ಶನಿವಾರ, ಫೆಬ್ರವರಿ 27, 2021
31 °C

ಕಾರ್ಲ್‌ಸನ್‌ ಮಣಿಸಿದ ಆನಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಲ್‌ಸನ್‌ ಮಣಿಸಿದ ಆನಂದ್‌

ಸ್ಟಾವೆಂಜರ್‌, ನಾರ್ವೆ (ಪಿಟಿಐ): ನಾರ್ವೆ ಚೆಸ್‌ ಟೂರ್ನಿಯಲ್ಲಿ ಭಾರತದ ವಿಶ್ವನಾಥನ್‌ ಆನಂದ್‌ ಗೆಲುವಿನ ಖಾತೆ ತೆರೆದಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಜಯಭೇರಿ ಮೊಳಗಿಸಿದ್ದಾರೆ.ಶನಿವಾರ ನಡೆದ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಭಾರತದ ಆಟಗಾರ ಹಾಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಎದುರು ಗೆದ್ದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿದ್ದಾರೆ. ಈ ಜಯದೊಂದಿಗೆ ಪೂರ್ಣ ಪಾಯಿಂಟ್ ಕಲೆಹಾಕಿರುವ ಭಾರತದ ಆಟಗಾರ ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಆನಂದ್‌ ಖಾತೆಯಲ್ಲಿ ಈಗ 2.5 ಪಾಯಿಂಟ್ಸ್‌ ಇದೆ.ಮೊದಲ ಮೂರು ಸುತ್ತುಗಳಲ್ಲಿ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತರಾಗಿದ್ದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆನಂದ್‌,  ಕಾರ್ಲ್‌ಸನ್‌ ಎದುರು ಆಟದ ಎಲ್ಲಾ ವಿಭಾಗಗಳಲ್ಲಿಯೂ ಪ್ರಭುತ್ವ ಸಾಧಿಸಿ ಗೆಲುವಿನ ಸಂಭ್ರಮ ಆಚರಿಸಿದರು. ಬಿಳಿ ಕಾಯಿಗಳೊಂದಿಗೆ ಆಡಿದ ಆನಂದ್‌ ಆಟಕ್ಕೆ ಹೊಂದಿಕೊಳ್ಳಲು ಕೆಲ ಸಮಯ ತೆಗೆದುಕೊಂಡರು. ಹೀಗಾಗಿ ಆರಂಭದಲ್ಲಿ ಮಂದಗತಿಯ ಆಟ ಕಂಡು ಬಂದಿತು.ಕಾರ್ಲ್‌ಸನ್‌ ಅವರನ್ನು ಮಣಿಸುವುದು ಸುಲಭವಲ್ಲ ಎಂಬುದನ್ನು ಮನಗಂಡಿದ್ದ ಭಾರತದ ಆಟಗಾರ ತುಂಬಾ ಎಚ್ಚರಿಕೆಯಿಂದ ಕಾಯಿಗಳನ್ನು ಮುನ್ನಡೆಸಿದರು. ಇನ್ನೊಂದೆಡೆ ಕಾರ್ಲ್‌ಸನ್‌ ಕೂಡಾ ಆಲೋಚಿಸಿ ಕಾಯಿಗಳನ್ನು ನಡೆಸುತ್ತಿದ್ದರು. ಹೀಗಾಗಿ 30ನೇ ನಡೆಯವರೆಗೂ ಉಭಯ ಆಟಗಾರರ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿತು.ಈ ಹಂತದಲ್ಲಿ ಇನ್ನಷ್ಟು ಗುಣಮಟ್ಟದ ಆಟಕ್ಕೆ ಒತ್ತುಕೊಟ್ಟು ಆಡಿದ ಭಾರತದ ಆಟಗಾರ 47ನೇ ನಡೆಯಲ್ಲಿ ಜಯದ ತೋರಣ ಕಟ್ಟಿದರು.

ಇದು ಟೂರ್ನಿಯಲ್ಲಿ ಆತಿಥೇಯ ರಾಷ್ಟ್ರದ ಕಾರ್ಲ್‌ಸನ್‌ಗೆ ಎದುರಾದ ಮೂರನೇ ಸೋಲು ಎನಿಸಿದೆ.

ಒಂದು ಪಂದ್ಯದಲ್ಲಿ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತರಾಗಿರುವ ಅವರ ಖಾತೆಯಲ್ಲಿ ಕೇವಲ 0.5 ಪಾಯಿಂಟ್‌ ಇದ್ದು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.ಬಲ್ಗೇರಿಯಾದ ವೆಸೆಲಿನ್‌ ಟೊಪಲೊವ್‌, ಅರ್ಮೇನಿಯಾದ ಲೆವೊನ್‌ ಅರೋನಿಯನ್‌ ಅವರನ್ನು ಮಣಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 3.5ಕ್ಕೆ ಹೆಚ್ಚಿಸಿಕೊಂಡ ಟೊಪಲೊವ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಸ್‌ಚುಕ್‌, ನಾರ್ವೆಯ ಜೊನ್‌ ಲುಡ್‌ವಿಗ್‌ ಹ್ಯಾಮರ್‌ ಎದುರು ವಿಜಯಿಯಾದರು.

ಇತರ ಪಂದ್ಯಗಳಲ್ಲಿ ಇಟಲಿಯ ಫ್ಯಾಬಿಯಾನೊ ಕರುವಾನ, ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚೈರ್‌ ಲಾಗ್ರೇವ್‌ ಎದುರೂ, ಹಾಲೆಂಡ್‌ನ ಅನಿಶ್‌ ಗಿರಿ, ಅಮೆರಿಕದ ಹಿಕಾರು ನಕಮುರಾ ವಿರುದ್ಧವೂ ಡ್ರಾ ಮಾಡಿಕೊಂಡು ಪಾಯಿಂಟ್ಸ್‌ ಹಂಚಿಕೊಂಡರು.ಆರಂಭದಲ್ಲಿ ಇಬ್ಬರೂ ಎಚ್ಚರಿಕೆಯ ಆಟಕ್ಕೆ ಒತ್ತುಕೊಟ್ಟೆವು. ಹೀಗಾಗಿ ಗೆಲುವಿಗಾಗಿ ಹೆಚ್ಚು ಸಮಯ ಬೇಕಾಯಿತು. ಈ ಜಯ ನನ್ನಲ್ಲಿ ಇನ್ನಷ್ಟು ವಿಶ್ವಾಸ ತುಂಬಿದೆ -ವಿಶ್ವನಾಥನ್‌ ಆನಂದ್‌, ಭಾರತದ ಆಟಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.