ಬುಧವಾರ, ಜೂನ್ 23, 2021
22 °C

ಕಾರ್ಯಪ್ಪ ನಿವಾಸ ಸ್ಮಾರಕವಾದೀತೆ?

ಪ್ರಜಾವಾಣಿ ವಾರ್ತೆ/ ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಶನಿವಾರಸಂತೆಯಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯ ಶಾಖೆ ಇದೆ. ಇದರ ಮುಂಭಾಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯ ಎಂಬ ನಾಮಫಲಕವನ್ನು ತೂಗು ಹಾಕಲಾಗಿದೆ.

 

ಈ ಗ್ರಂಥಾಲಯದ ಉಪಯೋಗ ಪಡೆದವರೆಷ್ಟು ಮಂದಿ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ಈ ಗ್ರಂಥಾಲಯ ಪೂರ್ವಾಶ್ರಮದಲ್ಲಿ ಏನಾಗಿತ್ತು ಎಂಬುದು ಆಸಕ್ತಿದಾಯಕ ವಿಷಯ ಆಗಿದೆ.1999ರಲ್ಲಿ ದಿವಂಗತ ಜೆ.ಎಚ್.ಪಟೇಲರು ಉದ್ಘಾಟಿಸಿದ ಈಗಿನ ಗ್ರಂಥಾಲಯದ ಕಟ್ಟಡದ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಗ್ರಂಥಾಲಯವೆನಿಸುವ ಮುನ್ನ ಅದೊಂದು ನಾಡ ಕಚೇರಿಯಾಗಿತ್ತು.ಅದಕ್ಕೂ ಹಿಂದೆ ಭಾರತದ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಜನಿಸಿದ ಮನೆಯಾಗಿತ್ತು.1900 ಜನವರಿ 28ರಂದು ಶನಿವಾರಸಂತೆಯ ಈ ಪುಟ್ಟ ಮನೆಯಲ್ಲಿ ಹುಟ್ಟಿದ ಕಾರ್ಯಪ್ಪ ಇಪ್ಪತ್ತನೇ ಶತಮಾನದೊಂದಿಗೆ ಬೆಳೆದರು. ರೆವಿನ್ಯೂ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕೊಡಂದೇರ ಮಾದಪ್ಪ ಅವರ ಆರು ಮಕ್ಕಳಲ್ಲಿ ಕಾರ್ಯಪ್ಪನವರು 2ನೇಯವರು. ವೀರಯೋಧ ಕಾರ್ಯಪ್ಪ ಜನಿಸಿದ ಈ ಊರು, ಈ ಜಿಲ್ಲೆ ಅವರ ಸಾಧನೆಯಿಂದಾಗಿ ಇಂದು ವಿಶ್ವದ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದು ಶನಿವಾರಸಂತೆಯ ಜನತೆ ಹೆಮ್ಮೆ ಪಡುತ್ತಾರೆ.ಕಾರ್ಯಪ್ಪನವರು ಜನಿಸಿದ ಮನೆಯ ಬಗ್ಗೆ ಇಲ್ಲಿನ ನಾಗರಿಕರಲ್ಲಿ ಭಿನ್ನಾಭಿಪ್ರಾಯವಿದೆ. ಕೆಲವರು ಇದು ಗ್ರಂಥಾಲಯವಾಗಿಯೇ ಉಳಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಜನರಲ್ ಕಾರ್ಯಪ್ಪ ಜನಿಸಿದ ಮನೆಯಾದ ಕಾರಣ ಆ ನೆನಪಿಗಾಗಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮೂಲಕ ಸ್ಮಾರಕವಾಗಿಸ ಬೇಕೆಂಬ ಅಭಿಪ್ರಾಯವನ್ನು ಹೊರಗೆಡವುತ್ತಾರೆ. ದೇಶ ಕಂಡ ಈ ಮಹಾ ಸೇನಾನಿಯು ಜನಿಸಿದ ಮನೆಯನ್ನು ಹಾಳುಗೆಡವಲು ಬಿಡುವುದು ಸೂಕ್ತವಲ್ಲ ಎಂಬ ಭಾವನೆಯೂ ವ್ಯಕ್ತವಾಗಿದೆ.ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು, ಗ್ರಂಥಾಲಯ ವಾಗಿರುವ ಕಾರ್ಯಪ್ಪನವರ ಹುಟ್ಟಿದ ಮನೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಚಾರ ನಾಗರಿಕರನ್ನು ಚಿಂತನೆಗೆ ಹಚ್ಚಿದೆ.ಗ್ರಂಥಾಲಯವಾಗಿರುವ ಈ ಮನೆ ಇಂದು ಹಾಳು ಬೀಳುವ ಸ್ಥಿತಿಯಲ್ಲಿದೆ. ಮನೆಯ ಛಾವಣಿಗೆ ಗೆದ್ದಲು ಹಿಡಿದಿದೆ. ಕಾಲವಶವಾಗಿರುವ ಈ ಊರಿನ ಕೆಲವು ಗಣ್ಯರು ಹಿಂದೆಯೇ ಈ ಮನೆಯನ್ನು ಸ್ಮಾರಕವಾಗಿಸುವ, ಮುಂಭಾಗದಲ್ಲಿ ಕಾರ್ಯಪ್ಪ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಯೋಜನೆ ರೂಪಿಸಿದ್ದರು. ಅಲ್ಲದೇ ಇಲ್ಲಿನ ಮುಖ್ಯರಸ್ತೆಗೆ   ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆ ಎಂದೂ ನಾಮಕರಣ ಮಾಡಲಾಗಿತ್ತು. ದುರದೃಷ್ಟವೆಂದರೆ ಈ ರಸ್ತೆ ಮುಖ್ಯರಸ್ತೆ ಎಂದೇ ಇಂದೂ ಚಾಲ್ತಿಯಲ್ಲಿದೆ. ಈ ಮನೆ ಕಾರ್ಯಪ್ಪ ಅವರ ಪ್ರತಿಮೆಯ ಪ್ರತಿಷ್ಠಾಪನೆಯೊಂದಿಗೆ ಸ್ಮಾರಕವಾದರೆ ಈ ಊರೂ ಒಂದು ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಲ್ಪ ಡುತ್ತದೆ ಎಂದು ಕೆಲ ಹಿರಿಯರು ಅಭಿಮಾನದಿಂದ ಹೇಳುತ್ತಾರೆ.ಫೆ. 10ರಂದು ಶನಿವಾರಸಂತೆಯಲ್ಲಿ ನಡೆಯಲಿರುವ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನುಡಿ-ನಮನ” ಕಾರ್ಯಕ್ರಮ ಕಾರ್ಯಪ್ಪ ಜನಿಸಿದ ಮನೆಯನ್ನು ಸ್ಮಾರಕವಾಗಿಸೀತೆ ...? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ವಿಚಾರವಾಗಿ ಸರ್ಕಾರದ, ಜಿಲ್ಲಾ ಡಳಿತದ ಗಮನ ಸೆಳೆದು ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಶೀಘ್ರವೇ ತೀವ್ರ ಕಾರ್ಯತತ್ಪರವಾಗಬೇಕು ಎಂಬುದಾಗಿ ನಾಗರಿಕರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.