ಕಾರ್ಯದರ್ಶಿ ಪಿಂಚಣಿ ತಡೆಹಿಡಿಯಲು ಜಿಲ್ಲಾಧಿಕಾರಿ ಆದೇಶ

7

ಕಾರ್ಯದರ್ಶಿ ಪಿಂಚಣಿ ತಡೆಹಿಡಿಯಲು ಜಿಲ್ಲಾಧಿಕಾರಿ ಆದೇಶ

Published:
Updated:

ಕುಮಟಾ: ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆಸಿದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸೇವೆಯಿಂದ ನಿವೃತ್ತರಾದರೂ ಅವರ  ನಿವೃತ್ತಿ ವೇತನ ತಡೆಹಿಡಿಯುವ ಬಗ್ಗೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಆದೇಶಿಸಿದರು.ತಾಲ್ಲೂಕಿನ ಕೋನಳ್ಳಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿಯಲ್ಲಿ  ಇನ್ನು ಮುಂದೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಡ್‌ಗಳು ಸಮರ್ಪಕವಾಗಿಯೇ  ಎಂದು ಮೊದಲು ಖಾತ್ರಿಪಡಿಸಿಕೊಳ್ಳಿ ಎಂದು ಕಾರ್ಯದರ್ಶಿ ದೇವಪ್ಪ ನಾಯ್ಕ ಅವರಿಗೆ ಸೂಚಿಸಿದರು.‘ಮೊನ್ನೆ ಈ ಭಾಗದಲ್ಲಿ ಉದ್ಯೋಗ ಖಾತರಿ ಕಾಮಗಾರಿಗಳ ಅವ್ಯಹಾರ ತನಿಖೆ ನಡೆಸಿದ ಜಿ.ಪಂ. ಅಧಿಕಾರಿ ಜೆ.ಕೆ. ಹೆಗಡೆ ನೇತೃತ್ವದ ತಂಡ ಪಂಚಾಯಿತಿ ಕಾರ್ಯದರ್ಶಿಯವರೊಬ್ಬರಿಂದಲೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ ಎಂದು ತಪ್ಪಿತಸ್ಥರನ್ನು ರಕ್ಷಿಸುವ ರೀತಿಯಲ್ಲಿ ವರದಿ ನೀಡಿದ್ದಾರೆ’ ಎಂದು ಭಾಸ್ಕರ ನಾಯ್ಕ ದೂರಿದರು.‘ತಾನು ಕಳೆದ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಗೇಣಿ ಜಮೀನನ್ನು ಮಾರಾಟ ಮಾಡಲು ಹಿಂದಿನ  ತಹಸೀಲ್ದಾರ ಭಾಗ್ವತ ಎನ್ನುವವರು ಶಿಫಾರಸು ಮಾಡಿದ್ದಾರೆ’ ಎಂದು ಶಿಣ್ಣು ರಾಮ ನಾಯ್ಕ ಎನ್ನುವವರು ಆಕ್ಷೇಪಿಸಿದರು. ಅದಕ್ಕೆ ಜಿಲ್ಲಾಧಿಕಾರಿ ‘ಬುಧವಾರ ಕುಮಟಾ ಸಹಾಯಕ ಕಮಿಶನರ್ ಕಚೇರಿಯಲ್ಲಿ ನಡೆಯುವ ಭೂ ನ್ಯಾಯ ಮಂಡಳಿ ಸಭೆ ಸಂದರ್ಭದಲ್ಲಿ   ಸಹಾಯಕ ಕಮಿಶನರ್ ಗಮನ ಸೆಳೆಯಿರಿ ಎಂದು’ ಸಲಹೆ ನೀಡಿದರು.‘ಈ ಭಾಗದಲ್ಲಿ ಹರಿವ ಬಡಗಣಿ ಹೊಳೆಯ ಪ್ರವಾಹ ಕೃಷಿ ಜಮೀನಿನ ಮೇಲೆ ಹರಿದು ಭತ್ತದ ಬೆಳೆ ನಾಶವಾಗುತ್ತದೆ. ಹೊಳೆಯಲ್ಲಿ ಹೂಳೆತ್ತುವ ಕರ್ಯ  ಕೈಕೊಳ್ಳಬೇಕು’ ಎಂದು ವಿಶ್ವನಾಥ ನಾಯ್ಕ ತಿಳಿಸಿದರು. ಭಾಸ್ಕರ್ ನಾಯ್ಕ ಎನ್ನುವವರು ‘ಈ ಸಮಸ್ಯೆಗೆ ಚಿಕ್ಕ ನೀರಾವರಿ ಇಲಾಖೆಯಿಂದ 21 ಲಕ್ಷ ರೂ., ಉದ್ಯೋಗ ಖಾತರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಅದರೆ ಕೆಲಸ ಮಾತ್ರ ಆಗಿಲ್ಲ’ ಎಂದರು. ಊರಿನ ನಾಗರಿಕರು, ಜನಪ್ರತಿನಿಧಿಗಳಾದ ನೀವೂ ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದ ಜಿಲ್ಲಾಧಿಕಾರಿ ಹೊಳೆಯಲ್ಲಿ ಹೂಳೆತ್ತಿ ಅಗತ್ಯವಿದ್ದರೆ  ಬಾಂದಾರು ನಿರ್ಮಿಸುವಂತೆ ಚಿಕ್ಕ ನೀರಾವರಿ ಇಲಾಖೆಗೆ ಸೂಚಿಸಿದರು.‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರವಾಗಿದ್ದರೆ ಅದನ್ನೂ ತನಿಖೆ ನಡೆಸಲಾಗುವುದು’ ಎಂದರು. ಹರಿಜನ ಕಾಲೋನಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಬೇಡಿಕೆ ಬಂದಾಗ ಕಾರ್ಯನಿರ್ವಾಹಕ ಅಧಿಕಾರಿ ಎಂ ಎಸ್ ಮೇಟಿ, ‘ತಾ.ಪಂ. ವತಿಯಿಂದ ಹರಿಜನ ಕೇರಿಗೆ ಶೌಚಾಲಯ ನಿರ್ಮಿಸಿಕೊಡಲಾಗವುದು. ಗ್ರಾ.ಪಂ.ನಿಂದ ವರಾಂಡ ನಿರ್ಮಿಸಿಕೊಡಿ’ ಎಂದು ಸೂಚಿಸಿದರು. ಹಿರೇಕಟ್ಟು ಭಾಗದಲ್ಲಿ ಮಳೆಗಾಲದ ಪ್ರವಾಹ ಸಂದರ್ಭದಲ್ಲಿ ಅನುಕೂಲವಾಗುವಂತೆ ದೋಣಿ ಹಗೂ ಹಗ್ಗ ಮಂಜೂರಿ ಮಾಡುವಂತೆ ಸದಸ್ಯೆ ಮಹಾದೇವಿ ನಾಯ್ಕ ಆಗ್ರಹಿಸಿದರು.ಅರಣ್ಯ ಇಲಾಖೆ ಜಾಗದಲ್ಲಿ ಕ್ರೀಡಾ ಕೋಣೆ ನಿರ್ಮಿಸಲು ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದಾಗ  ಆರ್‌ಎಫ್‌ಓ ವೀರಪ್ಪ ಗೌಡ, ಆಶ್ರಯ ಮನೆಗಳಿಗೆ ಹಾಗೂ ಇಂಥ ಉದ್ದೇಶಗಳಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು. ‘ಕೃಷಿ ಇಲಾಖೆಯಿಂದ ನೀಡಿದ ಪ್ರಮಾಣಿಕೃತ ಬಿತ್ತನೆ ಬೀಜದ ಸಸಿಗಳು ಬೆಂಕಿ ರೋಗಕ್ಕೆ ತುತ್ತಾಗಿ ಹಾನಿಯುಂಟಾಗಿದೆ’  ಎಂದು ಮಹಾದೇವ ಶಿಣ್ಣು ನಾಯ್ಕ ತಿಳಿಸಿದರು. ‘ಬಡಗಣಿ ಹೊಳೆಗೆ ಸಂಪರ್ಕ ರಸ್ತೆ ಕಲ್ಪಿಸಿದರೆ ಮಳೆಗಾಲದ ಪ್ರವಾಹದಲ್ಲಿ ಜನರನ್ನು ಅಪಾಯದಿಂದ ಪಾರು ಮಾಡುವುದು ಸುಲಭವಾಗುತ್ತದೆ’ ಎಂದು ಗೋವಿಂದ ನಾಯ್ಕ ಸೂಚಿಸಿದರು. ಶಿರಸ್ತೇದಾರ ಎಚ್.ಎಸ್. ನಾಯ್ಕ ಸ್ವಾಗತಿಸಿದರು. ಸಹಾಯಕ ಕಮಿಶನರ್ ಡಾ. ನವೀನ ಕುಮಾರ್‌ರಾಜ್ ಎಸ್. ವಂದಿಸಿದರು. ಸದಸ್ಯರುಗಳಾದ ಎಸ್. ಮಾದೇವಿ ನಾಯ್ಕ, ಗೌರಿ ಮುಕ್ರಿ, ಗಣಪಿ ಮುಕ್ರಿ, ಅಧ್ಯಕ್ಷ ರೆಹಮಾನ್ ಥಾಮಸ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಂಜಿನಿಯರ್ ರಾಮದಾಸ್ ಪಾಲ್ಗೊಂಡಿದ್ದರು. ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry