ಶನಿವಾರ, ಮೇ 15, 2021
28 °C

ಕಾಲಿನಲ್ಲೂ ಗುಣ- ದೋಷಗಳಿವೆಯೇ? ಅವು ಶಕ್ತಿಶಾಲಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅ ಪ್ಪ-ಅಮ್ಮ , ಒಡ ಹುಟ್ಟಿದವರು ಹಾಗೂ ಬಂಧು ಬಳಗದವರನ್ನು ಬಿಟ್ಟು ಬಂದು, ಅತ್ತೆ ಮನೆಯಲ್ಲಿ ಹೊಸ ಜೀವನ ಆರಂಭಿಸಿ ಕೆಲ ದಿನಗಳಷ್ಟೇ ಆಗಿವೆ. ಆ ಮನೆಯಲ್ಲಿ ಅಶುಭ ಘಟನೆಯೊಂದು ನಡೆಯಿತು. ಸೊಸೆಯ ಆಗಮನದಿಂದಲೇ ಹೀಗಾಯಿತು ಎಂಬ ಕುಹಕದ ಮಾತು ಶುರುವಾಗಿದೆ.ಮರದ ಮೇಲೆ ಹಕ್ಕಿ ಬಂದು ಕುಳಿತು ಕೊಳ್ಳುವುದಕ್ಕೂ, ಹಣ್ಣು ಕೆಳಗೆ ಬೀಳುವುದಕ್ಕೂ ಏನೇನೂ ಸಂಬಂಧ ಇಲ್ಲದಿದ್ದರೂ, ಹಕ್ಕಿ ಕೂತಿದ್ದರಿಂದಲೇ ಹಣ್ಣು ಬಿತ್ತು ಎಂದು ಭಾವಿಸುವಂತೆ ವ್ಯಕ್ತಿಯೊಬ್ಬನ ಬದುಕಿನಲ್ಲಿ ಅವನ ಪತ್ನಿ ಬಂದ ನಂತರ ಅವನ ಜೀವನದಲ್ಲಿ ಏಳು-ಬೀಳುಗಳಾದರೆ ಅದಕ್ಕೆ ಅವಳೇ ಹೊಣೆ ಎಂದು ನಿರ್ಧರಿಸಿ ಬಿಡುತ್ತಾರೆ.ಅದು ಕಾಕ ತಾಳೀಯ. ಕಾರ್ಯ ಕಾರಣ ಸಂಬಂಧ ಹುಡುಕುವ ಗೋಜಿಗೆ ಯಾರೂ ಹೋಗುವುದಿಲ್ಲ. ನಮ್ಮ  ಸಮಾಜ. ಅದಕ್ಕೆ ಕೊಡುವ ಕಾರಣ; ಮದುವೆಯಾಗಿ ಬಂದವಳ ಕಾಲ್ಗುಣ! ಸೊಸೆಯ ಕಾಲಿನಲ್ಲಿ ಮಗನ ಏಳು ಬೀಳುಗಳನ್ನು ನಿರ್ಧರಿಸುವ ಶಕ್ತಿ ಇದೆ ಎಂದೇ ಅನೇಕರು ನಂಬಿಕೊಂಡಿದ್ದಾರೆ. ಹೊಸದಾಗಿ ಬಂದ ಸೊಸೆಯ ಕಾಲಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳಿವೆ ಎಂದೇ ಕೆಲವರು ಬಲವಾಗಿ ನಂಬಿದ್ದಾರೆ. ಇತರರನ್ನೂ ನಂಬಿಸುವ ಪ್ರಯತ್ನ ಮಾಡುತ್ತಾರೆ.ಸಂಪ್ರದಾಯನಿಷ್ಠ ಕುಟುಂಬಗಳು ಮಗನ ಮದುವೆಯನ್ನು ಅವರ ಬದುಕಿನ ಮಹತ್ವದ ಘಟ್ಟ ಎಂದೇ ಭಾವಿಸುತ್ತವೆ. ಮುಂದಿನ ಬದುಕು ಅವನ ಹೆಂಡತಿಯ ಕಾಲ ಗುಣದ ಮೇಲೆ ನಿಂತಿದೆ! ಅವಳ ಕಾಲ ಗುಣ ಚೆನ್ನಾಗಿದ್ದರೆ ಏಳಿಗೆ. ಇಲ್ಲವಾದರೆ ಅವನ ಬದುಕಿಗೆ ಹಿನ್ನೆಡೆ. ಕೆಟ್ಟ ಘಟನೆಗಳಿಗೆ ಸೊಸೆಯ ಕಾಲ್ಗುಣವೇ ಕಾರಣ ಎಂದು ಅವಳನ್ನು ಹಳಿಯಲು ಆರಂಭಿಸಿಬಿಡುತ್ತಾರೆ. ವ್ಯಕ್ತಿಯೊಬ್ಬನ ವಿವಾಹ ನಂತರದ ಅವನ ಬದುಕಿನಲ್ಲಿ  ಶುಭ ಘಟನೆ ನಡೆದರೆ, ಯಶಸ್ಸು ಸಿಕ್ಕರೆ ಅದಕ್ಕೆ ಮನೆಗೆ ಬಂದಾಕೆಯೇ ಕಾರಣ. ಅವಳು ಆ ಮನೆಯ ಮಹಾಲಕ್ಷ್ಮಿ. ಅಶುಭದ ಘಟನೆಗಳಾದರೆ ಅದಕ್ಕೆ ಅವಳೇ ಹೊಣೆ.  ಅವಳು ದರಿದ್ರ ಲಕ್ಷ್ಮಿ. ಅವಳು ಕಾಲಿಟ್ಟ ಸಮಯ ಸರಿಯಾಗಿಲ್ಲ. ಅದರಿಂದಲೇ ಹೀಗಾಯಿತು,  ಮನೆಯ ನೆಮ್ಮದಿ ಹಾಳಾಯಿತು ಎಂಬ ಮಾತು ಕೇಳಿ ಬರುತ್ತವೆ.ಅವಳ ಗಂಡನ ಸ್ವಯಂಕೃತ ತಪ್ಪುಗಳಿಂದ ಕೆಲಸ ಕಳೆದುಕೊಂಡರೂ ಅದಕ್ಕೂ ಅವಳೇ ಹೊಣೆ. ಜಮೀನಿನಲ್ಲಿ ನಿರೀಕ್ಷಿಸಿದ ಇಳುವರಿ ಬಾರದಿದ್ದರೆ, ಬೆಳೆಗೆ ರೋಗ ಬಂದರೆ ಅದಕ್ಕೂ ಅವಳೇ ಕಾರಣ. ಕೋರ್ಟ್‌ನಲ್ಲಿದ್ದ ಪ್ರಕರಣದಲ್ಲಿ  ಸೋಲಾದರೆ ಅವಳೇ ಹೊಣೆ. ಹೀಗೆ `ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ~ ಎಂಬಂತೆ ಎಲ್ಲ ಕೆಟ್ಟ ಘಟನೆಗಳಿಗೂ ಹೆಣ್ಣನ್ನೇ ಹೊಣೆ ಮಾಡುತ್ತ ಹೋಗುವ ಪರಿಪಾಠ ಅನೇಕ ಕುಟುಂಬಗಳಲ್ಲಿದೆ.ಒಂದು ಕಾಲದಲ್ಲಿ ತಾವೂ ಒಂದು ಮನೆಯ ಸೊಸೆಯಾಗಿ ಬಂದಿದ್ದೆವು ಎಂಬುದನ್ನು ಬಹತೇಕ ಅತ್ತೆಯರು ಮರೆತೇ ಬಿಡುತ್ತಾರೆ. ಅವರೂ ಅಂತಹ ಮಾತುಗಳನ್ನು ಕೇಳಿರುತ್ತಾರೆ. ಆದರೆ ಅದನ್ನೆಲ್ಲ ಮರೆತು ಸೊಸೆಯ ಮೇಲೆ ಕ್ಷುಲ್ಲಕ ಆರೋಪ ಹೊರಿಸುತ್ತಾರೆ.

 

ಸೊಸೆ ಕಾಲ್ಗುಣದ ಬಗ್ಗೆ ಮನೆಯಲ್ಲಷ್ಟೇ ಅಲ್ಲ, ನೆರೆಮನೆಯವರ ಜತೆ ಕುಳಿತು ಹರಟುವಾಗ, ಸಂಬಂಧಿಕರ ಮದುವೆ ಸಂದರ್ಭದಲ್ಲಿ,  ಇನ್ಯಾವುದೋ ಸಮಾರಂಭದಲ್ಲಿ ಸಿಕ್ಕ ಸ್ನೇಹಿತೆಯರು, ನೆಂಟರಿಷ್ಟರ ಮುಂದೆ ಸೊಸೆಯ ಕಾಲ್ಗುಣದ  ವಿಮರ್ಶೆ ಮಾಡುತ್ತಾರೆ.ತಪ್ಪುಗಳನ್ನು ಹೊರಿಸುತ್ತಾರೆ. `ಎಲ್ಲ ಸರಿ ಆದರೆ... ಅವಳ ಕಾಲ್ಗುಣವೇ ಸರಿಯಾಗಿಲ್ಲ~ ಎಂದು ಸಲೀಸಾಗಿ ಹೇಳಿಬಿಡುತ್ತಾರೆ. ಅಷ್ಟಕ್ಕೂ ಹೆಣ್ಣು ಮಕ್ಕಳ ಕಾಲಿನಲ್ಲಿ ಅಷ್ಟೊಂದು ಬದಲಾವಣೆ ಗಳನ್ನು ತರಬಲ್ಲ ಗುಣಗಳಿವೆಯೇ? ಕಾಲ್ಗುಣ- ಕೈಗುಣ ಚೆನ್ನಾಗಿಲ್ಲ ಎಂಬುದರ ವಿಮರ್ಶೆ ಶುರುವಾಗುವುದು ಯಾವಾಗ? ಗಂಡನ ಮನೆಯಲ್ಲೇ? ಅಲ್ಲ,  ಹೆಣ್ಣು ಮಗು ಹುಟ್ಟಿದಾಗಲೇ ಇದು ಆರಂಭವಾಗಿ ಬಿಡುತ್ತದೆ. ಹೆರಿಗೆ ಸಮಯದಲ್ಲಿ ತಾಯಿ ಸತ್ತರೆ ಆ ಹಸುಗೂಸು ನಿಂದನೆ ಎದುರಿಸಬೇಕಾಗುತ್ತದೆ.

 

ಹುಟ್ಟುತ್ತಲೇ ತಾಯಿ ಬಲಿ ತೆಗೆದುಕೊಂಡಿತು ಎಂಬ ಕೆಟ್ಟ ಹೆಸರು. ಈ ಕಾರಣಕ್ಕಾಗಿಯೇ ಅಂತಹ ಹುಡುಗಿಯರನ್ನು ಮದುವೆ ಮಾಡಿಕೊಳ್ಳುವುದಕ್ಕೆ ಹಿಂದೇಟು ಹಾಕುವವರೂ ಇದ್ದಾರೆ. ಕೆಲವು ತಂದೆ ತಾಯಿಗಳು ಇಂತಹ ಸಂಗತಿಗಳನ್ನೆಲ್ಲ ಕೇಳಿ ಮದುವೆಗೆ ಒಪ್ಪಿಗೆ ನೀಡುವ ಪರಿಪಾಠವೂ ಇದೆ.ಕಾಲ್ಗುಣ ಸರಿ ಇಲ್ಲ ಎಂಬ ನಿರ್ಧಾರಕ್ಕೆ ಅತ್ತೆ ಮನೆಯವರು ಬಂದು ಬಿಟ್ಟರೆ ಅವಳ ಕಥೆ ಮುಗಿದಂತೆಯೇ. ನೂರಾರು ಕನಸುಗಳ ಹೊತ್ತು ಬಂದ ಅವಳಿಗೆ ಅಲ್ಲಿಂದ ನಿರಾಸೆಯ ಪರ್ವ ಆರಂಭ. ಪತಿಯ ಮನೆ ನರಕ ಎನಿಸಿಬಿಡುತ್ತದೆ. ನಿಂದನೆಯ ಮಾತುಗಳು ಆಕೆಯ ಮನಸ್ಸನ್ನು ಹಿಂಡುತ್ತವೆ. ಅದರಿಂದ ಅವಳು ನೋವು ಮತ್ತು ಕೀಳರಿಮೆಯಿಂದ ಬಳಲುತ್ತಾಳೆ.ಅಂತಹ ಮನೆಗಳಲ್ಲಿ ಕೆಟ್ಟದ್ದು ಆಗುತ್ತಲೇ ಹೋದರೆ ಅದಕ್ಕೆ ಸೊಸೆಯ ಕಾಲ್ಗುಣ ಕಾರಣ ಎಂದು ಎಲ್ಲರೂ ನಂಬಿ ಬಿಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಸೊಸೆ ನೊಂದು ಆತ್ಮಹತ್ಯೆಗೆ ಶರಣಾದ, ವಿವಾಹ ವಿಚ್ಛೇದನ ಪಡೆದ ಅಥವಾ   ಹೊಂದಾಣಿಕೆ ಇಲ್ಲದೆ ಯಾಂತ್ರಿಕವಾಗಿ ಸಂಸಾರ ನಡೆಸುವಂತಹ ಅಸಹಾಯಕ ಪರಿಸ್ಥಿತಿ ಎದುರಿಸುತ್ತಾಳೆ.ಒಂದೇ ಮನೆಯಲ್ಲಿ ಜೀವಿಸುತ್ತಿದ್ದರೂ ಗಂಡ- ಹೆಂಡತಿ ಪರಸ್ಪರ ಹೊಂದಾಣಿಕೆ ಇಲ್ಲದೆ ಬದುಕುವ ಹಲವು ನಿದರ್ಶನಗಳನ್ನು ಕಾಣಬಹುದು. ಇಂತಹ ಘಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು; ಆಧುನಿಕತೆಯನ್ನು ಮೈಗೂಡಿಸಿಕೊಂಡ ವಿಚಾರವಂತರು ಇಂತಹ ನಂಬಿಕೆಗಳಿಗೆ ಮಹತ್ವ ಕೊಡುವುದಿಲ್ಲ. ಆದರೆ ಅಂಥವರು ವಿರಳ. ವಿದ್ಯಾವಂತರೂ ಇಂತಹ ನಂಬಿಕೆಗಳಿಗೆ ತುತ್ತಾಗಿ ಮಕ್ಕಳ ಬದುಕನ್ನು ನರಕ ಮಾಡಿದ ಹಲವು ನಿದರ್ಶನಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.