ಶುಕ್ರವಾರ, ನವೆಂಬರ್ 15, 2019
21 °C
ಬಸ್‌ನಲ್ಲೇ ಪಯಣಿಸುತ್ತಿದ್ದರು, ವಕೀಲಿ ವೃತ್ತಿ ಬಿಟ್ಟರು

ಕಾಲವೊಂದಿತ್ತು, ಇಂಥ ಶಾಸಕರೂ ಇದ್ದರು!

Published:
Updated:

ಧಾರವಾಡ: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಮತ್ತೆ ಬಂದಿವೆ. ಕಣದಲ್ಲಿರುವ ಶಾಸಕ ಆಕಾಂಕ್ಷಿ ಅಭ್ಯರ್ಥಿಗಳು ಇಲ್ಲಿಯವರೆಗೆ ಓಡಿಸಿದ ತಮ್ಮ ಹಳೆಯ ಕಾರುಗಳಿಗೆ ವಿದಾಯ ಹೇಳಿ ಐಷಾರಾಮಿ ಕಾರುಗಳನ್ನು ಖರೀದಿಸಿ ಓಡಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಕಾರಿನಲ್ಲಿ ಎಸಿ, ಮೈಕ್, ಇನ್ನೇನೋ ವ್ಯವಸ್ಥೆ...ಆದರೆ 1970, 80ರ ದಶಕದಲ್ಲಿ ಶಾಸಕರಾಗಿದ್ದವರು ತಮ್ಮ ಸರಳ ನಡೆ-ನುಡಿಯ ಜೀವನದ ಮೂಲಕ ಜನಗಳ ಮನಸ್ಸನ್ನು ಗೆದ್ದಿದ್ದರು ಎಂಬುದು ಗೊತ್ತೇ?ಕ್ರಮವಾಗಿ 1981 ಹಾಗೂ 1983ರ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಆರಿಸಿ ಬಂದಿದ್ದ ಸಿ.ವಿ.ಪುಡಕಲಕಟ್ಟಿ ಅವರು ಅಂದು ಧಾರವಾಡಕ್ಕೆ ಬರಬೇಕೆಂದಿದ್ದರೆ ಸರ್ಕಾರಿ ಬಸ್‌ನಲ್ಲಿಯೇ ಬರುತ್ತಿದ್ದರು. ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಾಸವಾಗಿದ್ದ ಪುಡಕಲಕಟ್ಟಿ ಯಾದವಾಡದಿಂದ ಉಪ್ಪಿನ ಬೆಟಗೇರಿ ಮೂಲಕ ಧಾರವಾಡಕ್ಕೆ ಹೊರಡುತ್ತಿದ್ದ ಬಸ್‌ಗಾಗಿ ಕಾಯ್ದು ಅದರಲ್ಲೇ ಹೋಗುತ್ತಿದ್ದರು.

ಯಾವುದೇ ಸ್ವಂತ ವಾಹನ ಹೊಂದದ ಅವರು, ಕೆಲಸ ಮುಗಿಸಿ ವಾಪಸ್ ಬರುವಾಗಲೂ ಅದೇ ಬಸ್‌ನಲ್ಲೇ ಊರಿಗೆ ಮರಳುತ್ತಿದ್ದರು. ಎಂಎಲ್‌ಎ ಅವರೆಂದು ಯಾರಾದರೂ ಸೀಟು ಬಿಟ್ಟುಕೊಟ್ಟು ಮುಂದಾದರೂ ಒಪ್ಪದೇ ನಿಂತುಕೊಂಡೇ ಪಯಣಿಸುತ್ತಿದ್ದರು ಎನ್ನುತ್ತಾರೆ ಗ್ರಾಮದ ಮಹಾಂತೇಶ ಪಾಟೀಲ.`ಕಂದಾಯ ಇಲಾಖೆಯಲ್ಲಿ ಯಾವುದಾದರೂ ಜನರ ಕೆಲಸ ಆಗಬೇಕಿದ್ದರೆ, ತಾವು ಶಾಸಕರು ಎಂಬುದನ್ನೂ ಮರೆತು ಸಂಬಂಧಪಟ್ಟ ಕಂದಾಯ ವೃತ್ತ ನಿರೀಕ್ಷಕ (ಸರ್ಕಲ್ ಆಫೀಸರ್)ನಿಗೆ ಕೈಮುಗಿದು ಕೆಲಸ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಅಂತಹ ಶಾಸಕರು ಇನ್ನೆಲ್ಲಿ ಸಿಗುತ್ತಾರೆ' ಎಂದು ಸ್ಮರಿಸುತ್ತಾರೆ 1983ರಲ್ಲಿ ಅವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಹಿರಿಯ ಮುಖಂಡ ಮುಜಾಹಿದ್ ಕಾಂಟ್ರಾಕ್ಟರ್.`ಯಾರು ಯಾವಾಗ ಬೇಕಾದರೂ ಪುಡಕಲಕಟ್ಟಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು. ಇಂದಿನಂತೆ ಶಾಸಕರನ್ನು ಭೇಟಿಯಾಗಬೇಕೆಂದರೆ ಪಿಎಗಳಿಗೆ ಮೊದಲು ಜೀ ಹುಜೂರ್ ಎಂದು ಗೋಗರೆದು ಅವರು ಬಾ ಎಂದಾಗ ಬರುವ ರೂಢಿಯೇ ಆಗ ಇರಲಿಲ್ಲ. ಧಾರವಾಡದ ಸರ್ಕಲ್‌ವೊಂದರಲ್ಲಿ ನಿಲ್ಲುತ್ತಿದ್ದ ಅವರು ಬಂದ ಜನರಿಗೆ ತಾವೇ ನಮಸ್ಕರಿಸುತ್ತಾ ತೆರಳುತ್ತಿದ್ದರು' ಎಂದರು.ಅಂದಿನ ಕಾಲದಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ ಜಗನ್ನಾಥರಾವ್ ಜೋಶಿ ಅವರ ವ್ಯಕ್ತಿತ್ವವನ್ನೂ ಪ್ರಾಂಜಲ ಮನಸ್ಸಿನಿಂದ ಸ್ಮರಿಸುವ ಮುಜಾಹಿದ್, `ಹುಬ್ಬಳ್ಳಿಗೆ ಬಸ್ಸಿನಲ್ಲಿ ಬರುತ್ತಿದ್ದ ಜೋಶಿ ಅವರ ಬಳಿ ಎಷ್ಟೋ ಬಾರಿ ದುಡ್ಡಿರುತ್ತಿರಲಿಲ್ಲ. ತಮ್ಮ ಕಾರ್ಯಕರ್ತರ ಮನೆಗೆ ತೆರಳಲು ಟಾಂಗಾ ಮಾಡಬೇಕೆಂದರೆ ಅದಕ್ಕೂ ಹಣ ಇರುತ್ತಿರಲಿಲ್ಲ. ನಡೆದುಕೊಂಡೇ ಕಾರ್ಯಕರ್ತರ ಮನೆಯತ್ತ ಹೋದ ಘಟನೆಗಳೂ ಇವೆ. ತಮ್ಮ ಬಳಿ ದುಡ್ಡಿಲ್ಲ ಎಂದು ಹೇಳಿಕೊಳ್ಳಲು ಅವರು ಯಾವುದೇ ಸಂಕೋಚ ತೋರಿಸುತ್ತಿರಲಿಲ್ಲ' ಎಂದು ಸ್ಮರಿಸುತ್ತಾರೆ.1972ರಲ್ಲಿ ಅವಿಭಜಿತ ವಿಜಾಪುರ ಜಿಲ್ಲೆಗೆ ಸೇರಿದ ಜಮಖಂಡಿ ಮತಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ವಕೀಲ ಪಿ.ಎಂ.ಬಾಂಗಿ ಅವರು ಶಾಸಕರಾದ ಬಳಿಕ ಒಳ್ಳೆ ಆದಾಯ ತರುತ್ತಿದ್ದ ವಕೀಲಿಕೆಯನ್ನು ನಿಲ್ಲಿಸಿ ತಮ್ಮ ಸಂಪೂರ್ಣ ಸಮಯ-ಶ್ರಮವನ್ನು ಮತಕ್ಷೇತ್ರದ ಸೇವೆಗೆ ಮೀಸಲಿಟ್ಟರು. ಶಾಸಕರಾದಾಗ ಅವರಿಗೆ ಸಂಬಳ, ಭತ್ಯೆ ಸೇರಿ ರೂ 400 ಬರುತ್ತಿತ್ತು. ವಿಧಾನಸಭೆ ಅಧಿವೇಶನಕ್ಕೆ ಹಾಜರಾದಾಗ ಸಿಟಿಂಗ್ ಫೀ ಎಂದು ಸ್ವಲ್ಪ ಹೆಚ್ಚಿನ ಭತ್ಯೆ ಪಡೆಯುತ್ತಿದ್ದರು.

ಸರ್ಕಾರಿ ಬಸ್‌ನಲ್ಲಿ ಓಡಾಡಲು ಎಂಎಲ್‌ಎ ಪಾಸ್ ಬಿಟ್ಟರೆ ಬೇರೆ ಯಾವುದೇ ವಿಶೇಷ ಅನುಕೂಲತೆಯಿರಲಿಲ್ಲ. ಸ್ವಂತ ಕಾರೂ ಇರಲಿಲ್ಲ. ಶಾಸಕನಾಗಿರುವವರೆಗೆ ವಕೀಲಿ ಸನದನ್ನು ಸ್ಥಗಿತದಲ್ಲಿಡಬೇಕು ಎಂಬ ನಿಯಮವಿದ್ದರೂ ನಿಯಮ ಅಸ್ಪಷ್ಟ ಮತ್ತು ಸಂದಿಗ್ಧ ಆಗಿರುವುದರಿಂದ ಹಲವಾರು ಶಾಸಕರು ವಕೀಲಿ ಮುಂದುವರಿಸಿದ ಉದಾಹರಣೆಗಳಿದ್ದವು. ಹಾಗೆ ಇವರೂ ವಕೀಲಿ ಮುಂದುವರಿಸಿದ್ದರೆ ಯಾರೂ ತಕರಾರು ಮಾಡುತ್ತಿರಲಿಲ್ಲ. ಆದರೆ ಬಾಂಗಿ ಅವರ ಮನಸ್ಸು ಅದಕ್ಕೊಪ್ಪಲಿಲ್ಲ.ವಕೀಲಿ ವೃತ್ತಿ ಮುಂದುವರಿಸಿದರೆ ವಿಶ್ವಾಸವಿಟ್ಟು ಆರಿಸಿ ಕಳಿಸಿದ ಜಮಖಂಡಿಯ ಮತದಾರರಿಗೆ ವಂಚನೆ ಮಾಡಿದಂತಾಗುವುದು. ಕ್ಷೇತ್ರದ ಜನತೆಯ ಸೇವೆಯ ಸಲುವಾಗಿ ಶಾಸಕರ ವೇತನ ಬರುತ್ತದೆ. ಆದ್ದರಿಂದ ವಕೀಲಿ ಮುಂದುವರಿಸುವುದು ತಪ್ಪು ಎಂಬ ತಾತ್ವಿಕ ನಿಲುವಿಗೆ ಅಂಟಿಕೊಂಡ ಬಾಂಗಿ ಶಾಸಕ ಹುದ್ದೆಯ ಅವಧಿ ಮುಗಿವ (1972-1978) ತನಕ ವಕೀಲಿ ಕಡೆಗೆ ಹೊರಳಿ ನೋಡಲಿಲ್ಲ ಎಂಬುದನ್ನು ಅವರ ಪುತ್ರ, ಆಕಾಶವಾಣಿಯ ನಿವೃತ್ತ ವಾರ್ತಾ ವಾಚಕ ಚಾಮರಾಜ ಬಾಂಗಿ ಸ್ಮರಿಸುತ್ತಾರೆ.ಅಂದಿನವರು ಅಷ್ಟು ಸರಳ ಜೀವನ ನಡೆಸಿದ್ದು ನಮ್ಮ ಮುಂದಿದೆ. ಅದರ ಮಧ್ಯೆಯೇ ಇಂದಿನ ಶಾಸಕರು ಐಷಾರಾಮಿ ಜೀವನ ನಡೆಸುವುದನ್ನು ನೋಡಿದರೆ ಖೇದವಾಗುತ್ತದೆ ಎನ್ನುತ್ತಾರೆ ಮುಜಾಹಿದ್ ಕಾಂಟ್ರಾಕ್ಟರ್ ಹಾಗೂ ಚಾಮರಾಜ ಬಾಂಗಿ.

ಪ್ರತಿಕ್ರಿಯಿಸಿ (+)