ಕಾಲಕ್ಕೆ ತಕ್ಕ ಪರಿಣತಿ ಗಳಿಸಿ

7

ಕಾಲಕ್ಕೆ ತಕ್ಕ ಪರಿಣತಿ ಗಳಿಸಿ

Published:
Updated:

 ತಿಪಟೂರು: ಸಮರ್ಪಕ ನ್ಯಾಯದಾನ ಪ್ರಕ್ರಿಯೆಗೆ ಅನುಕೂಲವಾಗುವಂತೆ ವಕೀಲರು ಜ್ಞಾನಸಾಮರ್ಥ್ಯ ಹೆಚ್ಚಿಸಿಕೊಂಡು ಕಾಲಕ್ಕೆ ತಕ್ಕಂತೆ ಪರಿಣತಿ ಸಾಧಿಸಬೇಕು ಎಂದು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಮುನಿಯಪ್ಪ ಇಲ್ಲಿ ಶುಕ್ರವಾರ ತಿಳಿಸಿದರು.ರಾಜ್ಯ ಮತ್ತು ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕರೆ ವಕೀಲರಿಗೆ ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಕೀಲರನ್ನು ಸಮರ್ಥ ವಾದಪಟುಗಳನ್ನಾಗಿ ರೂಪಿಸಲು ರಾಜ್ಯದಾದ್ಯಂತ ಕಾನೂನು ಕಾರ್ಯಾಗಾರ ನಡೆಸಲಾಗುತ್ತಿದೆ. ಎಲ್ಲರೂ ಎಲ್ಲ ವಿಷಯದಲ್ಲಿ ಪಾರಂಗತರಾಗಿರಲು ಸಾಧ್ಯವಿಲ್ಲ. ವೃತ್ತಿ ಕೌಶಲ್ಯಕ್ಕೆ ಬೇಕಾದ ಜ್ಞಾನವನ್ನು ವಿಭಿನ್ನ ವಿಷಯಗಳ ತಜ್ಞರಿಂದ ದಕ್ಕಿಸಿಕೊಳ್ಳಬೇಕು. ವಯಸ್ಸಿನ ಭೇದ ಮರೆತು ಜ್ಞಾನದಾಹಿಗಳಾಗಬೇಕು ಎಂದರು.ವಕೀಲರ ಕಲ್ಯಾಣ ನಿಧಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಲು ರಾಜ್ಯ ವಕೀಲರ ಸಂಘ ಯೋಜನೆ ಕೈಗೊಂಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹೊಂದಾಣಿಕೆ ಹಣವನ್ನು ಪೂರ್ತಿ ಪಾವತಿಸಿದ ತಕ್ಷಣ ಜಾರಿಯಾಗಲಿದೆ. ಈ ಯೋಜನೆ ಜಾರಿಯಲ್ಲಿರುವ ದೇಶದ 13 ರಾಜ್ಯಗಳ ಪೈಕಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.ಸಿವಿಲ್ ಮತ್ತು ಜೆಎಂಎಫ್‌ಸಿ ಹಿರಿಯ ವಿಭಾಗದ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಮಾತನಾಡಿ, ಪ್ರತಿವರ್ಷ ಇಂತಹ ಕಾರ್ಯಾಗಾರದ ಮೂಲಕ ವಕೀಲರ ಕೌಶಲ್ಯ ಉನ್ನತೀಕರಿಸಬೇಕು. ವಕೀಲರ ಸಂಘದಿಂದ ಕಿರಿಯ ವಕೀಲರಿಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯಬೇಕು ಎಂದರು.ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ.ಗೀತಾ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಸುಭಾಷ್ ಬಿ.ಹೊಸಕಲ್ಲೆ, ರಾಜ್ಯ ವಕೀಲರ ಸಂಘದ ಸದಸ್ಯ ಬಿ.ಎಸ್.ಯೋಗೀಶ, ಶಸ್ತ್ರಚಿಕಿತ್ಸಾ ತಜ್ಞ ಡಾ.ಸುರೇಶ್ ಮತ್ತಿತರರು ಇದ್ದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ದೇವಪ್ರಸಾದ್ ಸ್ವಾಗತಿಸಿದರು. ಉಮೇಶ್ ವಂದಿಸಿದರು. ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry