ಕಾರ್ಲ್‌ಟನ್ ಟವರ್ಸ್ ದುರಂತ : ಇನ್ನೂ ಸಿಗದ ಘೋಷಿತ ಪರಿಹಾರ!

7

ಕಾರ್ಲ್‌ಟನ್ ಟವರ್ಸ್ ದುರಂತ : ಇನ್ನೂ ಸಿಗದ ಘೋಷಿತ ಪರಿಹಾರ!

Published:
Updated:

ಬೆಂಗಳೂರು: ಕಳೆದ ವರ್ಷ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಾರ್ಲ್‌ಟನ್ ಟವರ್ಸ್‌ನಲ್ಲಿ ಸಂಭವಿಸಿದ ಬೆಂಕಿ ದುರಂತ ಸಂದರ್ಭದಲ್ಲಿ 7ನೇ ಮಹಡಿಯಿಂದ ಜಿಗಿದರೂ ಗಂಭೀರವಾದ ಗಾಯಗಳಿಲ್ಲದೇ ಬದುಕುಳಿದವರು ಅಲ್ಲಿನ ಭದ್ರತಾ ಸಿಬ್ಬಂದಿ ಮೊಜ್ಮುಲ್ ಹುಸೇನ್.ಇವರನ್ನೇ ಅನುಸರಿಸಿದ ಉಳಿದ ಎಂಟು ಜನರಿಗೆ ಇವರಿಗಿದ್ದ ಅದೃಷ್ಟ ಇರಲಿಲ್ಲ. ಒಬ್ಬೊಬ್ಬರಾಗಿ ಸಾವಿನ ಕದ ತಟ್ಟಬೇಕಾಯಿತು. ಆದರೆ ಮೊಜ್ಮುಲ್‌ಗೆ ಒಂದು ವರ್ಷದ ನಂತರ ಪ್ರತಿಯೊಂದು ದಿನವನ್ನೂ ಅತ್ಯಂತ ಸಂಕಷ್ಟದಿಂದ ಕಳೆಯುವಂತಾಗಿದೆ. ಈ ಕುರಿತು ತಮ್ಮ ನೋವು ತೋಡಿಕೊಂಡ ಅವರು, ‘ನಾನು ಸಂಪೂರ್ಣವಾಗಿ ಔಷಧಿಯನ್ನು ಅವಲಂಬಿಸಿದ್ದೇನೆ. ಬೆನ್ನು ಹುರಿಯ ನೋವು ನನಗೆ ನಿತ್ಯದ ಸಮಸ್ಯೆಯಾಗಿ ಕಾಡುತ್ತಿದೆ’ ಎಂದರು.ಮಹಡಿಯಿಂದ ಬಿದ್ದಾಕ್ಷಣ ಇಲ್ಲದ ಬೆನ್ನು ನೋವು ಎಷ್ಟೋ ದಿನಗಳಾದ ಮೇಲೆ ಧುತ್ತೆಂದು ಎರಗಿದೆ. ನೋವು ನಿವಾರಣೆಗಾಗಿ ಹಲವಾರು ಪರೀಕ್ಷೆಗಳನ್ನೂ ಮಾಡಲಾಗಿದೆ. ಆದರೆ ನೋವು ಮಾತ್ರ ಕಡಿಮೆಯಾಗಿಲ್ಲ. ಮೂಲತಃ ಅಸ್ಸಾಂ ರಾಜ್ಯದವರಾದ ಹುಸೇನ್ ಅವರು ಮಹಡಿಯಿಂದ ಬಿದ್ದ ದಿನವೇ ಜಿಡಿಎ ಸಾಫ್ಟವೇರ್ ಕಂಪೆನಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಅವರಿಗೆ ಬರುತ್ತಿದ್ದ ಅಲ್ಪ ಮೊತ್ತದ ಆದಾಯದಲ್ಲಿ ಅರ್ಧ ಭಾಗ ಇವರ ಚಿಕಿತ್ಸೆಗಾಗಿ ಖರ್ಚಾಗುತ್ತಿತ್ತು. ‘ಚಿಕಿತ್ಸೆಯ ನಂತರ ಬೆನ್ನಿಗೆ ಕಟ್ಟಿಕೊಳ್ಳಲು ಬೆಲ್ಟ್ ಕೊಡಲಾಗಿದೆ. ಆದರೆ ಅದು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ’ ಎಂದು ವಿಷಾದದಿಂದ ನುಡಿದರು.ಆ ದುರಂತದಲ್ಲಿ ಬದುಕುಳಿದ ಇನ್ನೋರ್ವ ನತದೃಷ್ಟೆ ರಾಣಿ ಅವರಿಗೆ ಜೋರಾಗಿ ಮಾತನಾಡಲು ಬಾರದು. ‘ಅವರ ಮಾತಿನಲ್ಲಿ ಸ್ಪಷ್ಟತೆ ಇಲ್ಲ. ಜೋರಾಗಿ ಮಾತನಾಡಿದರೆ ಉಸಿರು ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ’ ಎಂದು ಅವರು ಪತಿ ತಿಳಿಸಿದರು. ಬೆಂಕಿಯ ಹೊಗೆಯಿಂದಾಗಿ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದ, ಈ ಸಮಸ್ಯೆಯಿಂದಾಗಿಯೇ ಪುಪ್ಪುಸದಲ್ಲಿ ತೊಂದರೆ ಕಾಣಿಸಿಕೊಂಡು ಅಸ್ತಮಾ ಕೂಡಾ ಉಂಟಾಗಿದೆ.ದುರಂತದಲ್ಲಿ ಗಾಯಗೊಂಡವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರದಲ್ಲಿ ಇವರ ಹೆಸರೂ ಸೇರಿದೆ. ಆದರೆ ಒಂದು ವರ್ಷ ಕಳೆದರೂ ತನ್ನ ಮಾತು ಈಡೇರಿಸದ ಸರ್ಕಾರದ ಕ್ರಮ ಅವರನ್ನು ಇನ್ನೂ ಅದೇ ಸ್ಥಿತಿಯಲ್ಲಿರಿಸಿದೆ!‘ಸರ್ಕಾರದಿಂದ ಇಲ್ಲಿಯವರೆಗೂ ನಾವು ಒಂದೇ ಒಂದೆ ಪೈಸೆ ಪರಿಹಾರಪಡೆದಿಲ್ಲ. ಒಂದು ಬಾರಿ ಆಸ್ಪತ್ರೆಗೆ ಹೋದರೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ನಮ್ಮಂಥ ಆರ್ಥಿಕವಾಗಿ ಹಿಂದುಳಿದವರಿಂದ ಈ ಭಾರಿ ಮೊತ್ತ ಭರಿಸುವುದು ಅಸಾಧ್ಯ’ ಎಂದು ರಾಣಿ ಅವರ ಪತಿ ವಿಷಾದದಿಂದ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry