ಮಂಗಳವಾರ, ಮೇ 18, 2021
30 °C

ಕಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ~ಮನೋಬಲ ಒಂದೇ ಸಾಕು ಜಗವ ಗೆಲ್ಲಲು, ಅಂಗವೈಕಲ್ಯ ಅಡ್ಡಿಯಲ್ಲ~ ಎಂಬುದನ್ನು ಹುಬ್ಬಳ್ಳಿ ಕೌಲ ಪೇಟೆಯಲ್ಲಿರುವ ಆಂಗ್ಲೊ ಉರ್ದು ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಕಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಹನುಮಾನ ಬ.ಹೊನಕಾಂಡೆ ನಿರೂಪಿಸಿದ.ಎರಡೂ ಕೈಗಳು, ಒಂದು ಕಾಲು ಇಲ್ಲದಿದ್ದರೂ ಅದನ್ನು ಅಡ್ಡಿ ಎಂದು ಭಾವಿಸದೆ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಕುಳಿತು ಹನುಮಾನ ಕಾಲಿನಲ್ಲೇ ಕನ್ನಡ ವಿಷಯದ ಪರೀಕ್ಷೆ ಬರೆದರೆ ಆತನ ಮುದ್ದಾದ ಅಕ್ಷರಗಳನ್ನು ಕಂಡು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನಿಬ್ಬೆರಗಾದರು.ಇಲ್ಲಿನ ವೀರಾಪುರ ಓಣಿ ಹಕ್ಕಲಿನ ವಿಶ್ವಧರ್ಮ ದೈಹಿಕ ಅಂಗವಿಕಲರ ಶಾಲೆ ವಿದ್ಯಾರ್ಥಿಯಾದ ಹನುಮಾನ ಬ.ಹೊನಕಾಂಡೆ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಅಜೂರು ಗ್ರಾಮದವನು. ಹುಟ್ಟುವಾಗಲೇ ಎರಡು ಕೈ ಹಾಗೂ ಒಂದು ಕಾಲು ಊನವಾಗಿ ಜನಿಸಿದ ಹನುಮಾನ. ಆತನ ತಂದೆ ಬಬಲ್ ಹೊನಕಾಂಡೆ ಹಾಗೂ ತಾಯಿ ಸಂಗೀತಾ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಹನುಮಾನ ನಾಲ್ಕನೇ ತರಗತಿಯವರೆಗೆ ಅಜೂರಿನಲ್ಲಿಯೇ ಕಲಿತಿದ್ದಾನೆ.ಐದನೇ ತರಗತಿಯಿಂದ ಹುಬ್ಬಳ್ಳಿ ವಿಶ್ವಧರ್ಮ ಅಂಗವಿಕಲರ ಬಾಲಕ-ಬಾಲಕಿಯರ ಶಾಲೆಯಲ್ಲಿ ಓದು ಮುಂದುವರೆಸಿದ್ದು, ಶಾಲೆಯ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಾನೆ.ಓದುವುದರಲ್ಲಿ ಶಾಲೆಯ ಇತರೆ ವಿದ್ಯಾರ್ಥಿಗಳಿಗಿಂತ ಮುಂದಿರುವ ಹನುಮಾನ, ಐದನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ಶಾಲೆಯಲ್ಲಿ ಇತರೆ ವಿದ್ಯಾರ್ಥಿಗಳಿಗಿಂದ ಹೆಚ್ಚಿನ ಅಂಕ ಪಡೆದು ಉತ್ತೀರ್ಣನಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿ ಎನಿಸಿದ್ದಾನೆ.ತನ್ನ ನಿತ್ಯದ ಕಾರ್ಯಗಳನ್ನು ಯಾರ ನೆರವೂ ಇಲ್ಲದೆ ತಾನೇ ಮಾಡಿಕೊಳ್ಳುವ ಹನುಮಾನ ಒಂದೇ ಕಾಲಿನ ಸಹಾಯದಿಂದ ನಡೆಯುವುದು, ಬಟ್ಟೆ ಹಾಕಿಕೊಳ್ಳುವುದು, ಮೆಟ್ಟಿಲು ಹತ್ತುವುದು, ಈಜುವುದು, ಊಟ ಮಾಡುವುದು ಹಾಗೂ ಸರಾಗವಾಗಿ ಬರೆಯುವುದನ್ನು ಮಾಡುತ್ತಾನೆ. ಕಾಲಿನ ಬೆರಳುಗಳ ಮಧ್ಯೆ ಪೆನ್ನು ಹಿಡಿದು ಬೇರೆಯವರು ಕೈಯಲ್ಲಿ ಬರೆಯುವಷ್ಟೇ ವೇಗವಾಗಿ ಬರೆಯುವ ಅವನ ಸೂಕ್ಷ್ಮತೆ ಕೌತುಕ ಮೂಡಿಸುತ್ತದೆ.ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸುವ, ಪಿಯುಸಿ ಮುಗಿದ ನಂತರ ಕಲಾ ವಿಷಯದಲ್ಲಿ ಪದವಿ ಪಡೆದು ಕೆ.ಎ.ಎಸ್ ಅಧಿಕಾರಿಯಾಗುವ ಆಸೆ ಹನುಮಾನನಿಗೆ. ಆತನ ಕನಸಿಗೆ ನೀರೆರೆಯಲು ವಿಶ್ವಧರ್ಮ ಶಾಲೆಯ ಅಧ್ಯಕ್ಷ ಐ.ಕೆ. ಲಕ್ಕುಂಡಿ, ಶಿಕ್ಷಕರ, ಸಿಬ್ಬಂದಿ ಒತ್ತಾಸೆಯಾಗಿ ನಿಂತಿದ್ದಾರೆ.ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹನುಮಾನ ಹೊನಕಾಂಡೆಯೊಂದಿಗೆ ಎರಡು ಕೈಗಳ ನಡುವೆ ಪೆನ್ನು ಹಿಡಿದು ಪರೀಕ್ಷೆ ಬರೆದ ಕೇವಲ ಎರಡೂವರೆ ಅಡಿ ಎತ್ತರ ಉಡಚವ್ವ ಬ. ಕಲ್ಲೂರ ಸೇರಿದಂತೆ ವಿಶ್ವಧರ್ಮ ಶಾಲೆಯ 20 ಅಂಗವಿಕಲ ವಿದ್ಯಾರ್ಥಿಗಳು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಇವರೊಂದಿಗೆ ಸಿದ್ಧಾರೂಢಮಠದ ಆವರಣದಲ್ಲಿರುವ ಅಂಧಶಾಲೆ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದು ವಿಶೇಷವಾಗಿತ್ತು.ತಮ್ಮನ ಬದಲು ಅಣ್ಣ ಪರೀಕ್ಷೆಗೆ ಹಾಜರ್!ಸಿಂದಗಿ ವಿಜಾಪುರ ಜಿಲ್ಲೆ): ಗೋಲಗೇರಿ ಪರೀಕ್ಷಾ ಕೇಂದ್ರದಲ್ಲಿ ಯಂಕಂಚಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ತ್ರಿಮೂರ್ತಿ ಸಾಸನೂರ ಬದಲಿಗೆ ಈತನ ಅಣ್ಣ ಸುರೇಶ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತು ಕೊಂಡಿದ್ದ ಪ್ರಕರಣ ಪತ್ತೆಯಾಗಿದೆ.ನಕಲು ಮಾಡುತ್ತಿದ್ದ ಸುರೇಶನನ್ನು ಪೊಲೀಸರಿಗೆ ಒಪ್ಪಿಸಲು ಹೋದಾಗ, ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಂತರ ತ್ರಿಮೂರ್ತಿಯನ್ನು ಡಿಬಾರ್ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.