ಕಾರ್ಯಕರ್ತರ ಮೇಲೆ ಹೂವಿನ ಮಳೆ

7

ಕಾರ್ಯಕರ್ತರ ಮೇಲೆ ಹೂವಿನ ಮಳೆ

Published:
Updated:

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ 1,000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದ ಹೈಲೈಟ್ಸ್ ಇಲ್ಲಿದೆ.ಯಾವುದೇ ರಾಜಕೀಯ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ನಾಯಕರ ಮೇಲೆ ಪುಷ್ಪವೃಷ್ಟಿ ಸುರಿಸುವುದು ಸಾಮಾನ್ಯ.ಆದರೆ ಬಿಜೆಪಿಯ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿ ಅವರು ಕಾರ್ಯಕರ್ತರ ಮೇಲೆ ಹೂವಿನ ಮಳೆ ಸುರಿಸಿದರು.ಅರಮನೆ ಮೈದಾನಕ್ಕೆ ವಸಂತ ನಗರದ ಕಡೆ ಇರುವ ಪ್ರವೇಶ ದ್ವಾರದಿಂದ ನಿತಿನ್ ಗಡ್ಕರಿ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮತ್ತಿತರರು ಗಡ್ಕರಿ ಅವರ ಜೊತೆಗಿದ್ದರು.ಈ ಸಂದರ್ಭದಲ್ಲಿ ಗಡ್ಕರಿ ಅವರು ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರ ಮೇಲೆ ಹೂವಿನ ಮಳೆ ಸುರಿಸಿದರು!ಮೆರವಣಿಗೆಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.ಸಾಂಪ್ರದಾಯಿಕ ವಾದ್ಯತಂಡಗಳು ಸಾಥ್ ನೀಡಿದವು.ನಿರಂತರ ಊಟ, ಉಪಹಾರ:ರಾಜ್ಯದ 30 ಜಿಲ್ಲೆಗಳಿಂದ ಅರಮನೆ ಮೈದಾನಕ್ಕೆ ಆಗಮಿಸಿದ್ದ ಪಕ್ಷದ ಕಾರ್ಯಕರ್ತರ ಹಸಿವು ತಣಿಸಲು ಸಮಾವೇಶದ ವೇಳೆ ನಿರಂತರ ಊಟ, ಉಪಾಹಾರ ವಿತರಿಸಲಾಯಿತು.ಬೆಳಿಗ್ಗೆ ಸುಮಾರು 11 ಗಂಟೆಯಿಂದ ಆರಂಭಗೊಂಡ ಊಟ, ಉಪಾಹಾರ ವಿತರಣೆ ಸಮಾವೇಶದುದ್ದಕ್ಕೂ ನಡೆದೇ ಇತ್ತು. ರಾತ್ರಿಯವರೆಗೂ ಊಟೋಪಚಾರದ ವ್ಯವಸ್ಥೆ ಇರುತ್ತದೆ ಎಂದು ಆಯೋಜಕರು ತಿಳಿಸಿದರು.ಸಿದ್ಧಗಂಗಾ, ಆದಿಚುಂಚನಗಿರಿ, ಮಂಜುನಾಥ ಮತ್ತ ಸಿದ್ಧಲಿಂಗ ಹೆಸರಿನ ಊಟದ ಕೌಂಟರ್‌ಗಳನ್ನು ತೆರೆಯಲಾಗಿತ್ತು.‘20 ದಿನಗಳಿಂದ ಸಿದ್ಧತೆ’: ಸಮಾವೇಶಕ್ಕೆ ಸುಮಾರು 5,000 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ಆದರೆ ಸಮಾವೇಶ ವ್ಯವಸ್ಥಿತವಾಗಿ ನಡೆದ ಕಾರಣ ಪೊಲೀಸ್ ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಇರಲಿಲ್ಲ.ಸಮಾವೇಶದ ಯಶಸ್ಸಿಗಾಗಿ ಕಳೆದ 20 ದಿನಗಳಿಂದ ತಯಾರಿ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ‘ಕಮಲದ ಮನೆ’ ವಸ್ತು ಪ್ರದರ್ಶನ ಮತ್ತು ಊಟದ ಕೌಂಟರ್‌ಗಳ ವ್ಯವಸ್ಥೆಯ ಬಗ್ಗೆ ಸಾಕಷ್ಟು ಪೂರ್ವಸಿದ್ಧತೆ ನಡೆಸಲಾಗಿತ್ತು.ಜಗನ್ನಾಥರಾವ್ ಜೋಷಿ ವೇದಿಕೆಯ ಹಿಂಭಾಗದಲ್ಲಿ ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯಲಾಗಿತ್ತು. ಅಲ್ಲಿ ಬಿಬಿಎಂಪಿಯ 15 ಮಂದಿ ವೈದ್ಯರು ಮತ್ತು 45 ಮಂದಿ ಅರೆವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಎಂ.ಎಸ್.ರಾಮಯ್ಯ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮಲ್ಯ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಕರ್ತವ್ಯ ನಿರತರಾಗಿದ್ದರು.ಭಾಷಣಕಾರರ ‘ಸಾಧನೆಗಳ’ ವಿವರ: ಸಮಾವೇಶದಲ್ಲಿ ಬಿಜೆಪಿಯ ಹತ್ತಾರು ಮಂದಿ ನಾಯಕರು ಭಾಷಣ ಮಾಡಿದರು.‘ಜಗನ್ನಾಥರಾವ್ ಜೋಷಿ ವೇದಿಕೆ’ಯಿಂದ ಭಾಷಣ ಮಾಡುವ ಪಕ್ಷದ ನಾಯಕರ ಮುಖ ಪ್ರತಿಯೊಬ್ಬರಿಗೂ ಸರಿಯಾಗಿ ಕಾಣಲಿ ಎಂದು ವೇದಿಕೆಯ ಹಿಂಭಾಗದಲ್ಲಿ ಎಲ್‌ಇಡಿಯ ಬೃಹತ್ ಪರದೆಯನ್ನು ಹಾಕಲಾಗಿತ್ತು.ಭಾಷಣ ಮಾಡುವಾಗ ಆಯಾ ನಾಯಕರ ‘ಸಾಧನೆಗಳ’ ಕಿರು ವಿವರ ಆ ಪರದೆಯ ಮೇಲೆ ಬರುತ್ತಿತ್ತು. ಸಮಾವೇಶ ನಡೆದ ಸ್ಥಳದಲ್ಲಿ ಸುಮಾರು 20 ಎಲ್‌ಇಡಿ ಪರದೆಗಳನ್ನು ಹಾಕಲಾಗಿತ್ತು.ಮೂವತ್ತು ಮಂದಿಯಿಂದ ದೀಪ ಬೆಳಗಿತು: ಸಮಾವೇಶದ ಉದ್ಘಾಟನೆ ಮಾಡಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು. ಈಶ್ವರಪ್ಪ, ಯಡಿಯೂರಪ್ಪ, ಅನಂತ ಕುಮಾರ್ ಅವರ ಜೊತೆಗೂಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಇದೇ ವೇಳೆ, ಪ್ರಧಾನ ದೀಪದ ಕಂಬದ ಇಕ್ಕೆಲಗಳಲ್ಲಿ ಒಟ್ಟು 30 ದೀಪದ ಕಂಬಗಳನ್ನು ಇಡಲಾಗಿತ್ತು. ಗಡ್ಕರಿ ಅವರು ದೀಪ ಹೊತ್ತಿಸುತ್ತಿದ್ದಂತೆಯೇ, 30 ಜಿಲ್ಲೆಗಳನ್ನು ಪ್ರತಿನಿಧಿಸುವ ಬಿಜೆಪಿ ಕಾರ್ಯಕರ್ತರೂ ಏಕಕಾಲದಲ್ಲಿ ದೀಪ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.ಜಿಲ್ಲಾವಾರು ಆಸನ ವ್ಯವಸ್ಥೆ: ಸಮಾವೇಶದ ಸಭಾಂಗಣಕ್ಕೆ ಜನಸಂಘದ ನಾಯಕರಾಗಿದ್ದ ಭಾವೂರಾವ್ ದೇಶಪಾಂಡೆ ಅವರ ಹೆಸರಿಡಲಾಗಿತ್ತು. ಪಕ್ಷದ ಕಾರ್ಯಕರ್ತರಿಗೆ ಸಭಾಂಗಣದಲ್ಲಿ ಜಿಲ್ಲಾವಾರು ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.ಪ್ರತಿ ಜಿಲ್ಲೆಯ ಕಾರ್ಯರ್ತರು ತಮ್ಮ ಜಿಲ್ಲೆಗೆ ಮೀಸಲಾಗಿದ್ದ ಆಸನಗಳಲ್ಲಿ ಕುಳಿತುಕೊಳ್ಳಲು ‘ಪ್ರಬಂಧಕರು’ ನೆರವಾದರು.ಸಮಾವೇಶ ನಡೆದ ಅರಮನೆ ಮೈದಾನದ ಆವರಣಕ್ಕೆ ಜನಸಂಘದ ಅಧ್ಯಕ್ಷರಾಗಿದ್ದ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಪರಿಸರ’ ಎಂದು ಹೆಸರಿಡಲಾಗಿತ್ತು.2000 ಬಸ್: ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 2000 ಬಸ್‌ಗಳಲ್ಲಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry