ಕಾರ್ಯಕರ್ತರ ಶ್ರಮ ಮಣ್ಣುಪಾಲಾಯ್ತಾ...?

7

ಕಾರ್ಯಕರ್ತರ ಶ್ರಮ ಮಣ್ಣುಪಾಲಾಯ್ತಾ...?

Published:
Updated:

ಶಿಕಾರಿಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ 70ರ ದಶಕದಲ್ಲಿ ಪಟ್ಟಣಕ್ಕೆ ಆಗಮಿಸಿ, ಹಲವು ಜನಪರ ಹೋರಾಟದ ಮೂಲಕ ಜನನಾಯಕರಾಗಿ ಆರು ಬಾರಿ ಕ್ಷೇತ್ರದ ಶಾಸಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರ ಆರೋಪಕ್ಕೆ ಜೈಲು ಸೇರಿದರೂ ಜನರು ಸ್ವಯಂ ಪ್ರೇರಿತರಾಗಿ ಬೆಂಬಲಿಸದಂತಹ ಸ್ಥಿತಿಗೆ ಬಂದಿರುವುದು ಅವರ ಇತ್ತೀಚಿನ ರಾಜಕೀಯಕ್ಕೆ ಹಿಡಿದ ಕನ್ನಡಿಯಾಗಿದೆ.ಕೂಲಿಗಾಗಿ ಕಾಳು, ಜೀತ ವಿಮುಕ್ತಿ, ಬಗರ್‌ಹುಕುಂ ಸಾಗುವಳಿ ಪರ ಹೋರಾಟ ಸೇರಿದಂತೆ ಹಲವು ಹೋರಾಟಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಿರಂತರವಾಗಿ 30ವರ್ಷ ಹೋರಾಟದ ಹಾದಿಯಲ್ಲಿ ಸಾಗಿಬಂದ  ಯಡಿಯೂರಪ್ಪ ಮೊದಲ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ತಾಲ್ಲೂಕಿನ ಪ್ರತಿಯೊಂದು ಹಳ್ಳಿಯ ಜನರು ಹಣವನ್ನು ಕೊಟ್ಟು, ಮತವನ್ನೂ ನೀಡುವ ಮೂಲಕ ಗೆಲ್ಲಿಸಿದ್ದರು ಎಂದು ಪಕ್ಷದ ಹಿರಿಯ ಕಾರ್ಯಕರ್ತ ಕೆ.ಟಿ. ಬಾಬುರಾವ್ ನೆನಪಿಸಿಕೊಳ್ಳುತ್ತಾರೆ.ಸರ್ಕಾರದ ನೀತಿಗಳ ವಿರುದ್ಧ ರಸ್ತೆತಡೆ, ಹೋರಾಟ, ನಿರಂತರ ಧರಣಿ, ಸೈಕಲ್ ಯಾತ್ರೆ ಸೇರಿದಂತೆ ಹಲವಾರು ಹೋರಾಟ ನಡೆಸುತ್ತಿದ್ದ ಯಡಿಯೂರಪ್ಪ ವಿರುದ್ಧ ವಿರೋಧಿ ಗಳು ಯಾವುದೇ ರೀತಿಯ ಒತ್ತಡ ತಂತ್ರ ನಡೆಸಿದರೂ ಜನರೇ ಮುಂದೆ ನಿಂತು ಇವರನ್ನು ರಕ್ಷಣೆ ಮಾಡುತ್ತಿದ್ದರು.ಮನೆಗೆ ನುಗ್ಗಿ ಗಲಾಟೆ ಮಾಡುವ ಯತ್ನ ನಡೆದಾಗಲೆಲ್ಲಾ ಪಕ್ಷದ ಕಾರ್ಯಕರ್ತರು ಬದ್ಧವಾಗಿ ನಿಂತು ರಕ್ಷಣೆ ನೀಡಿದ್ದ ಅಂದಿನ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಎಂದು ಎಸ್.ಬಿ. ಮಠದ ಹೇಳುತ್ತಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನ ಹೋರಾಟದ ವೇಳೆ ಪೊಲೀಸರು ಬಂಧನಕ್ಕೆ ಒಳಪಡಿಸಿದ ಸುದ್ದಿ ತಿಳಿಯುತ್ತಲೇ ಪಟ್ಟಣದಲ್ಲಿ ಅಂದು ಸಂತೆ ದಿನವಾದರೂ ಜನರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದ್ದರು.

 

ಸಂತೆ ನಡೆಯದಂತೆ ಕಾರ್ಯಕರ್ತರು ಮನವಿ ಮಾಡಿಕೊಂಡ ಕಾರಣಕ್ಕೆ ಇಡೀ ಸಂತೆಯೇ ನಿಂತಿತು. ಆದರೆ, ಈವರೆಗೆ ಒಮ್ಮೆಯೂ ನ್ಯಾಯಾಂಗ ಬಂಧನಕ್ಕೆ ಒಳಗಾಗದಿದ್ದ ಯಡಿಯೂರಪ್ಪ ಅ. 15ರಂದು ಬಂಧನಕ್ಕೆ ಒಳಗಾದರೂ ಜನರು ತಮ್ಮ ಪಾಡಿಗೆ ಏನೂ ಆಗದವರಂತೆ ಇದ್ದ ಸ್ಥಿತಿ ಇಂದಿನ ಅವರ ರಾಜಕೀಯ ಸ್ಥಿತಿಗೆ ಹಿಡಿದ ಕನ್ನಡಿ.ಅಧಿಕಾರ ಸಿಕ್ಕ ನಂತರದ ದಿನಗಳಲ್ಲಿ ವಿರೋಧ ಪಕ್ಷದ ಮುಖಂಡರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರ ಹಿಡಿದಿದ್ದು ವಿಶೇಷ. ಅವರ ವಿರುದ್ಧ ಸ್ಪರ್ಧೆ ಮಾಡಿದವರಿಗೆ ಜಿ.ಪಂ. ಸ್ಥಾನಮಾನ, ನಿಗಮ ಮಂಡಳಿ ಸ್ಥಾನಗಳು ಸಿಗಲ್ಪಟ್ಟವು, ವಿರೋಧ ಪಕ್ಷದಲ್ಲಿ ಬಿಜೆಪಿ ವಿರುದ್ಧ ಹೋರಾಡಿದವರೇ ಇದೀಗ ಪಕ್ಷದ ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅಕ್ಕಪಕ್ಕದಲ್ಲಿ ನೋಡಲು ಲಭ್ಯವಾಗುವುದೇ ಅವರು ಎನ್ನುವ ಕಾರಣಕ್ಕೆ ಪಕ್ಷದ ಮೂಲ ಕಾರ್ಯಕರ್ತರು ಕ್ರಮೇಣ ಹಿಂದಕ್ಕೆ ಸರಿಯಲ್ಪಟ್ಟರು ಎಂದು ಹಿರಿಯ ಕಾರ್ಯಕರ್ತರು ಹೇಳುತ್ತಾರೆ.ಅಧಿಕಾರ ಸಿಕ್ಕ ನಂತರ ಅಭಿವೃದ್ಧಿಯ ವಿಷಯದಲ್ಲಿ ತಾಲ್ಲೂಕಿನ ಚಿತ್ರಣ ಬದಲಾವಣೆ ಆಗಿದ್ದು, ಕೆಲಸಗಳನ್ನು ಮಾಡಿರುವುದು ಕಣ್ಣಿಗೆ ಕಾಣುತ್ತಿದ್ದರೂ ಜನರು ಮಾತ್ರ ಮೊದಲಿನ ಪ್ರೀತಿ ವಿಶ್ವಾಸ ಉಳಿಸಿಕೊಂಡಿಲ್ಲ. ಎನ್ನುವಂತಹ ಮಾತುಗಳನ್ನಾಡುತ್ತಿದ್ದಾರೆ.ರಾಜ್ಯದ ಉಪ ಮುಖ್ಯಮಂತ್ರಿಯಾದ ನಂತರ ಅವರ ಮನೆಯ ಸಮೀಪದ ಕೆಲ ನಿವೇಶನ, ಶಾಲೆ, ಬೃಹತ್ ಕಟ್ಟಡ, ಕೃಷಿ ಭೂಮಿಗಳ ಸಂಖ್ಯೆ, ವಾಹನಗಳು ವ್ಯಾಪಕವಾಗಿ ಹೆಚ್ಚಾದವು. ಇವುಗಳಿಂದಾಗಿ ಅವರು ಜನಸಾಮಾನ್ಯರೊಂದಿಗಿನ ವರ್ತನೆಗಳೂ ಬದಲಾಗತೊಡಗಿದವು.ಹೊಸೂರು ಸಮೀಪದ ಅವರ ತೋಟದ ಮನೆ, ಚನ್ನಳ್ಳಿ ತೋಟದ ಮನೆಗಳು ಇಂದಿಗೂ ಸಾಮಾನ್ಯರಿಗೆ ಪ್ರವೇಶವಿಲ್ಲ ಎನ್ನುವ ಕಾರಣಕ್ಕೆ ಇತ್ತೀಚೆಗೆ ಜನರು ಹಣ ಸಾಗಿಸುವ ಅನುಮಾನದೊಂದಿಗೆ ರಾತ್ರೋರಾತ್ರಿ ಜನರು ಜಮಾವಣೆ ಆಗಿ ಲಘು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆದಿತ್ತು.ಕ್ಷೇತ್ರದ ಶಾಸಕ  ಯಡಿಯೂರಪ್ಪ ಅವರ ಬಂಧನ ಶನಿವಾರ ನಡೆದಿದ್ದರೂ ಭಾನುವಾರವೂ ಜನರು ತಮ್ಮ ನಾಯಕನ ಪರವಾಗಿ ದುಃಖ ವ್ಯಕ್ತಪಡಿಸಲಿಲ್ಲ. ಬದಲಿಗೆ ಬಿಜೆಪಿ ಮುಖಂಡರು, ಅಧಿಕಾರಿಗಳು, ಪೊಲೀಸರ ಒತ್ತಡದಿಂದಾಗಿ ಸೋಮವಾರ ಬಂದ್ ಆಚರಣೆ ಮಾಡಿದರು. ಕಾಂಗ್ರೆಸ್ ಮುಖಂಡರೂ ಪತ್ರಿಕಾಗೋಷ್ಠಿ ನಡೆಸಿ `ದುಃಖ ಆಚರಣೆಗೆ ದಿನ ನಿಗದಿ~ ಮಾಡುವ ಮೂಲಕ ಬಿಜೆಪಿ ಹಾಸ್ಯಾಸ್ಪದವಾಗಿ ವರ್ತನೆ ಮಾಡುತ್ತಿದೆ ಎಂದು ಲೇವಡಿ ಮಾಡಿದ ಘಟನೆಯೂ ನಡೆಯಿತು.ಮೂರು ದಶಕಗಳ ನಿರಂತರ ಹೋರಾಟ, ಜನರೊಂದಿಗೆ ಬಾಂಧವ್ಯದಿಂದ ಇದ್ದ ಯಡಿಯೂರಪ್ಪ ಕ್ಷೇತ್ರಕ್ಕೆ ಅಧಿಕಾರ ಸಿಕ್ಕ ನಂತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಜನರಿಗೆ ಇನ್ನೂ ಏನು ಮಾಡಬೇಕು? ಎಂದು ಬಿಜೆಪಿಯ ಈಗಿನ ಮುಖಂಡರು ಪ್ರಶ್ನಿಸುತ್ತಾರೆ.

 

ಇನ್ನೊಂದೆಡೆ ಹೋರಾಟದಿಂದ ಪಡೆದ ಯಶಸ್ಸನ್ನು ಕೆಲವೇ ದಿನಗಳ ಅಧಿಕಾರದ ಅವಧಿಯಲ್ಲಿ ಮಣ್ಣುಪಾಲು ಮಾಡುವ ಮೂಲಕ ದಶಕಗಳ ಕಾರ್ಯಕರ್ತರ ಶ್ರಮ ಮಣ್ಣುಪಾಲು ಮಾಡಿದ್ದಾರೆ ಎಂದು ಪಕ್ಷದ ನಿಷ್ಠಾವಂತರು ಮಾತನಾಡಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry