ಶುಕ್ರವಾರ, ಮೇ 14, 2021
31 °C

ಕಾರ್ಯಶೈಲಿ ಬದಲಾವಣೆಗೆ ಡಿಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನೂತನ ಸರ್ಕಾರದ ಆಶಯಕ್ಕನುಗುಣವಾಗಿ ಅಧಿಕಾರಿಗಳು ತಮ್ಮ ಕಾರ್ಯಶೈಲಿ ಬದಲಾಯಿಸಿಕೊಂಡು ಆಡಳಿತದಲ್ಲಿ ವೇಗ, ನಿಖರತೆ, ಪಾರದರ್ಶಕತೆ ಮೂಲಕ ಗ್ರಾಮದಿಂದ ಜಿಲ್ಲಾ ಹಂತದವರೆಗೆ ಗುಣಾತ್ಮಕ ಬದಲಾವಣೆಯ ಮೂಲಕ ಜನಸ್ನೇಹಿ ಆಡಳಿತಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ನೂತನ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ, ಆಡಳಿತದಲ್ಲಿ ತ್ವರಿತ ಬದಲಾವಣೆ ತರಲು ಅಪೇಕ್ಷಿಸಿದ್ದಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು. ಹೋಬಳಿ ಮಟ್ಟದಲ್ಲಿ ಅದಾಲತ್ ನಡೆಸಿ, ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿಬೇಕು. ಪ್ರತಿ ಸೋಮವಾರ ಕಚೇರಿಯಲ್ಲಿ ಕಡ್ಡಾಯವಾಗಿ ಕುಳಿತು ಸಾರ್ವಜನಿಕರ ಸಂದರ್ಶನಕ್ಕೆ ಸಮಯ ಮೀಸಲಿರಿಸಬೇಕು. ಗ್ರಾಮ ಸಭೆಗಳನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ವೆಬ್‌ಕಾಸ್ಟಿಂಗ್ ಮೂಲಕ ಸಾರ್ವಜನಿಕವಾಗಿ ಗ್ರಾಮ ಸಭೆ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್ ಮಾತನಾಡಿ, ಅಧಿಕಾರಿಗಳು ನಿಯಮಿತವಾಗಿ ಕೆಳ ಹಂತದ ಕಚೇರಿಗೆ ಭೇಟಿ ನೀಡಬೇಕು. ಆಡಳಿತದ ಲೋಪದೋಷಗಳನ್ನು ಸರಿಪಡಿಸಿ ಮಾರ್ಗದರ್ಶನ ಮಾಡಬೇಕು. ತಮ್ಮ ಇಲಾಖೆಯ ಆದ್ಯತಾ ವಲಯಗಳನ್ನು ಗುರುತಿಸಿಕೊಂಡು ಗ್ರಾಮ ಸಭೆಗಳನ್ನು ಸರಿಯಾಗಿ ನಡೆಸಿ, ಕೇವಲ ಪಿಡಿಒಗಳ ಮೇಲೆ ಗ್ರಾಮ ಸಭೆಗಳನ್ನು ಬಿಡುವುದು ಬೇಡ. ತಾವು ಕಡ್ಡಾಯವಾಗಿ ಗ್ರಾಮ ಸಭೆಗೆ ಹಾಜರಾಗಬೇಕು. ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದರು. ಕೃಷಿ ಇಲಾಖೆ ು ಬೀಜ ಗೊಬ್ಬರದ ಕೊರತೆ ಇಲ್ಲ ಎಂದು ಈಗಾಗಲೇ ಹೇಳಿದೆ. ಈ ಕುರಿತಂತೆ ಸಮರ್ಪಕ ಬೀಜ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕು. ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ಹಾನಿ ಕುರಿತಂತೆ ಸಬ್ಸಿಡಿಯನ್ನು ಸರ್ಕಾರ ಕೃಷಿ ಇಲಾಖೆಗೆ 9.5 ಕೋಟಿ ರೂಪಾಯಿ ಹಾಗೂ ತೋಟಗಾರಿಕೆ ಇಲಾಖೆಗೆ 3.5 ಕೋಟಿ ರೂಪಾಯಿ ಸೇರಿದಂತೆ 13 ಕೋಟಿ ರೂಪಾಯಿಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಿದ್ದು, 3 ದಿನಗಳೊಳಗೆ ಎಲ್ಲ ರೈತರಿಗೆ ವಿತರಣೆಯಾಗಬೇಕು. ಈ ಕುರಿತಂತೆ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದರು.ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿ ಗಳಲ್ಲಿ ಪಾರದರ್ಶಕತೆ ಕಾಪಾಡಿ. ಈ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಯ ಆರಂಭದ ದಿನವೇ ಯೋಜನೆಯ ವೆಚ್ಚ, ಗುತ್ತಿಗೆದಾರ ಅವಧಿ ಕುರಿತಂತೆ ಕಡ್ಡಾಯವಾಗಿ ನಾಮಫಲಕ ಪ್ರದರ್ಶಿಸಿ.  ಎಂದು ಸಿಇಒ ಗುತ್ತಿ ಜಂಬುನಾಥ್ ಸೂಚಿಸಿದರು. ಡೆಂಗೆ ಬಗ್ಗೆ  ಕ್ರಮ ಕೈಗೊಳ್ಳಬೇಕು. ಗ್ರಾಮ ಸ್ವಚ್ಛತೆಗೆ ಈಗಾಗಲೇ ಗ್ರಾಮ ನೈರ್ಮಲ್ಯದಡಿ ಹಣ ಬಿಡುಗಡೆ ಮಾಡಲಾಗಿದೆ, ತ್ವರಿತವಾಗಿ ಕ್ರಮ ಕೈಗೊಳ್ಳಲು ಗ್ರಾಮ ಪಿಡಿಒಗಳಿಗೆ ಸೂಚಿಸಿ ಎಂದು ಸಿಇಒ ಹೇಳಿದರು. ಹೆಚ್ಚುವರಿ ಜಿಲ್ಲಾಧಿ ಕಾರಿ ಜೆ.ಸಿದ್ದಪ್ಪ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಡಾ. ಬೂದೆಪ್ಪ, ಇಂಡಿ ಉಪ ವಿಭಾಗಾಧಿಕಾರಿ ಶಿವಕುಮಾರ, ಗಂಗೂಬಾಯಿ ಮಾನಕರ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.