ಭಾನುವಾರ, ಡಿಸೆಂಬರ್ 15, 2019
26 °C

ಕಾರ್ ಪೂಲಿಂಗ್ ಇನ್ನೊಂದು ಇನಿಂಗ್ಸ್‌

–ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಕಾರ್ ಪೂಲಿಂಗ್ ಇನ್ನೊಂದು ಇನಿಂಗ್ಸ್‌

ರಸ್ತೆಯುದ್ದಕ್ಕೂ ಬಣ್ಣಬಣ್ಣದ ಕಡ್ಡಿಪೊಟ್ಟಣಗಳನ್ನು ಜೋಡಿಸಿಟ್ಟಂಥ ದೃಶ್ಯ. ಕೆಲವು ಲಕ್ಷಗಳಿಂದ ಹಿಡಿದು ಕೋಟಿಗಟ್ಟಲೆ ಹಣ ಸುರಿದು ರಸ್ತೆಗೆ ಇಳಿಸಿದ ಕಾರುಗಳು... ನಗರದಲ್ಲಿ ನಿತ್ಯವೂ ಇದೇ ಚಿತ್ರಣ. ಮುಂದೊಂದು ದಿನ ಇದ್ದಕ್ಕಿದ್ದಂತೆ ನಗರದ ರಸ್ತೆಗಳಿಂದ ಈ ಕಾರುಗಳೆಲ್ಲ ಮಾಯವಾದರೆ?

ಟ್ರಾಫಿಕ್‌ ಜಾಮ್‌ ಕಡಿಮೆಯಾಗಬಹುದು, ಇಂಗಾಲದ ಕರಿಹೊಗೆಯ ಪ್ರಮಾಣ ಇಳಿಯಬಹುದು. ಬಸ್ಸು, ಮೆಟ್ರೊಗಳು ತುಂಬಿ ತುಳುಕಬಹುದು. ತಾರತಮ್ಯವೇ ಇಲ್ಲದಿರಬಹುದು. ತೈಲದ ಬೇಡಿಕೆ ಕಡಿಮೆಯಾಗಬಹುದು.ವಾಹನಗಳು ರಸ್ತೆಗಳಿಂದ ಕಡಿಮೆಯಾದರೆ ಏನೇನೆಲ್ಲಾ ಸಾಧ್ಯತೆಗಳಿವೆ ಎಂಬುದನ್ನು ಅರಿಯಲೆಂದೇ ಜಾಗೃತಿಗಾಗಿ ಸೆ.22ರಂದು ‘ಕಾರ್‌ಫ್ರೀ ಡೇ’ (ಕಾರು ಮುಕ್ತ ದಿನ) ಆಚರಿಸಲಾಗುತ್ತಿದೆ. ಇದೊಂದು ದಿನ ಮಾಲೀಕರು ತಂತಮ್ಮ ಕಾರನ್ನು ಮರೆತರೆ ಎಷ್ಟೆಲ್ಲಾ ಲಾಭ ಎಂಬುದರ ಅರಿವು ಮೂಡಿಸಲು ‘ಇವಾಂಜೆಲಿಕಲ್‌ ಸೋಷಿಯಲ್‌ ಆ್ಯಕ್ಷನ್‌ ಫೋರಂ’ (ಇಎಸ್‌ಎಎಫ್‌) ಸಂಘಟನೆಯವರು ಸೆ.20ರಂದು ಕಸ್ತೂರಿ ನಗರದಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದರು.ಬೆಂಗಳೂರಿನಲ್ಲೀಗ 28,81,791 ಬೈಕ್‌, 9,03,478 ಕಾರ್‌, 1,12,155 ಆಟೊರಿಕ್ಷಾ, 6,200ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಿವೆ. ಸಾಧ್ಯವಿದ್ದಲ್ಲೆಲ್ಲ ಕಾರ್‌ ಪೂಲಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆಯನ್ನಾದರೂ ಕಡಿಮೆ ಮಾಡಬಹುದು ಎಂಬ ಲೆಕ್ಕಾಚಾರ ಈ ಸಂಘಟನೆಯದು. ಮೂರನೇ ಬಾರಿಗೆ ಇಂಥ ಅಭಿಯಾನ ಮಾಡುತ್ತಿರುವ ಇವರಿಗೆ ಜಾಗೃತಿ ಸಂದರ್ಭದಲ್ಲಿ ಸಿಗುವ ಪ್ರತಿಕ್ರಿಯೆ ದಿನೇದಿನೇ ಕ್ಷೀಣಿಸುತ್ತಾ ಇಲ್ಲವಾಗುತ್ತದೆ ಎಂಬ ಆತಂಕವಿದೆ.ಸರ್ಕಾರ ಮುಂದಾಳತ್ವ ವಹಿಸಬೇಕು

ನಮ್ಮದೇ ವಾಹನ ಎಂಬುದು ಪ್ರತಿಷ್ಠೆಯ ವಿಷಯವಾಗಿದೆ. ಮನೆಯ ಸದಸ್ಯರೆಲ್ಲರೂ ಬೇರೆಬೇರೆ ದಿಕ್ಕುಗಳಲ್ಲಿ ಕೆಲಸ ಮಾಡುವುದರಿಂದ ಒಂದೊಂದು ವಾಹನಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವೂ ಆಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯ ಸಮಯ ಹಾಗೂ ದಟ್ಟಣೆಯಿಂದಾಗಿ ಜನರು ಅವನ್ನು ಬಳಸುತ್ತಿಲ್ಲ. ಇನ್ನೂ ಕೆಲವರದ್ದು ಮನೆಯಿಂದ ಬಸ್‌ ನಿಲ್ದಾಣ ಅತಿ ದೂರ ಎಂಬ ದೂರು. ಕೊನೆಯ ಪಕ್ಷ ಮೆಟ್ರೊ ನಿಲ್ದಾಣಗಳ ಬಳಿ, ಪ್ರಮುಖ ಬಸ್‌ ನಿಲ್ದಾಣಗಳ ಬಳಿ ವಾಹನ ನಿಲ್ದಾಣದ ಸೌಲಭ್ಯವಾದರೂ ಸಮರ್ಪಕ ರೀತಿಯಲ್ಲಿದ್ದರೆ, ಸಾರ್ವಜನಿಕ ಸಂಚಾರ ವ್ಯವಸ್ಥೆಯ ಮೂಲಕ ಪ್ರಯಾಣವನ್ನು ನಿಭಾಯಿಸಬಹುದಾಗಿದೆ.  ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ’ ಎಂಬುದು ಇಎಸ್‌ಎಎಫ್‌ನ ಯೋಜನಾಧಿಕಾರಿ (ಸೀನಿಯರ್‌ ಪ್ರಾಜೆಕ್ಟ್‌ ಆಫೀಸರ್‌) ಮಂಜು ಜಾರ್ಜ್ ಅಭಿಪ್ರಾಯ.ಕಾರ್ ಪೂಲಿಂಗ್ ಮೊರೆ

‘ನಾನು ಇರುವಲ್ಲಿಂದ ಕಚೇರಿ ತಲುಪಲು ಬಸ್‌ ವ್ಯವಸ್ಥೆ ಅನುಕೂಲಕರವಾಗಿರಲಿಲ್ಲ. ಹೀಗಾಗಿ ಸ್ವಂತ ವಾಹನದಲ್ಲೇ ಹೋಗಲು ಪ್ರಾರಂಭಿಸಿದೆ. ಈಗ ಮೂರ್‍್ನಾಲ್ಕು ತಿಂಗಳಿಂದ ಕಾರ್‌ ಪೂಲಿಂಗ್‌ಗೆ ಮೊರೆಹೋದೆ. ವಾರಕ್ಕೊಬ್ಬರಂತೆ ಕಾರ್‌ ಪೂಲಿಂಗ್‌ ಮಾಡಿದರೂ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದಂತೆ. ರಸ್ತೆಗಿಳಿಯುವ ವಾಹನ ಕಡಿಮೆಯಾದಷ್ಟೂ ನಮಗೇ ಅನುಕೂಲ. ಹೊಂದಿಕೊಳ್ಳುವ ಸ್ವಭಾವ ಬೇಕು. ಸಮಯ ನಿರ್ವಹಣೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎನ್ನುತ್ತಾರೆ ಕಂಪೆನಿಯೊಂದರ ಉದ್ಯೋಗಿಯಾಗಿರುವ ರಶ್ಮಿ.ಕಾರ್ ಸುರಕ್ಷಿತ

ಬೆಂಗಳೂರಿನಲ್ಲಿ ಮಾಲಿನ್ಯ ತುಂಬಾ ಇದೆ. ಇಲ್ಲಿ ಲೇನ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ದ್ವಿಚಕ್ರವಾಹನದಲ್ಲಿ ತೆರಳುವುದು ತುಂಬಾ ರಿಸ್ಕಿ. ಹೀಗಾಗಿ ಸ್ವಂತ ಕಾರು ಇರುವವರು ಅದನ್ನೇ ಬಳಸಲು ಇಷ್ಟಪಡುತ್ತಾರೆ. ಅಪರಿಚಿತರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗುವಷ್ಟು ಭಾರತೀಯರ ಮನಸ್ಥಿತಿ ಬದಲಾಗಿಲ್ಲ. ವಿವಿಧ ಮನೋಭಾವದವರೊಂದಿಗೆ ಹೋಗುವುದಕ್ಕಿಂತ ಒಬ್ಬರೇ ತೆರಳುವುದು ಅನುಕೂಲಕರ ಎಂದು ಯೋಚಿಸುವುದು ಸಹಜ. ಈ ಎಲ್ಲಾ ಮನಸ್ಥಿತಿಗಳ ಹೊಯ್ದಾಟದಲ್ಲಿ ಕಾರ್‌ ಪೂಲಿಂಗ್‌ ಯಶಸ್ವಿಯಾಗುತ್ತಿಲ್ಲ.

–ಅಭಿಷೇಕ್‌, ಸಾಫ್ಟ್ವೇರ್‌ ಎಂಜಿನಿಯರ್‌ಸಂಕೀರ್ಣ ಸಮಸ್ಯೆ

ಎರಡು ವರ್ಷದಿಂದ ಕಾರ್‌ ಬಳಸುತ್ತಿದ್ದೇನೆ. ಮೊದಲು ಕಾರ್‌ಪೂಲಿಂಗ್‌ ಮಾಡ್ತಿದ್ದೆ. ಕಚೇರಿ ಕೆಲಸ ಮಾತ್ರ ಇದ್ದರೆ ಕಾರ್‌ ಪೂಲಿಂಗ್‌ ಉತ್ತಮ. ನಾನು ತುಂಬಾ ಜನರೊಂದಿಗೆ ವ್ಯವಹರಿಸಬೇಕಾದ್ದರಿಂದ  ಅನಿವಾರ್ಯವಾಗಿ ಸ್ವಂತ ವಾಹನ ಬಳಸಬೇಕಾಗುತ್ತದೆ.

–ಅಶ್ವಿನ್‌ ಆರ್‌.

ಆಟೊಲಿವ್‌ ಕಂಪೆನಿಯ ಎಚ್‌.ಆರ್‌.

ಪ್ರತಿಕ್ರಿಯಿಸಿ (+)