ಕಾರ್ಯದರ್ಶಿ ಅಸಹಕಾರ, ಅನಾದರ : ಆರೋಪ

7
ಮಹಾಲಿಂಗಪುರ ಎಪಿಎಂಸಿ; ಸಾಮಾನ್ಯ ಸಭೆ ಮೊಟಕು

ಕಾರ್ಯದರ್ಶಿ ಅಸಹಕಾರ, ಅನಾದರ : ಆರೋಪ

Published:
Updated:

ಮಹಾಲಿಂಗಪುರ: ಪ್ರತಿ ತಿಂಗಳ ಸಾಮಾನ್ಯ ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ನಿರ್ದೇಶಕರ ಸಲಹೆ ಸೂಚನೆಗಳಿಗೆ ಅನಾದರ ತೋರುತ್ತಿದ್ದು ಯಾವುದೇ ನಿರ್ಣಯಗಳನ್ನು ಸರಿಯಾಗಿ ಜಾರಿಗೆ ತರುತ್ತಿಲ್ಲ, ಕಾರಣಗಳನ್ನು ಕೇಳಿದರೆ ತಮ್ಮ ವಾಕ್‌ಚಾತುರ್ಯದಿಂದ ನಿರ್ದೇಶಕರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ತಾವೇ ಪ್ರಶ್ನೆಗಳನ್ನು ಹುಟ್ಟುಹಾಕಿ ತಮಗೆ ತೋಚಿದ ಉತ್ತರ ಹೇಳಿ ತಮ್ಮ ಜಾಣ್ಮೆ ಪ್ರದರ್ಶನ ಮಾಡಿ ಎಲ್ಲದಕ್ಕೂ ಅಸಹಕಾರ ತೋರುತ್ತಾರೆ ಎಂಬ ಆರೋಪ ಮಾಡಿ ಬುಧವಾರ ನಡೆದ ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ಜರುಗಿತು.ಎಪಿಎಂಸಿ ಅಧ್ಯಕ್ಷ ಲೋಕಣ್ಣ ಕತ್ತಿ ಅಧ್ಯಕ್ಷತೆ ವಹಿಸಿದ್ದ ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ನಡೆದು ಭಾಗವಹಿಸಿದ್ದ ನಿರ್ದೇಶಕರೆಲ್ಲ ಸಭೆಯಿಂದ ಹೊನಡೆದರು. ಅದಕ್ಕೂ ಮುನ್ನ ಸಭೆಯ ಆರಂಭದಲ್ಲಿ ಮಾಜಿ ಅಧ್ಯಕ್ಷ ಎಂ.ಎಲ್. ಮಾಚಕನೂರ ಮಾತನಾಡಿ ಮಹಾಲಿಂಗಪುರ, ಮುಧೋಳ ಹಾಗೂ ಲೋಕಾಪುರ ವ್ಯಾಪ್ತಿಯಲ್ಲಿರುವ ಎಪಿಎಂಸಿ ಒಡೆತನದ ಲೇಔಟ್ ಮಾಡಿಸಿಲ್ಲ, ರೂ15 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಮಂಜೂರಾಗಿದ್ದರೂ ಕೆಲಸ ಪ್ರಾರಂಭವಾಗಿಲ್ಲ.ಗೃಹ ರಕ್ಷಕ ಸಿಬ್ಬಂದಿಯ ವೇತನವನ್ನು 4000 ದಿಂದ 5000ಕ್ಕೆ ಏರಿಸಬೇಕು ಎಂಬ ಹಳೆಯ ನಿರ್ಣಯಗಳು ಇನ್ನೂ ಜಾರಿಯಾಗದೇ ಇರುವುದು ಹಾಗೂ ತಾವು ರೈತರ ಸಹಕಾರದಿಂದ ಮೂರು ವರ್ಷದ ಹಿಂದೆ ಆಯ್ಕೆಗೊಂಡು ಬಂದಿದ್ದರೂ ರೈತರ ಪರವಾದ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು ಕಾರ್ಯದರ್ಶಿಗಳ ಅಸಹಕಾರ ತೋರಿಸುತ್ತದೆ. ಇದರಿಂದಾಗಿ ರೈತರಿಗೆ ಮುಖ ತೋರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರ್ದೇಶಕ ಮಾರುತಿ ಹವಾಲ್ದಾರ, ಪಟ್ಟಣದ ಹೊರವಲಯದಲ್ಲಿ ನಡೆಯುವ ಕಾಳು ಕಡಿಯ ವ್ಯವಹಾರವನ್ನು ಸ್ಥಗಿತಗೊಳಿಸಿ ಎಪಿಎಂಸಿಯ ಅಧಿಕೃತ ಮಾರುಕಟ್ಟೆಯ ಆವರಣದಲ್ಲಿ ವ್ಯಾಪಾರ ನಡೆಸುವಂತೆ ಆದೇಶಿಸಲು ತಿಳಿಸಿ ವರ್ಷಗಳೇ ಕಳೆದರೂ ಇನ್ನೂ ಯಾವ ಕ್ರಮವನ್ನೂ ಕೈಗೊಂಡಿಲ್ಲ, ಇದರಿಂದಾಗಿ ರೈತರಿಗೆ ತೂಕದಲ್ಲಿ ಮೋಸ ನಡೆಯುತ್ತಿದ್ದು ಪ್ರತಿ 100ಕ್ಕೆ ರೂ1ರಂತೆ ಒಟಾವೋ ಹೆಸರಿನಲ್ಲಿ ವ್ಯಾಪಾರಸ್ಥರ ಸುಲಿಗೆ ನಡೆಯುತ್ತದೆ ಇದೆಲ್ಲ ಗೊತ್ತಿದ್ದೂ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ನಡೆಯುವವರೆಗೆ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ನಿರ್ದೇಶಕರ ಮಾತಿಗೆ ಮನ್ನಣೆ ನೀಡುವವರೆಗೆ ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆಯನ್ನು ರದ್ದುಗೊಳಿಸಬೇಕು ಎಂದು ಹಿಂದಿನ ಅಧ್ಯಕ್ಷ ಮಾಚಕನೂರ ಸಭೆಯಲ್ಲಿ ಹೇಳಿದ್ದರಿಂದ ಉಳಿದ ನಿರ್ದೇಶಕರು ಅವರ ಮಾತಿಗೆ ಸ್ಪಂದಿಸಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.ಸಭೆಯ ರದ್ದತಿ ನಂತರ ಮಾಚಕನೂರ ಮಾಧ್ಯಮದವರೊಡನೆ ಮಾತನಾಡಿ, `ಕಾರ್ಯದರ್ಶಿಗಳು ನಿರ್ದೇಶಕರ ಯಾವ ಮಾತಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವುದೇ ಕೆಲಸದ ಕುರಿತು ಪ್ರಶ್ನಿಸಿದರೂ ತಾಂತ್ರಿಕ ದೋಷ, ಸರಕಾರಿ ನಿಯಮಾವಳಿ ಕಾರಣಗಳನ್ನು ಹೇಳಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ, ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವಾಗುವವರೆಗೆ ಸಾಮಾನ್ಯ ಸಭೆಗೆ ಹಾಜರಾಗುವುದಿಲ್ಲ' ಎಂದು ಹೇಳಿದರು.ಉಪಾಧ್ಯಕ್ಷ ಎಸ್.ವೈ. ಕಾಂಬಳೆ, ಕಾರ್ಯದರ್ಶಿ ಎಚ್.ಎ. ಪುರಾಣಿಕ, ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ, ಹನಮಂತ ತುಳಸೀಗೇರಿ, ಬಾಳಪ್ಪ ಜಗದಾಳ, ಎ.ಆರ್. ಚೌರಡ್ಡಿ, ವಿ.ಪಿ. ಚಂದನಶಿವ, ಎಸ್.ಬಿ. ನ್ಯಾಮಗೌಡರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry