ಭಾನುವಾರ, ಅಕ್ಟೋಬರ್ 20, 2019
27 °C

ಕಾಲಕ್ಕೆ ತಕ್ಕಂತೆ ಸಂಸ್ಕೃತ ಪಠ್ಯಕ್ರಮ - ಕಪಿಲ್ ಸಿಬಲ್

Published:
Updated:

ನವದೆಹಲಿ (ಪಿಟಿಐ): ಸಮಕಾಲೀನ ಪರಿಕಲ್ಪನೆಗಳನ್ನು ಹಳೆಯ ಸಂಸ್ಕೃತ ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಈ ಭಾಷೆ ಪ್ರಸಕ್ತ ಸಂದರ್ಭಕ್ಕೆ ಉಪಯೋಗಿ ಮತ್ತು ಪ್ರಸ್ತುತವಾಗುವಂತೆ ಮಾಡಬೇಕಾದ ಅಗತ್ಯ ಇದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.ಗುರುವಾರ ಇಲ್ಲಿ ಆಯೋಜಿಸಲಾಗಿದ್ದ 15ನೇ ವಿಶ್ವ ಸಂಸ್ಕೃತ ಸಮಾವೇಶದಲ್ಲಿ ಅವರು ಮಾತನಾಡಿದರು.

ಜ್ಯೋತಿಷ ಶಾಸ್ತ್ರ, ಖಗೋಳ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ನೀತಿಶಾಸ್ತ್ರ, ತರ್ಕಶಾಸ್ತ್ರ, ಮನಃಶಾಸ್ತ್ರ, ವಾಸ್ತುಶಾಸ್ತ್ರ, ಆಯುರ್ವೇದ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಸಂಸ್ಕೃತದ ಕೊಡುಗೆ ಅಪಾರ ಎನ್ನುವುದನ್ನು ನಾವು ಒಪ್ಪ್ದ್ದಿದೇವೆ.ಆದರೆ, ಈ ಎಲ್ಲ ವಿಷಯಗಳ ಅಧ್ಯಯನ ಸಂಸ್ಕೃತ ಭಾಷೆಯ ಅಧ್ಯಯನಕ್ಕಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಈ ವಿಷಯಗಳ ಅಧ್ಯಯನವನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಸುವುದು ಸಲೀಸಾಗಿದೆ ಎಂದು ಅವರು ಹೇಳಿದರು.ಸಮಕಾಲೀನ ಸಮಾಜಕ್ಕೆ ಸರಿಹೊಂದುವಂತೆ ಸಂಸ್ಕೃತ ಪಠ್ಯಕ್ರಮವನ್ನು ಹೊಸದಾಗಿ ರೂಪಿಸುವಾಗ ಸಂಸ್ಕೃತದ ಹಳೆ ಪಠ್ಯಕ್ರಮವನ್ನು ಅದಕ್ಕೆ ಪೂರಕವಾಗಿ ಬಳಸಿಕೊಂಡು ಇತರೆ ವಿಷಯಗಳಿಗೆ ಜ್ಞಾನವನ್ನು ವಿಸ್ತರಿಸಬೇಕು ಎಂದು ಸಿಬಲ್ ಸಲಹೆ ನೀಡಿದರು.ಸಂಸ್ಕೃತ ವಿದ್ವಾಂಸರು, ಬೋಧನಾ ಸಂಸ್ಥೆಗಳು ಸಂಸ್ಕೃತದಲ್ಲಿ ಅಡಕವಾಗಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡುವುದರ ಜತೆಗೆ ವಿಭಿನ್ನ ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ಹೊಸ ಅಧ್ಯಯನ ಮತ್ತು ಶೋಧದ ಮಾಹಿತಿಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವಂತೆ ಮಾಡಬೇಕು. ಆಗ ಮಾತ್ರ ಸಂಸ್ಕೃತ ಜ್ಞಾನದ ವ್ಯಾಪ್ತಿ ವಿಸ್ತಾರವಾಗುತ್ತದೆ ಮತ್ತು ಹೆಚ್ಚು ಪ್ರಸ್ತುತವಾಗುತ್ತದೆ, ಹೆಚ್ಚು ಲಾಭಕಾರಿಯಾಗುತ್ತದೆ ಎಂದು ಹೇಳಿದರು.ಪ್ರಧಾನಿ ಭರವಸೆ: `ಸಂಸ್ಕೃತ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸುವ, ಅಭಿವೃದ್ಧಿಗೊಳಿಸುವ ಪ್ರಯತ್ನವನ್ನು ಬಲಪಡಿಸಲಾಗುವುದು~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದರು.

 

ಭಾರತದ ನಾಗರಿಕತೆಯಂತೆ ಸಂಸ್ಕೃತ ಭಾಷೆಯೂ ಯಾವುದೇ ಒಂದು ನಿರ್ದಿಷ್ಟ ಜನಾಂಗ, ಪಂಗಡ ಅಥವಾ ಧರ್ಮಕ್ಕೆ ಸೇರಿಲ್ಲ. ಇದು ಸಂಸ್ಕೃತಿಯನ್ನು ಪ್ರತಿನಿಧಿಸುವಂತಹದ್ದಾಗಿದ್ದು, ಉದಾರವಾದದ ಪ್ರತೀಕದಂತಿರುವ ಭಾಷೆಯನ್ನು ಸಂಕುಚಿತ ಮನೋಭಾವದಿಂದ ನೋಡಬಾರದು.ವಿಶ್ವದ ಪ್ರಾಚೀನ ಭಾಷೆಯಾದ ಸಂಸ್ಕೃತ ಸ್ತ್ರೋತ್ರ ಮತ್ತು ಧಾರ್ಮಿಕ ವಿಧಿವಿಧಾನಕ್ಕೆ ಮಾತ್ರ ಮೀಸಲಾದ ಭಾಷೆ ಎಂಬಂತಹ ತಪ್ಪು ಕಲ್ಪನೆ ನಮ್ಮಲ್ಲಿದೆ. ಇಂತಹ ತಪ್ಪುಗ್ರಹಿಕೆಯಿಂದ ಸಂಸ್ಕೃತ ಭಾಷೆಯ ಶ್ರೇಷ್ಠ ಬರಹಗಾರರು, ಚಿಂತಕರು, ಸಂತರು ಮತ್ತು ವಿಜ್ಞಾನಿಗಳಾದ, ಕೌಟಿಲ್ಯ, ಚರಕ, ಸುಶ್ರುತ, ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ, ಭಾಸ್ಕರಚಾರ್ಯ ಅಂತಹವರ ಬಗ್ಗೆ ಜ್ಞಾನ ಪಡೆಯಲು ನಮಗೆ ಸಾಧ್ಯವಿಲ್ಲವಾಗಿದೆ ಎಂದು ವಿಷಾದಿಸಿದರು.

 

Post Comments (+)