ಕಾಲುಬಾಯಿ ಜ್ವರ: ಇಂದಿನಿಂದ ಲಸಿಕೆ

7

ಕಾಲುಬಾಯಿ ಜ್ವರ: ಇಂದಿನಿಂದ ಲಸಿಕೆ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ಆರಿಕುಂಟೆ ಗ್ರಾಮದಲ್ಲಿ ಕಳೆದ 20 ದಿನಗಳ ಅಂತರದಲ್ಲಿ 4 ಸೀಮೆ ಹಸು ಹಾಗೂ 1 ಕರು ಕಾಲು ಬಾಯಿ ಜ್ವರದಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅ. 10ರಿಂದ ಆರಿಕುಂಟೆ ಮತ್ತು ಸುತ್ತಮುತ್ತಲಿನ ಎಂಟು ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಜಯರಾಮ್ ತಿಳಿಸಿದ್ದಾರೆ.ತಾಲ್ಲೂಕಿನಲ್ಲಿ ನಿಯಮಿತವಾಗಿ ಪಶುವೈದ್ಯ ಇಲಾಖೆ ಮತ್ತು ಆಯಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದೊಂದಿಗೆ ಆರು ತಿಂಗಳಿಗೊಮ್ಮೆ ಎಲ್ಲ ಜಾನುವಾರುಗಳಿಗೂ ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ನೀಡಲಾಗುತ್ತಿದೆ. ಆದರೆ ಕೆಲವು ಪಶುಪಾಲಕರು ಈ ಲಸಿಕೆ ನೀಡಿದರೆ ಹಾಲು ಕಡಿಮೆಯಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಅಂತಹವರು ಈ ರೋಗದ ವಿರುದ್ಧ ಲಸಿಕೆ ಕೊಡಿಸಲು ಮುಂದಾಗುವುದಿಲ್ಲ. ಇದರಿಂದ ರೋಗ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು `ಪ್ರಜಾವಾಣಿ~ಗೆ ತಿಳಿಸಿದರು.ಆರಿಕುಂಟೆ ಗ್ರಾಮದ ಕೆಲವರು ಚಿಂತಾಮಣಿ ದನಗಳ ಸಂತೆಯಲ್ಲಿ ಅರಿವಿಲ್ಲದೆ ಕಾಲು ಬಾಯಿ ಜ್ವರ ಪೀಡಿತವಾಗಿದ್ದ ಎರಡು ಸೀಮೆ ಹಸುಗಳನ್ನು ಖರೀದಿಸಿ ತಂದಿದ್ದಾರೆ. ಈ ರೋಗ ವೈರಾಣುವಿನಿಂದ ಬರುತ್ತದೆ. ಅದು ಗಾಳಿಯಲ್ಲಿ ಹರಡುತ್ತದೆ. ಈ ಕಾರಣದಿಂದ ಗ್ರಾಮದ ಇತರ ಹಸುಗಳಿಗೆ ಹರಡಿದೆ. ರೋಗ ಉಲ್ಬಣಿಸಿ ಅವು ಸಾವನ್ನಪ್ಪಿವೆ. ಸತ್ತ ಹಸುಗಳ ಪೈಕಿ ಜ್ವರದಿಂದ ನಿತ್ರಾಣಗೊಂಡಿದ್ದ ಎರಡು ಹಸುಗಳು ಗೊಟ್ಟದಲ್ಲಿ ಔಷಧಿ ಕುಡಿಸುವಾಗ ಪೊರೆಹೋಗಿ ಉಸಿರು ಕಟ್ಟಿ ಸತ್ತಿವೆ ಎಂದು ಹೇಳಿದರು.ರೋಗ ಪೀಡಿತ ಹಸುಗಳನ್ನು ಇತರ ಹಸು ಗಳೊಂದಿಗೆ ಕಟ್ಟಬಾರದು. ಹಾಗೆ ಮಾಡಿದರೆ ರೋಗ ಇತರ ಹಸುಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಕಾಲು ಬಾಯಿ ಜ್ವರದ ವೈರಾಣು ಗಾಳಿಯಲ್ಲಿ ಹರಡುವುದರಿಂದ ರೋಗ ನಿಯಂತ್ರಣ ಸುಲಭವಲ್ಲ. ಆದ್ದರಿಂದ ಪಶುಪಾಲಕರು ಈ ರೋಗ ಬರದಂತೆ ಎಚ್ಚರ ವಹಿಸಬೇಕು. ಕಾಲ ಕಾಲಕ್ಕೆ ಸರಿಯಾಗಿ ರೋಗ ನಿರೋಧಕ ಲಸಿಕೆ ಕೊಡಿಸಬೇಕು.ಹಸುಗಳ ಆಕಸ್ಮಿಕ ಸಾವಿನಿಂದ ರೈತ ಆರ್ಥಿಕ ನಷ್ಟ ಅನುಭವಿಸುವುದನ್ನು ತಪ್ಪಸಲು ಅವರು ತಪ್ಪದೆ ಹಸುಗಳಿಗೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಹಸು ಸತ್ತಲ್ಲಿ ವಿಮಾ ಕಂಪನಿ ನಷ್ಟ ಪರಿಹಾರ ನೀಡುತ್ತದೆ ಎಂದು ಸಲಹೆ ಮಾಡಿದರು. ಆರಿಕುಂಟೆ ಮತ್ತು ಸುತ್ತ ಮುತ್ತಲಿನ 8 ಗ್ರಾಮಗಳ ಪಶುಪಾಲಕರು ಸೋಮವಾರದಿಂದ ಪ್ರಾರಂಭಿಸಲಾಗುವ ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸುವುದರ ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry