ಶನಿವಾರ, ಆಗಸ್ಟ್ 17, 2019
27 °C

ಕಾಲಚಕ್ರದ ಪಯಣದಲ್ಲಿ...

Published:
Updated:

ಯಾವತ್ತೂ ದಿಂಬಿಗೆ ತಲೆ ತಾಗಿಸಿದ ಕೂಡಲೇ ನಿದ್ದೆ ಬರುವ ನನಗೆ, ಇವತ್ಯಾಕೋ ರಾತ್ರಿ ಎರಡೂವರೆ ಆದರೂ ನಿದ್ದೆಯ ಸುಳಿವೇ ಇಲ್ಲ. ಕಣ್ಮುಚ್ಚಿದ್ರೂ ಒಳಗೆ ಬೆಳಕೋ ಬೆಳಕು. ಊಟ ಆಯ್ತು ಅಂದ್ರೆ ಸಾಕು ಮಂಪರು ಬರುವ ಔಷಧಿ ಕೊಟ್ಟಂತೆ ಟಿ.ವಿ. ಎದುರು ಕೂತೇ ತೂಕಡಿಸುವ ನನಗೆ ಮಗಳು `ಯಾಕಮ್ಮಾ ನಿಂಗ್ಯಾರಾದ್ರೂ ಪನಿಶ್‌ಮೆಂಟ್ ಕೊಟ್ಟಿದ್ದಾರಾ? ಹೋಗಿ ಮಲಕ್ಕೊಳ್‌ಬಾರ‌್ದಾ' ಅನ್ನುತ್ತಿದ್ದಳು.ಇವತ್ತು ಮಾತ್ರ ಹೀಗೆ ನಿದ್ದೆ ಬಾರದೆ ಹೊರಳಾಡುತ್ತಾ ಇರಬೇಕಾದ್ರೆ ಪಕ್ಕದಿಂದ ಗಂಡನ ಗೊರಕೆ ಸದ್ದು. ಯಾವತ್ತೂ ಮನೆಬಾಗಿಲು ಕೂಡಾ ಹಾಕದೆ, `ಅದು ನನ್ನ ಕೆಲ್ಸ ಅಲ್ಲ, ಅವ್ರದ್ದು' ಅಂತ ನಿಶ್ಚಿಂತೆಯಾಗಿ ಹಾಸಿಗೆ ಮೇಲೆ ಧೊಪ್ಪಂತ ಬೀಳುವ ನನಗೆ, ಇವರ ಗೊರಕೆ ಸದ್ದು ಕೇಳಿಸಲು ಸಾಧ್ಯವೇ ಇಲ್ಲ ಬಿಡಿ. ಇವತ್ತು ಅದು ಎಷ್ಟು ಇಂಪಾಗಿ ಕೇಳಿಸಿತು ಅಂತೀರಿ.ಇದೇನಪ್ಪಾ! ಎಲ್ಲರೂ ಗಂಡ ಗೊರಕೆ ಹೊಡೆದರೆ ನಿದ್ದೆ ಬರುವುದಿಲ್ಲ, ಕಿರಿಕಿರಿ ಅಂತಿದ್ದರೆ ಇವಳು ಅದನ್ನು ಇಂಪು ಅಂತಿದ್ದಾಳಲ್ಲ; ವಿದೇಶಗಳಲ್ಲಿ ಡೈವೋರ್ಸ್‌ ಮಾಡಿಸಿ ಗಂಡ- ಹೆಂಡ್ತೀರನ್ನ ದೂರ ಮಾಡೋವಷ್ಟು ಗೊರಕೆ ಸದ್ದು ಪವರ್‌ಫುಲ್ ಆಗಿರುವಾಗ, ಇವಳಿಗೇನಾದ್ರೂ ನಿದ್ದೆಯಿಲ್ಲದೆ ತಲೆಗಿಲೆ ಕೆಟ್ಟಿದೆಯಾ ಅಂದುಕೊಂಡ್ರಾ? ಹಾಗೇನಿಲ್ಲ, ನಾನಿದನ್ನು ಸಂಪೂರ್ಣ `ಹೋಷ್ ಓ ಆವಾಜ್ ಮೇ' ಬರೀತಿದ್ದೇನೆ. ನಂಗೆ ನಿದ್ದೆ ಬರ‌್ಲಿಲ್ಲ ನೋಡಿ, ಅದಕ್ಕೆ ಆರಾಮಾಗಿ ಗೊರಕೆ ಹೊಡೀತಾ ನಿದ್ರೆ ಮಾಡ್ತಿರೋ ಗಂಡನ್ನ ನೋಡುವಾಗ `ಎಷ್ಟು ಪುಣ್ಯವಂತರಪ್ಪಾ' ಅನ್ನಿಸಿತು. ಹಾಗಾಗಿ ಗೊರಕೆ ಇಂಪಾಗೂ ಕೇಳಿಸಿತು. ನಂಗೆ ಯಾಕೆ ಹೀಗೆ ಆಯ್ತು ಅಂತ ಮತ್ತಷ್ಟು ತಲೆ ಕೆಡಿಸಿಕೊಂಡು ಯೋಚನೆ ಮಾಡ್ತಾ ಇದ್ದಾಗ ಹೊಳೀತು ನೋಡಿ ಅದಕ್ಕೆ ಕಾರಣ.ಇವತ್ತು ಸಂಜೆ ಸಿಟೀಲಿ ನಾವು ಮೂವರು ಗೆಳತೀರು ಸಿನಿಮಾ ನೋಡಲು ಡಿಸೈಡ್ ಮಾಡಿದೆವು. ಅದಕ್ಕೆ ನಾವು ಹೋಗಬೇಕಾಗಿದ್ದದ್ದು ಮಾಲ್‌ನೊಳಗಿರೋ ಥಿಯೇಟರ್‌ಗೆ. ಇನ್ನೂ ಬರಬೇಕಾಗಿದ್ದ ಗೆಳತಿಗಾಗಿ ನಾವಿಬ್ಬರೂ ಕಾಯ್ತಾ ಮಾಲ್‌ನ ಒಳಗೆ ಹೋಗೋ ಬರೋರನ್ನೆಲ್ಲ ನೋಡ್ತಾ ಅಲ್ಲೇ ಎಂಟ್ರೆನ್ಸ್‌ನಲ್ಲಿ ನಿಂತಿದ್ದೆವು. ಆಗ ಮಂಗಳಾ `ಇಲ್ಲಿ ಬರೋರೆಲ್ಲ ಯೂತ್ಸು, ಬೇರೆಯವರು ಕಡಿಮೆ' ಅಂದರು. ಯೂನಿಫಾರಂ ಹಾಕಿದ್ದ ಹುಡುಗಿಯರು ಅಲ್ಲಿ ಸಾಕಷ್ಟು ಮಂದಿ ಓಡಾಡುತ್ತಿದ್ದರು. ನಂಗೆ ಥಟಕ್ಕಂತ ನಮ್ಮಜ್ಜಿ ನೆನಪಾದ್ಲು.ನನ್ನನ್ನು ಬಾಲ್ಯದಿಂದ ತುಂಬಾ ಪ್ರಭಾವಿಸಿದವಳು. ನನ್ನ ಭಾವಕೋಶದಲ್ಲಿ ಸದಾ ಜೀವಂತವಾಗಿ ಇರುವವಳು. ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ ಎದ್ದು ನನ್ನೆದುರು ಬರುವವಳು. ಅವಳಿಲ್ಲದೆ ನನ್ನ ಯಾವ ನೆನಪುಗಳೂ ಪೂರ್ಣವಾಗುವುದೇ ಇಲ್ಲ.ಹಳ್ಳಿಯಿಂದ ನಮ್ಮನೆಗೆ ಬರುತ್ತಿದ್ದ ಅವಳದ್ದು ಯಾವತ್ತೂ ಬರಿಗಾಲು. ಅದ್ರಲ್ಲೇ, ಅಂದು ಯೂತ್‌ಗಳಾಗಿದ್ದ ನಮ್ಜತೆ ಸಿನಿಮಾಕ್ಕೂ ಬರುವವಳು. ಪೇಟೆ, ಅಂಗಡಿ, ದೇವಸ್ಥಾನ, ಜಾತ್ರೆ ಅಂತ ಕೂಡ ಸುತ್ತುವವಳು. ಬರುವಾಗ ನಮಗಾಗಿ ದೊಡ್ಡ ಕಿತ್ತಳೆ ತೊಳೆಯಂತಹ ಪೆಪ್ಪರ್‌ಮೆಂಟು, ನಾನಾ ಪ್ರಾಣಿಗಳ ಆಕೃತಿಯ ಬಿಸ್ಕತ್ತು ಎಲ್ಲ ತರುತ್ತಿದ್ದಳು. ನಮ್ಮ ಮನೆಯ ಎದುರುಗಡೆಯಿಂದ ಹೋದ್ರೆ ದಾರಿ ಸ್ವಲ್ಪ ಸುತ್ತುಬಳಸು; ಅದಕ್ಕಾಗಿ ನಾವು ಮನೆ ಹಿಂದಿನ ದೊಡ್ಡ ತೋಡನ್ನು ದಾಟಿ ಹೋಗ್ತಿದ್ದೆವು. ನಮ್ಮಂದಿಗೆ ಅಜ್ಜಿ ಕೂಡ ತೋಡಿಳಿಯುವುದಕ್ಕೆ, ಮೇಲಕ್ಕೆ ಹತ್ತುವುದಕ್ಕೆ ಎಲ್ಲಕ್ಕೂ ರೆಡಿ. ನಾವು ಒಂದಿಷ್ಟು ದೂರ ಓಡಿ, ಮತ್ತೆ ಅಜ್ಜಿ ಬರುವವರೆಗೆ ಕಾದು ಮುಂದೆ ಹೋಗುತ್ತಿದ್ದೆವು. ಅವಳೀಗ ಇದ್ದಿದ್ದರೆ! ಇಂತಹ ಗಡಿಬಿಡಿಯ, ವೇಗದ ಬದುಕಿನಲ್ಲಿ ನಮ್ಮ ಜೊತೆ ಇರಲು ಅವಳಿಗೆ ಆಗುತ್ತಿತ್ತೇ ಎಂಬ ಪ್ರಶ್ನೆ ನನ್ನೆದುರು ನಿಲ್ಲುತ್ತದೆ.ಈ ಮಾಲ್‌ನಲ್ಲಿ ನೋಡಿದ್ರೆ (ಯಾರ) ಅಜ್ಜಿಯೂ ಇಲ್ಲ, ಅಜ್ಜನೂ ಇಲ್ಲ. ಮಕ್ಕಳು- ಮೊಮ್ಮಕ್ಕಳು ಮಾತ್ರ ತುಂಬಿದ್ದಾರೆ. ತಲೆಮಾರುಗಳ ನಡುವಿನ ಕೊಂಡಿಗಳೇ ಕಳಚಿ ಬಿಟ್ಟವಲ್ಲಾ ಅನ್ನಿಸ್ತು. ತುಂಬಾ ದುಃಖ ಆಯ್ತು. ಯಾಕೆಂದರೆ, ಇಲ್ಲಿಗೇನಾದ್ರೂ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳ ಜೊತೆಗೆ ಬಂದ್ರೆ, ಇಷ್ಟೊಂದು ಮೆಟ್ಟಿಲುಗಳನ್ನ ಅವರು ಹತ್ತಬಲ್ಲರೇ ಅಥವಾ ಮುಂದಕ್ಕೆ ಸರಿಯುತ್ತಲೇ ಇರುವ ಎಲಿವೇಟರ್‌ಗಳಲ್ಲಿ ಚಿಗುರೆಲೆಗಳಂತೆ ಜಿಗಿದು ಕಾಲಿಟ್ಟು ಮುಂದಕ್ಕೆ ಧಾವಿಸಬಲ್ಲರೇ? ಹಾಗಾಗಿ ಈಗ ಯಾರೂ ಅಜ್ಜಿಯರಾಗುವುದೇ ಇಲ್ಲ. ಆದ್ರೂ ಹೆಚ್ಚು ಕಾಲ ಬದುಕುವುದೂ ಇಲ್ಲ. ಬದುಕಿದ್ರೂ ಅವರನ್ನು ಮಕ್ಕಳು ಗಮನಿಸುವುದೂ ಇಲ್ಲ. ಮನೆಯ ಒಂದು ಬದಿಯಲ್ಲಿ ಬಿದ್ದಿರಬೇಕಷ್ಟೆ. ಕೇವಲ ಉಪದ್ರವ ಮಾತ್ರವಾಗಿ ಕಾಣಿಸುವ ಅವರು, ಇಂದಿನವರಿಗೆ ತಲೆನೋವು. ಹೀಗಾದರೆ ಜಗತ್ತು ಸಂಬಂಧಗಳಿಲ್ಲದ, ಇದ್ದರೂ ತೀರಾ ವ್ಯಾವಹಾರಿಕವಾಗಿ ಬದಲಾಗುತ್ತಿದೆಯೇ?ತೆರೆಯ ಬಯಲಿನಲ್ಲಿ ಬೆಳಿಗ್ಗೆ ಪ್ರತ್ಯಕ್ಷವಾಗಿ ಸಂಜೆಯ ಮಬ್ಬುಗತ್ತಲಲ್ಲಿ ಮಾಯವಾಗುತ್ತಿದ್ದ ಹಿಂದಿನ ಸಂತೆಮಾಳಗಳ ಅತ್ಯಾಧುನಿಕ ರೂಪಾಂತರಗಳೇ ಈ ಮಾಲ್‌ಗಳು. ಈಗಲೂ ನಾನು ಬಸ್ಸಿನಲ್ಲಿ ಅಮ್ಮನ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಬೆರಳೆಣಿಕೆಯ ಹಳ್ಳಿಗಳಲ್ಲಿ ಒಮ್ಮಮ್ಮೆ ಸಂತೆ ನಡೆಯುವುದನ್ನು ನೋಡುತ್ತೇನೆ. ಆದರೆ ಇದೀಗ ಆ ದಾರಿಗಳೆಲ್ಲ ಚತುಷ್ಪಥ ಹೆದ್ದಾರಿಯ ಹೆಸರಿನಲ್ಲಿ ಬದಲಾಗುತ್ತಿವೆ. ಈ ದಾರಿಯ ಹಲವು ಪುಟ್ಟ ಊರುಗಳನ್ನು ಗುರುತಿಸಲು ಒಂದು ದೊಡ್ಡ ಮಾವಿನ ಮರ, ಒಂದು ಹಳೆಯ ಹೆಂಚಿನ ಮನೆ, ಒಂದು ನಾಗಬನ, ಒಂದು ಅಡಿಕೆ ಸೋಗೆಯ ಬಸ್ ಸ್ಟಾಪು- ಹೀಗೆ ನನ್ನದೇ ಆದ ಕೆಲವು ನಿರ್ದಿಷ್ಟ ಗುರುತುಗಳಿದ್ದವು.ಬಸ್ಸಿನಲ್ಲಿ ಅಪ್ಪಿತಪ್ಪಿ ನಿದ್ದೆ ಮಾಡಿದರೂ ಎಚ್ಚೆತ್ತ ತಕ್ಷಣ ಕಂಡ ಊರನ್ನು, ಇದು ಯಾವ ಊರೆಂದು ಗುರುತಿಸಲು ಆಗುವಂಥವು ಅವು. ನಮ್ಮೂರಿನ ಹಾದಿಗೆ ತಂಪನ್ನು ಹಾಸುತ್ತಿದ್ದ ಸಾವಿರಗಟ್ಟಲೆ ಮರಗಳು ಹೆದ್ದಾರಿಗಾಗಿ ಬಲಿಯಾಗಿವೆ. ಗುರುತುಗಳೆಲ್ಲ ಕಾಣೆಯಾಗಿವೆ. ದಾರಿಯೀಗ ಬಿಸಿಲಿಗೆ ಬಸವಳಿಯುತ್ತಿದೆ. ನಾನು ಯಾವುದೋ ಅಪರಿಚಿತ ಜಾಗಕ್ಕೆ ಬಂದಂತಹ ಆತಂಕವನ್ನು ನನ್ನಲ್ಲಿ ಹುಟ್ಟಿಸುತ್ತಿವೆ.ಹೀಗೇ ಯೋಚಿಸುತ್ತಾ ಇರಬೇಕಾದ್ರೆ ನಮ್ಮ ಇನ್ನೊಬ್ಬ ಗೆಳತಿ ಬಂದ್ರು. ಹಾಗೇ ಮಾಲ್‌ನ ಎಡಭಾಗಕ್ಕಿದ್ದ ಟಿಕೆಟ್ ಕೌಂಟರ್‌ನಲ್ಲಿ ಸಿನಿಮಾಗೆ ಟಿಕೆಟ್ ತಗೊಂಡೆವು. ಇನ್ನೂ ಅರ್ಧ ಗಂಟೆ ಟೈಮ್ ಇತ್ತು. ಪಕ್ಕದ ಕಾಫಿ ಶಾಪ್‌ನೊಳಕ್ಕೆ ಹೋದೆವು. ಮೆನು ನೋಡಿದ್ರೆ ಹೃದಯವೇ ಬಾಯಿಗೆ ಬರುವಂಥಾ ರೇಟು. ಒಂದು ಕಾಫಿಗೆ 150 ರೂಪಾಯಿ. ಅದನ್ನೇ ಗೆಳತಿ ಆರ್ಡರ್ ಮಾಡಿದ್ರು. ಆಗ ನಂಗೆ ನೆನಪಿಗೆ ಬಂದದ್ದು ಕೆ.ಟಿ.ಗಟ್ಟಿಯವರ `ನಿರಂತರ' ಕಾದಂಬರಿ.ನನ್ನ ಕಾಲೇಜು ದಿನಗಳಲ್ಲಿ, ಅಂದ್ರೆ ಸುಮಾರು ಎಂಬತ್ತರ ದಶಕದ ಯಾವುದೋ ಒಂದು ವರ್ಷದಲ್ಲಿ ವಾರಪತ್ರಿಕೆಯೊಂದರಲ್ಲಿ ಅದು ಧಾರಾವಾಹಿಯಾಗಿ ಬರ‌್ತಿತ್ತು. ಕತೆ ನೆನಪಿಲ್ದೆ ಹೋದ್ರೂ ಅದರ ಕೆಲವು ಸಂಗತಿಗಳು ಇನ್ನೂ ನನ್ನ ನೆನಪಲ್ಲಿವೆ. ಅದರಲ್ಲಿ ಒಂದು ದೊಡ್ಡ ಗುಲಗಂಜಿ ಗಾತ್ರದ ಕರಿಮಣಿ ತಾಳಿ 60 ಸಾವಿರ ರೂಪಾಯಿ ಬೆಲೆ ಬಾಳ್ತಿದ್ದದ್ದು; ಬೀದೀಲಿ ಅಪಘಾತ ಆಗಿ ಸತ್ತವ್ರನ್ನ ಹಣಕಿ ನೋಡುವವರೂ ದಿಕ್ಕಿಲ್ಲದೆ, ನಾಯಿ ಸತ್ತು ಬಿದ್ರೆ ನೋಡ್ತಾರಲ್ಲ ಹಾಗೆ ಎಲ್ಲರೂ ಒಂದು ಕ್ಷಣವಷ್ಟೇ ಆ ಕಡೆ ಕಣ್ಣು ಹಾಯಿಸಿ ಓಡಾಡುವ ಕಾಲ ಬಂದದ್ದು- ಹೀಗೆಲ್ಲ ಚಿತ್ರಣ ಇತ್ತು. ಎಂದೋ ನಾನು ಓದಿದ ಕಾದಂಬರಿಯ ಈ ಎಲ್ಲ ಸನ್ನಿವೇಶಗಳೂ ನನ್ನ ಕಣ್ಣೆದುರೇ ನಿಜವಾಗ್ತಾ ಇವೆಯಲ್ಲ, ಇದಕ್ಕೆ ಅಚ್ಚರಿಪಡಬೇಕೋ? ಕಾಲದ ಓಟಕ್ಕೆ ಶರಣೆನ್ನಬೇಕೋ ತಿಳಿಯುತ್ತಿಲ್ಲ.

* * *

ನಾನು ತುಂಬಾ ಚಿಕ್ಕವಳಿದ್ದಾಗ, ಸುಮಾರು 1970ರ ದಶಕದಲ್ಲಿ ನಮ್ಮ ಅಜ್ಜಿಯ ಊರಿನಲ್ಲಿ ವಾರಕ್ಕೊಮ್ಮೆ ಶುಕ್ರವಾರ ಸಂತೆ ನಡೀತಿತ್ತು. ಆ ಸಂತೆಮಾಳದಲ್ಲಿ ಮಾರ‌್ತಿದ್ದ ಹತ್ತು ಪೈಸದ ಐಸ್ ಕ್ಯಾಂಡಿ, ಇಪ್ಪತ್ತೈದು ಪೈಸದ ಐಸ್‌ಕ್ರೀಂ, ಪುಟ್ಟ ಕೇಕ್ ತಿನ್ನುತ್ತಿದ್ದೆವು. ಈಗ ನೆನಪಿಸಿಕೊಂಡರೆ ಅದು ಸಮೃದ್ಧಿಯ ಕಾಲ ಅನ್ನಿಸುತ್ತದೆ. ಈಗಿನ ಬೆಲೆ ಕಂಡು ನನಗಂತೂ ಬೆರಗು. ನಮ್ಮೂರ್ನಲ್ಲಿರೋ ಥಿಯೇಟರ್‌ಗೆ ಯಾವುದೇ ಸಿನಿಮಾ ಬರಲಿ, ನಾವಂತೂ ಕಾಯಂ ಪ್ರೇಕ್ಷಕರು. ನಾವು ಮಕ್ಕಳು ಮುಂದಾಗಿ ಹೋಗಿ ಟಿಕೆಟ್ ಮಾಡಿಸಿಡುವುದು; ದೊಡ್ಡವರು ಆಮೇಲೆ ಬಂದು ಸೇರಿಕೊಳ್ಳುವುದು ಮಾಮೂಲಿ. ಆರೂವರೆ ಗಂಟೆಯ ಷೋಗೆ ಮನೆಯಿಂದ ಐದು ಗಂಟೆಗೇ ಎದ್ದು ಬಿದ್ದು ಓಡುತ್ತಿದ್ದೆವು. ಥಿಯೇಟರ್ ಹತ್ತಿರವಾಗ್ತಾ ಇರಬೇಕಾದ್ರೆ ಅಲ್ಲಿ ನಾಲ್ಕೆಂಟು ಜನ ಸರತಿ ಸಾಲಿನಲ್ಲಿದ್ರೂ, `ಅಯ್ಯೋ ನಮ್ಗೆ ಟಿಕೆಟ್ ಸಿಗುತ್ತೋ ಇಲ್ವೋ, ಎಷ್ಟೊಂದ್ ಜನ ಇದ್ದಾರೆ' ಅಂತ ಚಡಪಡಿಸ್ತಿದ್ದೆವು.ಕಾಫಿಗಾಗಿ ಕಾಯ್ತಾ ನನ್ನ ಬಾಲ್ಯದ ದಿನಗಳನ್ನು ನೆನೆಸಿಕೊಳ್ತಾ ಹೀಗೆ ಒಂದಾನೊಂದು ಕಾಲಕ್ಕೆ ನಾನು ಹೋಗಿದ್ದಾಗ, ಹೃದಯದ ಚಿತ್ತಾರವನ್ನು ತೇಲಿಸಿಕೊಂಡ ದುಬಾರಿ ಕಾಫಿ ಬಂತು; ಕುಡಿದೆವು. ಟೊಮ್ಯಾಟೊ ಸಾಸ್ ಇಲ್ದೆ, ತಿನ್ನಲಾರದ ಪಪ್ಸ್ ತಿಂದೆವು. ಆ ಪಾಟಿ ದುಡ್ಡು ಕೊಟ್ಟು ಅಲ್ಲಿಂದ ಹೊರಬಂದೆವು. ಥಿಯೇಟರ್ ಒಳಗೆ ಹೋದೆವು. ಹಿಂದಿನಂತೆ ಸಿನಿಮಾಗೆ ಹೌಸ್‌ಫುಲ್ ಆಗುವುದು ಬಿಡಿ, ಅಷ್ಟು ದೊಡ್ಡ ಸಿನಿಮಾ ಹಾಲ್‌ನಲ್ಲಿ ಒಂದ್ ಐವತ್ತು ಜನ ಇದ್ದಿರಬಹುದು ಅಷ್ಟೆ. ಈಗ ಮನೆಮನೆಗಳಲ್ಲಿ ಅಷ್ಟೊಂದು ಚಾನೆಲ್‌ಗಳು, ಅವುಗಳಲ್ಲಿ ದಿನಕ್ಕೆ ನಾಲ್ಕೈದು ಸಿನಿಮಾಗಳು. ಸಿನಿಮಾ ಥಿಯೇಟರ್‌ಗೆ ಯಾಕೆ ಬರ್ತಿರ್ತಾರೆ ಜನ? ನಾನು ಕೂಡ ಥಿಯೇಟರ್‌ಗೆ ಬಂದು ಸಾಕಷ್ಟು ಕಾಲವಾಗಿತ್ತು. ಅವತ್ತು ನಾನು ಎಷ್ಟೋ ಸಮಯದ ನಂತರ ನನ್ನ ಬಿಡುವಿಲ್ಲದ ಜಂಜಾಟಗಳಿಂದ ತಾತ್ಕಾಲಿಕ ಬಿಡುಗಡೆ ಪಡೆದು ದೊಡ್ಡ ತೆರೆಯ ಮೇಲೆ  ಬೆರಗು, ಸಂಭ್ರಮದಿಂದ ಸಿನಿಮಾವನ್ನು ನೋಡಿದೆ.ನಂತರ ಹೊರಬಂದು ರಸ್ತೆಗಿಳಿದರೆ ರಶ್ಶೋ ರಶ್ಶು. ವಾಹನಗಳ ಭರಾಟೆ, ಹೆಡ್‌ಲೈಟ್‌ನ ಕಣ್ಣು ಕೋರೈಸುವ ಬೆಳಕು, ರಸ್ತೆ ದಾಟುವುದಕ್ಕೆ ಹರಸಾಹಸ ಮಾಡಬೇಕು. ಎಲ್ಲರಿಗೂ ಧಾವಂತ. ಅಯ್ಯೋ ಇಷ್ಟೊಂದು ಅವಸರದಲ್ಲಿ ನಾನು ಹೇಗಪ್ಪಾ ಹೋಗ್ಲಿ? ಅಂತೂ ಒಬ್ಬರ ಕೈ ಒಬ್ಬರು ಹಿಡಿದು ದಾಟಿದೆವು. ಎಲ್ಲಿ ನೋಡಿದ್ರೂ ಆಕಾಶ ಮುಟ್ಟೋ ಕಟ್ಟಡಗಳು; ಅದರ ತುದಿ ನೋಡೋದಕ್ಕೆ ಹೋದರೆ ಕುತ್ತಿಗೆಯೇ ಮುರಿದು  ಬೀಳಬೇಕು. ಅಷ್ಟು ಎತ್ತರ, ಆಕಾಶವೇ ಇಲ್ಲ! ಇನ್ನು ನಕ್ಷತ್ರಗಳೆಲ್ಲಿ? ಚಂದಿರ ಎಲ್ಲಿ? ಅಕ್ಕಪಕ್ಕ ಎಲ್ಲಿಯೂ ಮರ, ಗಿಡ, ಹೂ ಬಳ್ಳಿಗಳಿಲ್ಲ. ಅಂದ ಮೇಲೆ ಬಣ್ಣಗಳೆಲ್ಲಿ? ನಿದ್ರೆಯೇ ಇಲ್ಲದ ಮೇಲೆ ಕನಸುಗಳೆಲ್ಲಿ?ಹೀಗೇಕಾಗ್ತಿದೆ? `ಅಭಿವೃದ್ಧಿ' ಅಂತಾರಲ್ಲ, ಅದು ಇದೇ ಏನು? ನನ್ನಜ್ಜಿ ಈಗ ಬದುಕಿಲ್ಲ. ಇದ್ದಿದ್ದರೆ! ಬಹುಶಃ ಇದೇ ಇರಬೇಕು ಅನ್ನಿಸುತ್ತದೆ ನನ್ನ ನಿದ್ದೆ ಕೆಡಿಸಿದ್ದು ಅಥವಾ...!?

 

Post Comments (+)