ಅವರು ಸಮಾವೇಶ ನಡೆಯುತ್ತಿದ್ದ ವೀರಭದ್ರಸ್ವಾಮಿ ಕಲ್ಯಾಣ ಮಂದಿರಕ್ಕೆ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಧಿಕ್ಕಾರ ಕೂಗಲಾಯಿತು. ಈ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಚನ್ನಿಗಪ್ಪ ಅವರು ಸಮಾವೇಶಕ್ಕೆ ತೆರಳಲು ದಾರಿಮಾಡಿಕೊಟ್ಟರು. ಇದರಿಂದಾಗಿ ಸಮಾವೇಶದ ಸ್ಥಳದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು.ಈ ಸಂದರ್ಭದಲ್ಲಿ ಕೀಮ್ಸ ಅಧ್ಯಕ್ಷ ಬಿ.ಮುನೇಗೌಡ ಅವರ ಸಹೋದರರು ಮಾತನಾಡಿ, ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಗಾಗಿ ಮುನೇಗೌಡ ಅವರು ರಾತ್ರಿ-ಹಗಲೆನ್ನದೆ ದುಡಿದಿದ್ದಾರೆ. ಈ ತಾಲ್ಲೂಕಿನ ಸಹವಾಸವೇ ಬೇಡ ಎಂದು ಹೋದವರಿಗೆ ಇವತ್ತು ಹೈಕಮಾಂಡ್ ಟಿಕೆಟ್ ನೀಡಲು ಮುಂದಾಗಿದೆ. ಈ ಕೂಡಲೇ ಚನ್ನಿಗಪ್ಪ ಅವರು ಕ್ಷೇತ್ರದಿಂದ ಗೌರವಯುತವಾಗಿ ಹೊರಹೋಗಬೇಕು ಎಂದು ಆಗ್ರಹಿಸಿದರು. ಮುನೇಗೌಡ ಅವರ ಬೆಂಬಲಿಗರು ಸಮಾವೇಶಕ್ಕೆ ಅಡ್ಡಿಪಡಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಚನ್ನಿಗಪ್ಪ, `ಮುನೇಗೌಡರು ನಮ್ಮ ಮೇಲೆ ದೌರ್ಜನ್ಯ ನಡೆಸುವುದಿದ್ದರೆ ಸೂಕ್ತ ಸ್ಥಳ ನಿಗದಿ ಪಡಿಸಲಿ ನಾನು ಬರಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.`ಪಕ್ಷದ ಸಂಘಟನೆಗಾಗಿ ನಡೆಯುವ ಕಾರ್ಯಕರ್ತರ ಸಭೆಗಳಲ್ಲಿ ಸೌಜನ್ಯ ಮೀರಿ ಬೆಂಬಲಿಗರಿಂದ ದಾಂಧಲೆ ನಡೆಸಿದರೆ ನಾವು ತಕ್ಕ ಉತ್ತರ ನೀಡಬೇಕಾಗುತ್ತದೆ. ನಾನು ಹೈಕಮಾಂಡ್ ಹಾಗೂ ಕ್ಷೇತ್ರದ ಕಾರ್ಯಕರ್ತರ ಒತ್ತಾಯದಿಂದಾಗಿ ಎರಡನೇ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದೇನೆ. ವಿಧಾನಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ  ಹೋಬಳಿ ಹಂತದಿಂದ ಸಂಘಟನೆ ಆರಂಭಿಸಲಾಗಿದೆ~ ಎಂದರು.ಮಾಜಿ ಸಚಿವ ಸಿ.ಚನ್ನಿಗಪ್ಪ ಅವರಿಗೆ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜೆಡಿಎಸ್ ಹೈಕಮಾಂಡ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿಯೇ ಅವರು ಇಂದಿನ ಹೋಬಳಿ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್.ಗೋವಿಂದರಾಜ್ ಹೇಳಿದರು.`ಸಮಾವೇಶಕ್ಕೆ ಅಡ್ಡಿಪಡಿಸಿರುವವರು ನಮ್ಮ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲ. ಮುನೇಗೌಡರು ದೇವನಹಳ್ಳಿ ತಾಲ್ಲೂಕಿನಿಂದ ಕೂಲಿ ಜನರನ್ನು ಕರೆ ತಂದು ಗಲಾಟೆ ಮಾಡಿಸಿದ್ದಾರೆ~ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಗೋವಿಂದರಾಜ್ ಅವರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.