ಕಾಲಾತೀತ ನಗು ಅಕಾಲಿಕ ಕಥೆ (ಚಿತ್ರ: ದುಡ್ಡೇ ದೊಡ್ಡಪ್ಪ)

7

ಕಾಲಾತೀತ ನಗು ಅಕಾಲಿಕ ಕಥೆ (ಚಿತ್ರ: ದುಡ್ಡೇ ದೊಡ್ಡಪ್ಪ)

Published:
Updated:
ಕಾಲಾತೀತ ನಗು ಅಕಾಲಿಕ ಕಥೆ (ಚಿತ್ರ: ದುಡ್ಡೇ ದೊಡ್ಡಪ್ಪ)

ಹರಿಕಥೆ ನಮ್ಮ ಪರಂಪರೆ. ದಶಕಗಟ್ಟಲೆ ಹಾಸ್ಯ ನಾಟಕಗಳ ಸವಿಯನ್ನು ಉಂಡವರೂ ನಾವೇ. ಕೆಲವು ಕಥೆಗಳು ಕಾಲಾತೀತವಾದರೆ, ಇನ್ನು ಕೆಲವು ಪ್ರಸಂಗಾಧಾರಿತ ಕಥೆಗಳು ಕಾಲದ ಮಿತಿಗೆ ಒಳಪಡುತ್ತವೆ.

 

`ದುಡ್ಡೇ ದೊಡ್ಡಪ್ಪ~ ಚಿತ್ರ ಪ್ರಸಂಗಾಧಾರಿತ ಕಥೆಯಾದ್ದರಿಂದ ಅದು ಈ ಕಾಲದ್ದಲ್ಲ. ಆದರೆ, ದಶಕದ ಹಿಂದೆ ಅದು ತೆರೆಕಂಡಿದ್ದರೆ ಅದರ ಉದ್ದೇಶಕ್ಕೆ ಅರ್ಥವಿರುತ್ತಿತ್ತು. ಇಷ್ಟಕ್ಕೂ ಈ ಸಿನಿಮಾ ಚಿತ್ರೀಕರಣ ನಡೆದದ್ದು ಸುಮಾರು ಏಳು ವರ್ಷಗಳ ಹಿಂದೆ. ಬಿಡುಗಡೆಯ ಭಾಗ್ಯ ಈಗ ಒದಗಿಬಂದಿದೆಯಷ್ಟೇ.`ಹಾಸಿಗೆ ಇದ್ದಷ್ಟು ಕಾಲು ಚಾಚು~ (ಚಿತ್ರೀಕರಣ ನಡೆದಾಗ ಚಿತ್ರಕ್ಕೆ ಇಟ್ಟಿದ್ದ ಶೀರ್ಷಿಕೆ ಇದೇ) ಎಂಬ ತತ್ವವನ್ನು ಒಪ್ಪಿಕೊಂಡ ನಾಯಕನ ಕೌಟುಂಬಿಕ ಕಥೆಯಿದು. ಗೃಹಬಳಕೆ ಯಂತ್ರಗಳ ಬಗ್ಗೆ ಗೃಹಿಣಿಯರಿಗೆ ಇರುವ ಮೋಹದಿಂದ ಕೆಳ ಮಧ್ಯಮವರ್ಗದ ಉದ್ಯೋಗಿ ಏನೆಲ್ಲಾ ಪೀಕಲಾಟ ಅನುಭವಿಸುತ್ತಾನೆ ಎಂಬುದನ್ನು ಸಿನಿಮಾ ಪ್ರಹಸನಗಳ ರೂಪದಲ್ಲಿ ಬಿಚ್ಚಿಡುತ್ತಾ ಹೋಗುತ್ತದೆ.`ಲಕ್ಕಿ ಡಿಪ್~ನಲ್ಲಿ ಬಹುಮಾನರೂಪವಾಗಿ ಬರುವ ಫ್ರಿಜ್ ನಾಯಕನ ಬದುಕಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಸೃಷ್ಟಿಸುತ್ತದೆಂಬುದು ಚಿತ್ರದ ಸಾರ. ಕೇಳಿ ನಗಬಹುದಾದ ಕಥೆಯ ಚಿತ್ರವಿದು. ಆದರೆ, ದೃಶ್ಯಗಳನ್ನು ನೋಡಿದ ಮೇಲೆ ಪರಿಣಾಮ ಹೆಚ್ಚುವುದರ ಬದಲು ಕಡಿಮೆಯಾಗುತ್ತದೆ. ಯಾಕೆಂದರೆ, ಇದು ಈ ಕಾಲದಲ್ಲಿ ನೋಡುವ ಕಥೆಯಲ್ಲ.

ದಶಕದ ಹಿಂದೆ ಹಾಸ್ಯೋತ್ಸವಗಳು ವ್ಯಾಪಕವಾಗಿ ನಡೆಯತೊಡಗಿದಾಗ ಜನರೆಲ್ಲಾ ಮುಗಿಬಿದ್ದು ನೋಡಿ, ಗೊಳ್ಳನೆ ನಗತೊಡಗಿದರು. ಅಲ್ಲಿ ಪಟಪಟನೆ ಜೋಕು ಸಿಡಿಸುತ್ತಿದ್ದ ರಿಚರ್ಡ್ ಲೂಯಿಸ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.ಮಾತುಗಳೂ ಅವರದ್ದೇ. ಹಾಗಾಗಿ ಹಾಸ್ಯೋತ್ಸವದ `ಶ್ರವ್ಯ ಗುಣ~ವನ್ನು ಇದಕ್ಕೂ ಧಾರೆ ಎರೆದಿದ್ದಾರೆ. ದೃಶ್ಯಗಳೇ ಕಟ್ಟಿಕೊಡಬಹುದಾದ ಎಷ್ಟೋ ಭಾವಗಳನ್ನು ಅವರು ವಾಚ್ಯವಾಗಿಸಿದ್ದಾರೆ. ಆದರೆ, ಅಭಿರುಚಿ ಎಲ್ಲೂ ಮುಕ್ಕಾಗಿಲ್ಲ. ಸಂಭಾಷಣೆಯಲ್ಲಿ ಅನಗತ್ಯ ನುಡಿ ಕಸರತ್ತು ಇಲ್ಲ. ಪ್ರಹಸನಗಳೇ ನಗಿಸುವಂತೆ ಇರಬೇಕು ಎಂಬುದು ಅವರ ಉಮೇದು.ತಮ್ಮ ಕೆಲಸದಲ್ಲಿ ರಿಚರ್ಡ್ ಯಶಸ್ವಿಯಾಗಿದ್ದಾರೆ ಎಂದೇ ಹೇಳಬೇಕು. ಅವರು ಕೊಟ್ಟ ಕಥೆಯನ್ನು ಚಿತ್ರಕಥೆಯಾಗಿಸಿ, ನಿರ್ದೇಶಿಸಿರುವ ಎಂ.ಎಸ್.ರಾಜಶೇಖರ್ ಇನ್ನೂ ಪರಿಣಾಮಕಾರಿಯಾಗಿ ತೆರೆಮೇಲೆ ಮೂಡಿಸುವ ಸಾಧ್ಯತೆ ಇತ್ತು.

 

ತಾಂತ್ರಿಕವಾಗಿ ಮಹತ್ವದ ಬದಲಾವಣೆಗಳನ್ನು ಚಿತ್ರರಂಗ ಕಂಡಿರುವುದರಿಂದ ತೆರೆಮೇಲೆ ಈಗಿನ ಸಿನಿಮಾಗಳು ಕಾಣುವಷ್ಟು ಪ್ರಖರವಾಗಿ `ದುಡ್ಡೇ ದೊಡ್ಡಪ್ಪ~ ಕಾಣುವುದಿಲ್ಲ. ಆರ್.ಜನಾರ್ದನ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ ಕೂಡ ಈ ಕಾಲಮಾನದ ವೇಗವನ್ನು ತೋರಿಲ್ಲ.ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಸಾಧು ಕೋಕಿಲಾ ಒಂದಿಷ್ಟು ಅಚ್ಚರಿಗಳನ್ನು ಕೊಟ್ಟಿದ್ದಾರೆ. ಸಿದ್ಧ ರಾಗಗಳೇ ಇದ್ದರೂ ಅವನ್ನು ಚಿತ್ರದ ಜಾಯಮಾನಕ್ಕೆ ಅವರು ಒಗ್ಗಿಸಿದ್ದಾರೆ. ಇದು ಸಾಧು ಸಂಗೀತ ಇರಬಹುದೆಂದು ಊಹೆ ಮಾಡುವುದು ಸಾಧ್ಯವಿಲ್ಲ.ಅಭಿನಯದಲ್ಲಿ ಜಗ್ಗೇಶ್ ನಿಸ್ಸೀಮ ಎನ್ನಿಸಲು ಈ ಚಿತ್ರದಲ್ಲೂ ಸುಳಿವುಗಳಿವೆ. ಒಂದು ರೀತಿಯಲ್ಲಿ ಈ ಚಿತ್ರದ ಜಗ್ಗೇಶ್ ಪಾತ್ರ ಭಿನ್ನ. ಅವರು ಹಿತಮಿತವಾಗಿಯೇ ಮಾತಾಡುತ್ತಾರೆ. ದೇಹಭಾಷೆ, ಮುಖಭಾವವಂತೂ ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿದೆ. ನಾಯಕಿ ಲಹರಿಯ ಕೆಲಸವೂ ಪರವಾಗಿಲ್ಲ. ಪವಿತ್ರಾ ಲೋಕೇಶ್, ಮೋಹನ್, ಬ್ಯಾಂಕ್ ಜನಾರ್ದನ್ ಪಾತ್ರಗಳೂ ಸಹಜತೆಗೆ ಹತ್ತಿರವಾಗಿವೆ.ಫ್ಲ್ಯಾಷ್‌ಬ್ಯಾಕ್, ಅತಿಯಾದ ಮಸಾಲೆ, ಹೊಡೆದಾಟ, ಐಟಂ ಹಾಡು- ಇವ್ಯಾವುದೂ ಇಲ್ಲದ `ದುಡ್ಡೇ ದೊಡ್ಡಪ್ಪ~ ಚಿತ್ರವನ್ನು ಸುಖಾ ಸುಮ್ಮನೆ ಧಾರಾವಾಹಿ ನೋಡುವಂತೆ ನೋಡಿ (ಕೇಳಿ ಎಂಬುದು ಇನ್ನೂ ಸೂಕ್ತ) ಆನಂದಿಸಬಹುದು. ನಿರ್ಮಾಪಕರಾದ ಎ.ಗಣೇಶ್ ಹಾಗೂ ನಾರಾಯಣ್ ಜೆ. ಇಷ್ಟು ಕಾಲ ಇದನ್ನು ಡಬ್ಬದಲ್ಲೇ ಇಟ್ಟುಕೊಂಡಿದ್ದು ಮಾತ್ರ ಅಚ್ಚರಿಯ ವಿಷಯ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry