ಮಂಗಳವಾರ, ಮೇ 18, 2021
24 °C

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು:  ನಗರಸಭೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ ಕೆಲ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿರುವುದು, ಇನ್ನು ಕೆಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದಕ್ಕೆ ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.ಇಲಾಖೆಗಳ ನಡುವೆ ಸಮನ್ವಯ ಕೊರತೆ ಇರುವ ಬಗ್ಗೆಯೂ ಬೊಟ್ಟು ಮಾಡಿದ ಸಚಿವರು, ಒಂದೊಂದು ಕಾಮಗಾರಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಭೆ ಸೇರಿ, ಪರಸ್ಪರ ಚರ್ಚಿಸಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬೀಳದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.ಕೋಟೆ ಕೆರೆ ಹಾಗೂ ಚಾನಲ್ ಅಭಿವೃದ್ಧಿ, ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ವಿಳಂಬದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ಒಂದು ತಿಂಗಳೊಳಗೆ ನಗರದೊಳಗೆ ಹಾದು ಹೋಗಿರುವ 5 ಚಾನಲ್‌ಗಳಲ್ಲಿರುವ ಜೊಂಡು ತೆಗೆದು, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಚಿವರ ಮುಂದೆ ವಾಗ್ದಾನ ಮಾಡಿದರು.ಕೋಟೆಕೆರೆ ಚಾನಲ್ ಮೂಲಕ ನಗರದ ಚರಂಡಿ ನೀರು ಹರಿದು ಕೆರೆ ಸೇರುತ್ತಿದೆ. ಇದರಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ. ಮಳೆ ನೀರು ಸಹ ನುಗ್ಗುತ್ತಿರುವ ಕಾರಣ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿ, `ಸಮಸ್ಯೆಗಳ ಬಗ್ಗೆ ಕೇಳಿದಾಗ ಮಾತ್ರ ಹೇಳುತ್ತೀರಿ. ಆದರೆ, ಇಂತಹ ಸಮಸ್ಯೆ ಇದೆ. ಇದನ್ನು ಪರಿಹರಿಸಿಕೊಡಿ ಎಂದು ಯಾವತ್ತೂ ನಮ್ಮಂದಿಗೆ ಮಾತನಾಡುವುದಿಲ್ಲ~ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬಸವನಹಳ್ಳಿ ಕೆರೆ ಏರಿ ಮತ್ತು ಜಮೀನು ಒತ್ತುವರಿ ಆಗುತ್ತಿರುವ ಬಗ್ಗೆ ಸಿಡಿಎ ಅಧ್ಯಕ್ಷ ರಾಜಪ್ಪ ಸಚಿವರ ಗಮನ ಸೆಳೆದಾಗ, ಬಸವನಹಳ್ಳಿ ಕೆರೆ ಜಾಗದ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ. ಅದು ಮುಗಿದ ನಂತರ ಗಡಿ ಗುರುತಿಲಾಗುವುದು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.ಶಾಸಕ ಸಿ.ಟಿ.ರವಿ, ನಗರದಲ್ಲಿ ಹಾದುಹೋಗಿರುವ ರಾಜ ಕಾಲುವೆಗಳು ಒತ್ತುವರಿಯಾಗಿವೆ. ಹೀಗಾಗಿ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆ ಒತ್ತುವರಿ ಪತ್ತೆ ಹಚ್ಚಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಆ ಕೆಲಸ ಮಾಡಿಲ್ಲ. ರಾಜಕಾಲುವೆ ಜಾಗದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಖಾತೆ ಮಾಡಿಕೊಡಲಾಗುತ್ತಿದೆ ಎಂದು ಹರಿಹಾಯ್ದರು.ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಬೆಲೆ ಆಸ್ತಿ ಉಳಿಸಬೇಕು. ರಾಜಕಾಲುವೆ ಉಳಿಸಿ, ಸಂರಕ್ಷಿಸಿದರೆ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಯನ್ನು ಪರಿಹರಿಸಬಹುದು ಎಂದರು.ನಗರದ ಕತ್ರಿಮಾರಮ್ಮ ದೇವಸ್ಥಾನದ ಬಳಿ ಇರುವ ಸೇತುವೆ ಸೇರಿದಂತೆ ಎರಡು ಸೇತುವೆಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಸಬೇಕು ಎಂದು ಸೂಚಿಸಿದ ಸಚಿವರು, ಅಧಿಕಾರಿಗಳು ಗುತ್ತಿಗೆದಾರರ ಪರ ಮಾತನಾಡಬಾರದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಮಾಡಬೇಕು.ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮತ್ತು ಲೋಕೋಪಯೋಗಿ ಇಲಾಖೆಗಳು ಒಳ ಚರಂಡಿ ಹಾಗೂ ರಸ್ತೆ ಕಾಮಗಾರಿಗಳೆರಡನ್ನು ಆದಷ್ಟು ಶೀಘ್ರ ಪೂರ್ಣಗೊಳಸಬೇಕು. ಹಾಗೆಯೇ ಕೆ.ಎಂ.ರಸ್ತೆ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.ನಗರದಲ್ಲಿ ಹೊಸದಾಗಿ ನಾಲ್ಕು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಿ ಎರಡು ವರ್ಷಗಳಾದರೂ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಹಿರೇಕೊಳಲೆ ಕೆರಯಿಂದ ನೀರಿನ ಹರಿವು ಹೆಚ್ಚಿಸಲಾಗಿದೆ. ಇದಕ್ಕಾಗಿ ಬದಲಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ ರಾಮನಹಳ್ಳಿಯ ನೀರು ಶುದ್ಧೀಕರಣ ಘಟಕ ನವೀಕರಿಸಲು ಇಲಾಖೆ ವಿಳಂಬ ಮಾಡುತ್ತಿದೆ ಎಂದು ಶಾಸಕ ರವಿ ಅಸಮಾಧಾನ ವ್ಯಕ್ತಪಡಿಸಿದಾಗ, ತಕ್ಷಣವೇ ಟೆಂಡರ್ ಕರೆದು, ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು.ನಗರದ ಎಂ.ಜಿ.ರಸ್ತೆಗೆ ಕಾಂಕ್ರಿಟ್ ಹಾಕಿ ಫುಟ್‌ಪಾತ್‌ಗೆ ಗ್ರಾನೈಟ್ ಅಳವಡಿಸಲು ಶಾಸಕರು ಬೆನ್ನು ಬಿದ್ದು, 2 ಕೊಟಿ ರೂಪಾಯಿ ಬಿಡುಗಡೆ ಮಾಡಿಸಿದ್ದಾರೆ. ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಸಚಿವರು ಸೂಚಿಸಿದರು. ಎಂ.ಜಿ.ರಸ್ತೆಯಲ್ಲಿ ಮತ್ತೆ ಹೊಸದಾಗಿ ಚರಂಡಿ ನಿರ್ಮಾಣ ಕೈಗೆತ್ತಿಗೊಳ್ಳುವ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಯಾಯಿತು. ನಗರದ ಅಭಿವೃದ್ಧಿಗೆ ಕೈಗೊಳ್ಳಲು ಉದ್ದೇಶಿಸಿರುವ ಪ್ರಮುಖ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ತಕ್ಷಣವೇ ಪಸ್ತಾವನೆ ಸಲ್ಲಿಸುವಂತೆ ಸಚಿವರು ನಗರಸಭೆ ಆಯುಕ್ತರಿಗೆ ಸೂಚಿಸಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್, ಉಪಾಧ್ಯಕ್ಷೆ ಶಿಲ್ಪ ರಾಜಶೇಖರ್, ಜಿಲ್ಲಾಧಿಕಾರಿ ರಂಗಸ್ವಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.