ಕಾಲನ್ಯಾಯದ ಕನ್ನಡಿ

7

ಕಾಲನ್ಯಾಯದ ಕನ್ನಡಿ

Published:
Updated:
ಕಾಲನ್ಯಾಯದ ಕನ್ನಡಿ

ಶ್ರೇಷ್ಠರಲ್ಲಿ ಶ್ರೇಷ್ಠರು ನೆಲ ಕಚ್ಚಿದರು/ ಮರಳುಗಾಡಿನಲ್ಲೆಲ್ಲೋ ಸಮಾಧಿಯಾದರು/ಕಣ್ಣೀರು ಸುರಿಸುವವರಾರೂ ಇರಲಿಲ್ಲ/ ಅಪರಿಚಿತ ಕೈಗಳು ಗೋರಿಯೆಡೆ ಒಯ್ದವು/ ಅವರ ಸಾಧನೆಗಳ ಸಾರುವ/ ಶಿಲುಬೆಯಿಲ್ಲ, ಚೌಕಟ್ಟಿಲ್ಲ, ಗೋರಿಕಲ್ಲೂ ಇಲ್ಲ.ಗೋರಿ ಮೇಲೇ ಗರಿಕೆ ಚಿಗುರುತ್ತದೆ/ ಕೆಳಬಾಗುವ ಗರಿಕೆ ಎಳೆ ಗುಟ್ಟು ಬಚ್ಚಿಡುತ್ತದೆ /ರೋಷಗೊಂಡು ತೀರಕ್ಕೆ ಅಪ್ಪಳಿಸಿ/ ಏರಿ ಬರುವ ಅಲೆಗಳೇ ಸಾಕ್ಷಿ.../ ಆ ಬಲಶಾಲಿ ಅಲೆಗಳೂ/ ದೂರ ತೀರದ ಮನೆಯ ಬಂಧುಗಳಿಗೆ / ವಿದಾಯದ ಕೊನೆ ಹಾರೈಕೆ ಮುಟ್ಟಿಸದಾದವು.                               

                                                                                       -ವೆರಾ ನಿಕೋಲಯೆವಾ ಫಿಗ್ನರ್

`ಜನವರಿ 8, 1864ರಂದು ಮಡಿದ, ಇಂಡಿಯನ್ ನೇವಿ ನೇವಲ್ ಬ್ರಿಗೇಡ್‌ನ ಬೆಂಜಮಿನ್ ಲಿವಾನ್, 25 ವರ್ಷ 6 ತಿಂಗಳು, ಅವರ ನೆನಪಿನಲ್ಲಿ ಹಡಗಿನ ಸಂಗಾತಿಗಳು (ಶಿಪ್‌ಮೇಟ್ಸ್) ನಿಲಿಸಿದ್ದು~.`25-1-1825ರಲ್ಲಿ ಕಿಂಗ್ಸ್‌ಟನ್‌ನಲ್ಲಿ ಹುಟ್ಟಿದ, 20.7.1861ರಂದು ಪೋರ್ಟ್‌ಬ್ಲೇರ್‌ನಲ್ಲಿ ಮಡಿದ ಡಬ್ಲ್ಯೂ.ಎಚ್.ಈಲ್ಸ್ ಅವರ ಪವಿತ್ರ ನೆನಪಿಗೆ ನಿಲ್ಲಿಸಲಾಗಿದೆ~.

`ಜಾನ್.ಡಬ್ಲ್ಯೂ.ವುಡ್ - 25 ವರ್ಷ 27 ದಿವಸ - ನೆನಪಿನಲ್ಲಿ~.`ಬೆಂಜಮಿನ್ ಲಿವರೆಡ್. 25 ವರ್ಷ 6 ತಿಂಗಳು, ಸಹಯಾತ್ರಿಕರು ನಿಲ್ಲಿಸಿದ್ದು~.

ಇವು ತಮ್ಮ ನೆಲದಿಂದ ಸಾವಿರಾರು ಮೈಲು ದೂರದ ದ್ವೀಪವೊಂದರಲ್ಲಿ ಮರಣ ಹೊಂದಿ, ಸ್ನೇಹಿತರಿಂದ ಅಂತ್ಯ ಸಂಸ್ಕಾರಕ್ಕೆ ಒಳಗಾದ ಬ್ರಿಟಿಷ್ ತರುಣರ ಗೋರಿ ಮೇಲಿನ ಬರಹಗಳು.ಉದ್ಯೋಗಾವಕಾಶದ ತರುಣ ಹುಮ್ಮಸ್ಸಿಗೋ, ಪ್ರಭುತ್ವದ ವಿಸ್ತರಣಾದಾಹಕ್ಕೋ ಅಂತೂ ಕಂಪನಿಯಲ್ಲಿ, ಸೈನ್ಯದಲ್ಲಿ ನೌಕರಿ ಸೇರಿ ಈ ದೂರ ದೇಶ ಭಾರತಕ್ಕೆ ಬಂದವರು `ಪರದೇಶಿ~ಗಳಾಗಿ ಮರಣಹೊಂದಿ ಭಾರತದ ಉದ್ದಗಲಕ್ಕೆ ಅಲ್ಲ್ಲ್ಲಲಿ ಗೋರಿಗಳಲ್ಲಿ ಮಲಗಿದವರಿದ್ದಾರೆ. ಅಂಡಮಾನ್ ರಾಜಧಾನಿ ಪೋರ್ಟ್‌ಬ್ಲೇರಿನ ಯಾವ ದಂಡೆಯಲ್ಲಿ ನಿಂತು ನೋಡಿದರೂ ಕಾಣುವ; ಅಂಡಮಾನ್ ದ್ವೀಪಸಮೂಹಗಳಲ್ಲಿಯೇ ಅತಿ ಪುಟ್ಟದಾದ ಹಸಿರು ದ್ವೀಪ ರಾಸ್‌ಐಲೆಂಡ್‌ನ ಪಾಳುಬಿದ್ದ ರುದ್ರಭೂಮಿಯಲ್ಲಿ ಇಂಥ ಬರಹ ಹೊತ್ತ ಸಾಲುಸಾಲು ಗೋರಿಗಳಿವೆ.ಗೋರಿ ಫಲಕಗಳ ಬರಹಗಳು ಪರದೇಶಿ ಎಳೆಯರ ಸಾವು, ಅನಾಥ ಸಾವಿಗೆ ಕಾರಣ, ಶವ ಸಂಸ್ಕಾರದ ಸಂದರ್ಭಗಳನ್ನು ಕಣ್ಮುಂದೆ ಚಿತ್ರಿಸಿ ಕರುಳು ಕಿವುಚುತ್ತವೆ. ಕೆಲವು ಇಂದಿಗೂ ಸುಸ್ಥಿತಿಯಲ್ಲಿದ್ದರೆ ಮತ್ತೆ ಕೆಲ ಗೋರಿಗಳ ಅಮೃತಶಿಲಾ ಫಲಕಗಳನ್ನು ಕಿತ್ತು ಹಾಕಲಾಗಿದೆ. `ರಾಸ್ ಐಲೆಂಡ್~ ಎಂಬ ಬ್ರಿಟಿಷರು ಸೃಷ್ಟಿಸಿಕೊಂಡ ಮಿನಿ ಇಂಗ್ಲೆಂಡಿನಲ್ಲಿ ನೂರಾರು ವರ್ಷ ಕಳೆದ ನಂತರ ಈಗ ಗೋರಿಗಳಲ್ಲಿ ಮಲಗಿದವರ ಹೊರತು ಬ್ರಿಟಿಷ್ ಗಂಧ ಏನೂ ಉಳಿದಿಲ್ಲ, ಮಡಿದವರ ನೆನಪು ಈಗ ಯಾರಿಗೂ ಇಲ್ಲ. 

 

ಮೇನ್‌ಲ್ಯಾಂಡಿನಿಂದ ಸಾವಿರಾರು ಕಿಮೀ ದೂರವಿರುವ ಅಂಡಮಾನ್ ದ್ವೀಪಗಳನ್ನು ತಂಟೆಕೋರರನ್ನು ಶಿಕ್ಷಿಸುವ, ಗಡೀಪಾರುಗೊಳಿಸುವ ತಾಣವಾಗಿ ಬ್ರಿಟಿಷರು ಗುರುತಿಸಿದ್ದರು. ಅಪರಾಧಿಗಳನ್ನು ಬಯಲ ಬಂದೀಖಾನೆಯಲ್ಲಿ ಬಿಡುತ್ತಿದ್ದ ಅವರಿಗೆ ದ್ವೀಪದ ಕಾಡು, ನರಭಕ್ಷಕ ಮೂಲನಿವಾಸಿಗಳು, ತಮಗಿಂತ ಹತ್ತು ಪಟ್ಟು ಹೆಚ್ಚು ಸಂಖ್ಯೆಯ ಬಂದಿಗಳ ನಡುವೆ ಪೋರ್ಟ್‌ಬ್ಲೇರ್ ಎಂಬ ಜೈಲು ನಗರದಲ್ಲಿ ಸುರಕ್ಷಿತ ವಾಸ ಕಷ್ಟ ಎನಿಸಿತು.ಆಗ ಪೋರ್ಟ್‌ಬ್ಲೇರ್‌ನಿಂದ ಕಣ್ಣಳತೆಯ ದೂರದಲ್ಲಿರುವ ಪುಟ್ಟ ರಾಸ್ ದ್ವೀಪ ಮೈಮೇಲಿನ ಕಾಡುಬೆಟ್ಟಗಳ ಸವರಿಕೊಂಡು ಮಿನಿ ಇಂಗ್ಲೆಂಡಾಗಲು ಹೊರಟಿತು. ಬ್ರಿಟಿಷ್ ಅಧಿಕಾರಿಗಳ ಆಡಳಿತ ಕಚೇರಿ, ವಸತಿ, ಆಸ್ಪತ್ರೆ, ಸೆಕ್ರೆಟರಿಯೇಟ್, ಮುದ್ರಣಾಲಯಗಳು ಎದ್ದು ನಿಂತವು. ಕುಡಿಯುವ ನೀರಿನ ಕೊರತೆ ಕಂಡುಬಂದು ಸಮುದ್ರದ ನೀರನ್ನು ಬಟ್ಟಿಯಿಳಿಸಿ ಶುದ್ಧೀಕರಿಸುವ ಘಟಕ ಕಟ್ಟಿದರು.

 

ಸಂಸಾರವಂದಿಗ ಅಧಿಕಾರಿಗಳು ಬಂದಾಗ ಕುಟುಂಬ ವಸತಿಗೆ ತಕ್ಕುದಾಗಿ ಬಾಲವಾಡಿ, ಮೃಗಾಲಯ, ಟೆನಿಸ್ ಕೋರ್ಟ್, ಬೇಕರಿ, ಆಫೀಸರ್ಸ್ ಕ್ಲಬ್, ಸಬಾರ್ಡಿನೇಟ್ಸ್ ಕ್ಲಬ್, ಚರ್ಚ್, ಈಜುಕೊಳ, ಪಾರ್ಕ್‌ಗಳೆಲ್ಲ ಸಿದ್ಧವಾದವು. ಇಷ್ಟೆಲ್ಲ ಇದ್ದ ಮೇಲೆ ಸ್ಮಶಾನವೂ ಇರಲೇಬೇಕು. ಹೌದು, ರಾಸ್ ಐಲೆಂಡಿನ ರುದ್ರಭೂಮಿಯೂ ವಿಶಾಲಗೊಳ್ಳುತ್ತಾ ಹೋಯಿತು.

 

ಅಂಡಮಾನ್‌ಗೆ ಬಂದು ಆಡಳಿತ ಕಾರಣಗಳಿಗೆ ತೀರಿಕೊಂಡ, ಸಮುದ್ರಯಾನದ ವೇಳೆ ದುರ್ಮರಣಕ್ಕೀಡಾದ, ಮಲೇರಿಯಾ ಇನ್ನಿತರ ಕಾಯಿಲೆಗೆ ಜೀವ ತೆತ್ತವರನ್ನು ರಾಸ್ ತನ್ನ ಮಡಿಲಿಗೆ ಹಾಕಿಕೊಂಡಿತು.ಎಲ್ಲವನ್ನು ಕಟ್ಟಲು, ಸ್ವಚ್ಛಗೊಳಿಸಲು, ಶ್ರಮದ ಕೆಲಸ ಮಾಡಲು ಬಂದಿಗಳೆಂಬ ಪುಕ್ಕಟೆ ಕೆಲಸದಾಳುಗಳಿದ್ದಾಗ ಯಾವ ವೈಭೋಗಕ್ಕೂ ಬ್ರಿಟಿಷರು ಕಡಿಮೆ ಮಾಡಿಕೊಳ್ಳಲಿಲ್ಲ. ಕೈಕಾಲಿಗೊಂದೊಂದು ಆಳುಕಾಳುಗಳನ್ನಿಟ್ಟುಕೊಂಡು ಇಂಗ್ಲೆಂಡಿನ ಉಚ್ಛವರ್ಗದ ರೀತಿಯಲ್ಲಿ ಬದುಕು ರೂಢಿಸಿಕೊಂಡರು. ಅಲ್ಲಿ ಬದುಕಿದವರು ಇಂಗ್ಲೆಂಡಿನ ಬಂಧುಗಳಿಗೆ ಬರೆದ ಪತ್ರದಲ್ಲಿ ತಮ್ಮ ಸುಖಜೀವನದ ಕುರಿತು ವರ್ಣಿದ್ದಾರೆ.ಆದರೆ ಯಾವ ವೈಭೋಗವೂ ನಿರಂತರವಲ್ಲ.ಹೀಗೆ ಎಲ್ಲವೂ ತಮ್ಮ ಹಿಡಿತದಲ್ಲಿದೆ, ತಮ್ಮವರ ನಡುವೆ ಸುರಕ್ಷಿತವಾಗಿದ್ದೇವೆ ಎಂಬ ಭ್ರಮೆ ಹುಟ್ಟಿಸುವ ವಾತಾವರಣ ನಿರ್ಮಿಸಿಕೊಂಡ ಬ್ರಿಟಿಷರು ಎರಡನೇ ಮಹಾಯುದ್ಧದವರೆಗೂ ಹೀಗೆಯೇ ಬದುಕಿದರು. 1942ರಲ್ಲಿ ಜಪಾನ್ ಹಾಕಿದ ಬಾಂಬ್ ರಾಸ್ ಐಲೆಂಡ್ ಮೇಲೆ ಬಿತ್ತು. ಬದಲಾದ ಅಂತರರಾಷ್ಟ್ರೀಯ ಸಂಬಂಧಗಳು ಭಾರತದಲ್ಲಿ ಬ್ರಿಟಿಷ್ ಆಡಳಿತದ ಮೇಲೂ ಪರಿಣಾಮ ಬೀರಿದವು. ಮೂರು ವರ್ಷಗಳ ಕಾಲ ಅಂಡಮಾನ್ ಜಪಾನ್ ಕೈಸೇರಿ ರಾಸ್ ದ್ವೀಪ ನಾಶವಾಗತೊಡಗಿತು.ಬ್ರಿಟಿಷರು, ಬ್ರಿಟಿಷರ ಪರವಾಗಿದ್ದಾರೆಂಬ ಅನುಮಾನವಿರುವ ಎಲ್ಲ ಸ್ಥಳೀಯರನ್ನೂ ಗಿಡಮರಗಳಂತೆ ತರಿದು ಹಾಕಿದ ಜಪಾನ್, ರಾಸ್ ಅನ್ನು ಪೂರ್ಣ ತೆರವುಗೊಳಿಸಿ ತನ್ನ ಯುದ್ಧ ಬಂಕರನ್ನು ನಿರ್ಮಿಸಿಕೊಂಡಿತು. ಆದರೆ ಅವರ ವಿಜಯವೂ ಹೆಚ್ಚು ಸಮಯ ಬಾಳಲಿಲ್ಲ. ಜಪಾನ್ ಮೇಲೆ 1945ರಲ್ಲಿ ಮಿತ್ರಪಡೆಗಳ ಬಾಂಬ್ ದಾಳಿ ಹಾಗೂ ಜಪಾನ್ ಸೋಲಿನ ನಂತರ ಅಂಡಮಾನ್ ಮತ್ತೆ ಬ್ರಿಟಿಷರ ಸುಪರ್ದಿಗೆ ಬಂತು, ರಾಸ್ ಕೂಡಾ ಅವರ ಕೈ ಸೇರಿತು. ಆದರೂ ರಾಸ್‌ನ ವೈಭವದ ದಿನಗಳು ಸರಿದುಹೋಗಿದ್ದವು.

 

ಭಾರತ ಸ್ವತಂತ್ರಗೊಂಡ ಮೇಲೆ ಅಕ್ಷರಶಃ ಅದು ಪಾಳುಭೂಮಿಯಾಗಿತ್ತು. ಅಂಡಮಾನ್ ಪ್ರವಾಸೋದ್ಯಮ ಚಿಗುರೊಡೆಯತೊಡಗಿದಾಗ ಅದಕ್ಕೆ `ಐತಿಹಾಸಿಕ ಸ್ಮಾರಕ~ ಪಟ್ಟ ಲಭಿಸಿ ಉಸಿರಾಡುವ ಜೀವಗಳು ಗೋರಿ, ಅವಶೇಷಗಳ ನಡುವೆ ಸುಳಿಯತೊಡಗಿದ್ದವು. ಅಷ್ಟರಲ್ಲಿ ಸುನಾಮಿ ಮತ್ತೊಮ್ಮೆ ರಾಸ್ ಅನ್ನು ಪಾಳುನೆಲವಾಗಿಸಿತು.

ಕಾಲನ್ಯಾಯವೆಂದರೆ ಇದೇ?

ಒಂದು ಕಾಲದಲ್ಲಿ ವೈಭವದಿಂದ ಮೆರೆದ ಈ ದ್ವೀಪದ ಸ್ಥಾವರಗಳನ್ನು ಇಂದು ಆಲದ ಬಿಳಲು-ಬೇರುಗಳು ಆವರಿಸಿ, ಸದ್ದಿಲ್ಲದೆ ಆಳಗಲಕ್ಕೆ ಇಳಿದು ಚೂರುಚೂರಾಗಿಸಿ ತಮ್ಮ ಕಪಿಮುಷ್ಠಿಯೊಳಗೆ ಹಿಡಿದಿಟ್ಟುಕೊಂಡಿವೆ. ತನ್ನದಲ್ಲದ ನೆಲದಲ್ಲಿ ಎಷ್ಟೇ ವ್ಯವಸ್ಥಿತವಾಗಿ ವಸಾಹತು ನಿರ್ಮಿಸಿಕೊಂಡರೂ, `ಕಾಲ~ದೆದುರು ನಿಲ್ಲುವುದು ಸಾಧ್ಯವಿಲ್ಲ. ಬಿತ್ತದೇ, ನೀರು ಹನಿಸದೇ, ನೆಲವಿಲ್ಲದೆ, ಗಾಳಿಯ ತಂಪು ಹೀರಿ ಸೊಕ್ಕಿ ಬೆಳೆವ `ಆಲ ಗುಣ~ ಕಾಲದ ಗುಣವೂ, ಈ ನೆಲದ ಗುಣವೂ ಆಗಿದೆ. ಬ್ರಿಟಿಷರೋ, ಜಪಾನೀಯರೋ, ಭಾರತೀಯರೋ; ಮೊಗಲರೋ, ಮರಾಠರೋ; ವಿಜಯನಗರವೋ, ಬನವಾಸಿಯೋ - ಈ ನ್ಯಾಯ ಎಲ್ಲರಿಗೂ ಒಂದೇ.ಇದಕ್ಕೆ ಸಾಕ್ಷಿಯಾಗಿ ರಾಸ್‌ನ ಅವಶೇಷಗಳು ನಿಂತಿವೆ. ಈ ಭಾರತವೆಂಬೋ ಮಹಾನ್ ಭಾರತವೂ ಆಲದ ಮರದಂತೆಯೇ.. ಸದ್ದಿಲ್ಲದೆ ಎಲ್ಲವನ್ನು ಒಳಗುಮಾಡಿಕೊಂಡು ಕೊನೆಗದರ ಅಸ್ಥಿಪಂಜರವನ್ನಷ್ಟೇ ಉಳಿಸಿ ಮೂಲ ಅಸ್ತಿತ್ವವನ್ನೇ ಮರೆಸಿಬಿಡುತ್ತದೆ. ಮೊಹೆಂಜೊದಾರೋ, ಅಜಂತಾಗಳಿಂದ ಹಿಡಿದು ಹಂಪೆ-ರಾಸ್ ಐಲೆಂಡ್ ತನಕ ಅವಶೇಷಗಳ ಸರಮಾಲೆ ಸೃಷ್ಟಿಸಿದ್ದು ಇದೇ `ಕಾಲನೀತಿ~.ಕಾಲ-ನೀತಿಯ ಮಾತು ಒತ್ತಟ್ಟಿಗಿರಲಿ; ಆ ಕಟ್ಟಡಗಳ ಅವಶೇಷ ನೋಡುತ್ತಿದ್ದರೆ ಅಳಿದು ಹೋದ ಗತವೈಭವಕ್ಕೆ ಮನಸು ಮರುಗುವುದಿಲ್ಲ. ಬ್ರಿಟಿಷರಾಗಲೀ ಯಾರೇ ಆಗಲಿ, ಯಾವ ಹೆತ್ತಮ್ಮನೋ ಬೆಳೆಸಿದ ಆ ಎಳೆಯ ತರುಣರು ಸಾವಿರಾರು ಮೈಲು ದೂರದ ದ್ವೀಪವೊಂದರಲ್ಲಿ ಹೋರಾಡುತ್ತ ಕೈಕಾಲು, ಜೀವ ಕಳೆದುಕೊಂಡು ಲಯ ವಾಗುವುದೆಂದರೆ? ಸ್ನೇಹಿತರಿಂದ ಅಂತ್ಯ ಸಂಸ್ಕಾರಕ್ಕೊಳಗಾಗುವುದೆಂದರೆ? ಇಲ್ಲಷ್ಟೇ ಅಲ್ಲ, ಇದಷ್ಟೇ ಅಲ್ಲ, ಇಂಥ ಎಷ್ಟು ಲಕ್ಷ ಕೋಟಿ ಜೀವಗಳು ಎಲ್ಲೆಲ್ಲಿ ಪ್ರಾಣ ಒಪ್ಪಿಸಿವೆಯೋ? ವ್ಯಾಪಾರೀ ಮತ್ತು ವಿಸ್ತರಣಾ ದಾಹಕ್ಕೆ ಸಾಮ್ರಾಜ್ಯಗಳು ತಮ್ಮದೇ ನೆಲದ, ಶತ್ರು (?) ನೆಲದ ಎಷ್ಟು ತರುಣರನ್ನು ಹೀಗೆ ಬಲಿಗಂಬಕ್ಕೇರಿಸಿದವೋ? ಅಷ್ಟಕ್ಕೂ ಯಾರು ಯಾರಿಗೆ ಶತ್ರು? ಆಪತ್ಕಾಲದಲ್ಲಿ ರಕ್ಷಣೆಗಾಗಿ ಹಿಂಸೆಯ ಮೊರೆ ಹೋಗುವುದು ಪ್ರಾಣಿ ರಾಜ್ಯದಲ್ಲೂ ಕಾಣಬಹುದು.ಆದರೆ ತನ್ನದೇ ಕುಲದ ಇತರ ಜೀವಿಗಳನ್ನು ಹಿಂಸಿಸಲು ಮಾನವನಿಗಿರುವ ಕಾರಣ ದ್ವೇಷ ಮತ್ತು ಕಳೆದುಕೊಳ್ಳುವ ಭಯ. ಅದಕ್ಕೆ ಬೇರೆಬೇರೆ ಉದಾತ್ತ ಶೀರ್ಷಿಕೆಗಳ ಭಾರ. ನಿರುದ್ದಿಶ್ಶ ದ್ವೇಷ ಮನುಷ್ಯ ಜೀವಿಯ ಹೆಗ್ಗಳಿಕೆಯಾಗಿ ಪಾಪಪ್ರಜ್ಞೆಯಿಲ್ಲದೇ ಆತ ತನ್ನ ಕುಲದ ಇತರ ಜೀವಿಗಳನ್ನು ಕೊಂದು ರಾಶಿ ಎಳೆಯಲು ಸಾಧ್ಯವಾಗಿದೆ.  ಈ ಇಂಥ ಸಾವಿಗೆ ವೀರಮರಣವೆಂಬ ಹೆಸರು! ಯುದ್ಧ ಮತ್ತು ಅಧಿಕಾರ - ಎಂಥ ಅಫೀಮುಗಳು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry