ಕಾಲದೊಂದಿಗೆ ಜೀವನಚಕ್ರ ಸಮನಾಗಿ ಸಾಗಲಿ

7
ಶಿವಮೂರ್ತಿ ಮುರುಘಾ ಶರಣರ ಸಲಹೆ

ಕಾಲದೊಂದಿಗೆ ಜೀವನಚಕ್ರ ಸಮನಾಗಿ ಸಾಗಲಿ

Published:
Updated:

ಚಿತ್ರದುರ್ಗ: ಕಾಲಚಕ್ರದ ಜತೆ ಜೀವನ ಚಕ್ರವನ್ನು ಸಮನಾಗಿ ಜೋಡಿಸಿ, ಬದುಕಿನ ಬಂಡಿಯನ್ನು ಎಳೆದುಕೊಂಡು ಹೋಗುವ ಮೂಲಕ ಕಳೆದ ವರ್ಷದ ಕಹಿ ಘಟನೆಗಳ ತಿದ್ದುಪಡಿ ಮಾಡಿಕೊಂಡು ಸಿಹಿ ಘಟನೆಗಳ ಪುನರಾವರ್ತನೆ ಮಾಡಿಕೊಳ್ಳುವಂತೆ ಮುರುಘಾಮಠದ ಶಿವಮೂರ್ತಿ ಶರಣರು ಸಲಹೆ ನೀಡಿದರು.ನಗರದ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿರುವ ಸಾಟಿ ವಿಲಾಸದಲ್ಲಿ ಬುಧವಾರ ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕೃತಿಕ ಪ್ರತಿಷ್ಠಾನ, ಬೆನಕ ಮನರಂಜನಾ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೧೫ನೇ ನೂತನ ವರ್ಷಾಚರಣೆ ಮತ್ತು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.ಹೊಸ ವರ್ಷ ಎಂದರೆ ಒಳಿತನ್ನು ಬಯಸುವುದು. ಒಬ್ಬರಿಗೊಬ್ಬರು ಶುಭಾಶಯ ಕೋರುವುದು ಮೂಲ ಉದ್ದೇಶವಾಗಿದೆ. ಬದುಕಿನಲ್ಲಿ ಹೇಳಿದ್ದು ಘಟಿಸುತ್ತದೆನ್ನುವ ನಂಬಿಕೆ ಮಾನವನ ಸಹಜ ಗುಣ. ಹಾಗಂತ ಎಲ್ಲವನ್ನೂ ದೇವರ ಮೇಲೆ ಹಾಕಿ ಸುಮ್ಮನೆ ಕೂರಬಾರದು. ಮಾನವ ಪ್ರಯತ್ನ ನಿರಂತರವಾಗಿರಬೇಕು ಎಂದು ತಿಳಿಸಿದರು.ಕಾಲಚಕ್ರ ಯಾರಿಗೂ ಕಾಯದೇ ಉರುಳುತ್ತಿರುತ್ತದೆ. ಆದರೆ, ಸಮಯದ ಮಹತ್ವ ಅರ್ಥ ಮಾಡಿಕೊಂಡು ಕಾಲಕ್ಕೆ ಮಹತ್ವ ಕೊಡುವವರು ಕಾಲದ ಜತೆ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗುತ್ತಾರೆ. ಹಿಂದಿನ ಕಾಲದಲ್ಲಿ ಬಂಡಿಯನ್ನು ಎಳೆಯಲು ಎತ್ತುಗಳನ್ನು ಕಟ್ಟುತ್ತಿದ್ದರು. ಪ್ರಸ್ತುತ ಯಾಂತ್ರಿಕ ಜೀವನದ ಸಂಸಾರದ ಬಂಡಿ ಎಳೆಯಬೇಕಾದರೆ ಜವಾಬ್ದಾರಿಯಿಂದ ನಡೆಯಬೇಕು ಎಂದರು.ಸಂಶೋಧಕ ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಮೋಜು ಮಸ್ತಿಯಿಂದ ಎಲ್ಲರೂ ಹೊಸ ವರ್ಷ ಆಚರಿಸುತ್ತಿದ್ದಾರೆ. ಆದರೆ, ಸಾಟಿ ಚೆನ್ನಮ್ಮ ಹಾಲಪ್ಪ ಸಾಂಸ್ಕೃತಿಕ ಪ್ರತಿಷ್ಠಾನ ರಾಜಶೇಖರಪ್ಪ ಅವರಿಗೆ ಸನ್ಮಾನ ಮಾಡುವ ಮೂಲಕ ಹೊಸ ವರ್ಷವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿರುವುದು ವಿಶೇಷ. ವಾಣಿಜ್ಯ ಪ್ರವೃತ್ತಿ ಜತೆಗೆ ಸಾಂಸ್ಕೃತಿಕ ಪ್ರವೃತ್ತಿ ಬೇಕು. ಸಂಶೋಧನೆಯಲ್ಲಿ ಸಾಧನೆ ಮಾಡಿರುವ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣ ಎಂದು ಹೇಳಿದರು.ಸಂಶೋಧನೆಯ ಹುಚ್ಚು ಬೆಳೆಸಿಕೊಂಡಿರುವ ರಾಜಶೇಖರಪ್ಪ ಸಾಹಿತ್ಯ ಸಂಶೋಧನೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ಅವರನ್ನು ಆದರ್ಶವಾಗಿರಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಸಲಹೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ‘ಎಲ್ಲರ ಉತ್ತೇಜನದಿಂದ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದೇನೆ.ಮುಂದೆ ಇನ್ನು ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ. ಐತಿಹಾಸಿಕ ಚಿತ್ರದುರ್ಗದ ಚಾರಿತ್ರಿಕ ಪರಂಪರೆಯ ಕೋಟೆ, ಶಾಸನಗಳು, ನನ್ನನ್ನು ಸೆಳೆದುಕೊಂಡಿದೆ. ಮೊದಲಿನಿಂದಲೂ ನನ್ನ ನಡೆಯಲ್ಲ ಕೋಟೆ ಕಡೆ ಇತ್ತು. ಪದವಿಯಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದರು ಕೂಡ ಸಾಹಿತ್ಯದ ಕಡೆ ಒಲವು ಹೆಚ್ಚಾಗಿತ್ತು. ದುರ್ಗದ ಪಾಳೆಗಾರರು, ದೊರೆಗಳ ಬಗ್ಗೆ ಶಾಸನಗಳನ್ನು ಬರೆಯಲು ಪ್ರೇರೇಪಿಸಿತು. ಕೆಲವೊಮ್ಮೆ ರೋಮಾಂಚನ, ಇಕ್ಕಟ್ಟಿನ ಸಂದರ್ಭ ಎದುರಾಗಿತ್ತು ಎಂದು ನೆನಪಿಸಿಕೊಂಡರು.ಸಾಕ್ಷಾಧಾರಗಳು ಮೌನ ವಹಿಸಿದಾಗ ಸ್ಥಳನಾಮಗಳು ಮಾತನಾಡುತ್ತವೆ. ಮುಂದೆ ಇತಿಹಾಸಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ಮಾಡಬೇಕಾದುದು ಇನ್ನು ಬಹಳಷ್ಟಿದೆ. ಅದಕ್ಕೆ ಎಲ್ಲರ ಪ್ರೀತಿ, ವಿಶ್ವಾಸ ಹಾಗೂ ಪ್ರೇರಣೆ ಅತಿ ಮುಖ್ಯ ಎಂದು ಮನವಿ ಮಾಡಿದರು.

ಸಾಹಿತಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಪಾಟೀಲ್ ಅಭಿನಂದನಾ ಪತ್ರ ಓದಿದರು. ಸತೀಶ್‌ಕುಮಾರ್ ಜೆಟ್ಟಿ ಪ್ರಾರ್ಥಿಸಿದರು. ಅರುಣ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry