ಕಾರ್ಲಾಂಡ್ ದುರಸ್ತಿ, ಸೇತುವೆಗೆ ಮನವಿ

7

ಕಾರ್ಲಾಂಡ್ ದುರಸ್ತಿ, ಸೇತುವೆಗೆ ಮನವಿ

Published:
Updated:

ಕುಮಟಾ: ಪಟ್ಟಣದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಮಂಗಳವಾರ ತಾಲ್ಲೂಕಿನ ಮೂರೂರಿನಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ನೀಡಿದರು.`ಕುಮಟಾದಲ್ಲಿ ಯಾವುದೇ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದರಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆದ್ಯತೆ ನೀಡಬೇಕಾಗಿದೆ. ಜಿಲ್ಲೆಯ್ಲ್ಲಲಿಯೇ ಮಧ್ಯವರ್ತಿ ಸ್ಥಳವಾಗಿರುವ ಕುಮಟಾದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೂ ಸರಕಾರ ಮುಂದಾಗಬೇಕು.

ತಾಲ್ಲೂಕಿನ ಅತ್ಯಂತ ಹಿಂದುಳಿದ ಪಂಚಾಯಿತಿಗಳಾದ ಸಂತೆಗುಳಿ, ಸೊಪ್ಪಿನಹೊಸಳ್ಳಿ ವ್ಯಾಪ್ತಿಯ ಕಂದಳ್ಳಿ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ  ಏತ ನೀರಾವರಿ ಯೋಜನೆ ಮೂಲಕ ಅಘನಾಶಿನಿ ನದಿಯ ನೀರು ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರ ಪುನರುಜ್ಜೀವನಕ್ಕೆ ಆದ್ಯತೆ ನೀಡಬೇಕು.

ಕುಮಟಾದ ಬರ್ಗಿ, ಹಿರೇಗುತ್ತಿ, ಮಿರ್ಜಾನ, ಹೆಗಡೆ, ಬಾಡ, ಕಾಗಾಲ, ಕಲಭಾಗ, ಹೆಗಡೆ ಮುಂತಾದ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಿಗೆ ಮರಾಕಲ್ ಯೋಜನೆಯ ಮಾದರಿಯಲ್ಲಿ ಕುಡಿಯುವ ನೀರು ಯೋಜನೆ ಮಂಜೂರಿ ಮಾಡಬೇಕು.

ಹಿಂದೆ ದಿ. ರಾಮಕೃಷ್ಣ ಹೆಗಡೆ ಅವರು ಹಣಕಾಸು ಮಂತ್ರಿಗಳಾಗಿದ್ದಾಗ ಗಜನಿ ಕೃಷಿ ಭೂಮಿಗಳಲ್ಲಿ ಕೃಷಿ ಸಾಧ್ಯತೆ ಹೆಚ್ಚಿಸಲು ಜಾರಿಗೆ ತಂದ ಪ್ರತಿಷ್ಠಿತ ಕಾರ್ಲಾಂಡ್ ಯೋಜನೆಯ ದುರಸ್ತಿಗೆ ಸರಕಾರ ಹಣ ಬಿಡುಗಡೆ ಮಾಡಬೇಕು' ಎಂದು ಮುಖ್ಯಮಂತ್ರಿಗಳಿಗೆ ನೀಡಲಾದ ಮನವಿಯಲ್ಲಿ ತಿಳಿಸಲಾಗಿದೆ.ಹೊನ್ನಾವರ-ಕತಗಾಲ ರಸ್ತೆಯನ್ನು ಸಂಚಾರಕ್ಕೆ ಬಳಕೆ ಮಾಡಿಕೊಂಡು ಜನರಿಗೆ ಅನುಕೂಲ  ಕಲ್ಪಿಸುವ ಉದ್ದೇಶದಿಂದ ಬೊಗರಿಬೈಲ- ಉಪ್ಪಿನಪಟ್ಟಣ ಧಕ್ಕೆ ನಡುವೆ ಅಘನಾಶಿನಿ ನದಿಗೆ ಸೇತುವೆ ನಿರ್ಮಾಣ ಹಾಗೂ ಸ್ಥಳೀಯ ರಸ್ತೆ ಸೌಲಭ್ಯಗಳ ಬಗ್ಗೆಯೂ ಸ್ಥಳೀಯರಾದ ಜಿ.ಎಸ್.ಹೆಗಡೆ, ಜಿ.ಜಿ.ನಾಯ್ಕ, ಎಸ್.ಎಂ.ಭಟ್ಟ ಅನಂತ ನಾಯ್ಕ, ಜಯಂತ ನಾಯ್ಕ ಅವರು ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಡೆಕೋಡಿಯ ಶಾಲೆ, ಜನವಸತಿ ಹಾಗೂ ಕೃಷಿ ಭೂಮಿ ಇರುವಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ  ಟೋಲ್ ಗೇಟ್ ಅನ್ನು ನಿರ್ಜನ ಪ್ರದೇಶದತ್ತ ವರ್ಗಾಯಿಸುವ ಬಗ್ಗೆ ಸ್ಥಳೀರಾದ ನಿವೃತ್ತ ಅಧ್ಯಾಪಕ ಎಸ್.ಎಚ್.ನಾಯ್ಕ, ಎಂ. ಎಸ್.ಭಟ್ಟ ಹಾಗೂ ಶ್ರೀಧರ ನಾಗಾ ಭಟ್ಟ ಮೊದಲಾದವರು ದಾಖಲೆಗಳೊಂದಿಗೆ  ಮನವಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry