ಮಂಗಳವಾರ, ಏಪ್ರಿಲ್ 13, 2021
24 °C

ಕಾಲುವೆಗೆ ನೀರು ಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಕಾಲುವೆಯಲ್ಲಿ ನೀರಿಲ್ಲದೇ ಬೆಳೆಗಳು ಒಣಗುತ್ತಿರುವುದರಿಂದ ಇನ್ನೂ ಕೆಲವು ದಿನ ಆಲಮಟ್ಟಿ ಆಣೆಕಟ್ಟು ವ್ಯಾಪ್ತಿಯ ಎಲ್ಲ ಕಾಲುವೆ ಗಳಿಗೂ ನೀರು ಹರಿಸಬೇಕೆಂದು ರೈತರು ಗುರುವಾರ ಮುಖ್ಯ ಎಂಜಿನೀಯರ್ ಕಚೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದರು.ನಾರಾಯಣಪುರ ಆಣೆಕಟ್ಟಿಗೆ ಬೇಕಾಬಿಟ್ಟಿಯಾಗಿ ನೀರು ಹರಿಬಿಡುತ್ತಿರುವುದನ್ನು ನಿಲ್ಲಸಬೇಕು ಎಂದು ಆಗ್ರಹಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ, ಜಿ.ಪಂ. ಸದಸ್ಯ ಶಿವಾನಂದ ಆವಟಿ ಹಾಗೂ ಇನ್ನಿತರರು ಸ್ವಲ್ಪಹೊತ್ತು ಮುಖ್ಯ ಎಂಜಿನಿಯರ್ ಎಸ್.ಎಮ್. ವಾಘಮಾರೆ ಅವರೊಡನೆ ವಾಗ್ವಾದಕ್ಕಿಳಿದರು.ಆಲಮಟ್ಟಿ ಅಣೆಕಟ್ಟು ವ್ಯಾಪ್ತಿಯ ರೈತರು ಕೃಷ್ಣಾ ನದಿಯ ನೀರನ್ನು ನಂಬಿ, ಶೇಂಗಾ, ಅಲಸಂದಿ, ಮೆಕ್ಕೆಜೋಳ, ಕಬ್ಬು ಬೆಳೆದ್ದಿದ್ದಾರೆ. ಅವುಗಳಿಗೆ ಇನ್ನೂ ಒಂದು ವಾರ ನೀರಿನ ಅಗತ್ಯವಿದೆ ಎಂದು ರೈತ ಮುಖಂಡರು ಆಗ್ರಹಿಸಿದರು.ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಜೂನ್ ಅಂತ್ಯದವರೆಗೂ ನೀರಿನ ತೊಂದರೆಯಾಗದಂತೆ ಸಾಕಷ್ಟು ನೀರನ್ನು ಉಳಿಸಿಕೊಂಡು ಕಾಲುವೆಗಳಿಗೆ ಹಾಗೂ ನಾರಾಯಣ ಪುರ ಜಲಾಶಯಕ್ಕೆ ಹರಿಬಿಡಬೇಕು ಎಂದು ಆಗ್ರಹಿಸಲಾಯಿತು.ರೈತರ ಒತ್ತಾಯಕ್ಕೆ ಮಣಿದರೂ ತಮ್ಮ ಪಟ್ಟು ಸಡಿಲಿಸದ ಮುಖ್ಯ ಎಂಜಿನೀಯರ್ ವಾಘಮಾರೆ, ಪ್ರಸ್ತುತ ಕೃಷ್ಣಾ ನದಿ ನೀರಿನ ಬಳಕೆಯ ಕುರಿತು, ಕಾಲುವೆಗೆ ನೀರು ಬಿಡದ ಬಗ್ಗೆ ಇರುವ ತಾಂತ್ರಿಕ ಕಾರಣಗಳನ್ನು ವಿವರಿಸಿದರು.ನೀರು-ಭರವಸೆ: ಭಾನುವಾರದಿಂದ (ಏ.24) ಕೇವಲ ನಾಲ್ಕು ದಿನ ಮಾತ್ರ ಕಾಲುವೆಗಳಿಗೆ ನೀರು ಬಿಡಲಾಗುವುದು ಎಂದು ವಾಘಮೋರೆ ಮೌಖಿಕ ಭರವಸೆ ನೀಡಿದರು ಹೊರತು ಲಿಖಿತ ಭರವಸೆ ನೀಡಲಿಲ್ಲ.ಪ್ರತಿಭಟನೆಯ ನೇತೃತ್ವವನ್ನು ಶಿವಾನಂದ ಕಲ್ಲೂರ ಹಾಗೂ ಶಿವಾನಂದ ಆವಟಿ ವಹಿಸಿದ್ದರು. ರೈತರಾದ ಮಲ್ಲಿಕಾರ್ಜುನ ನಾಯಕ, ಅಶೋಕ ಚಳ್ಳಮರದ, ಸಿದ್ಧನಗೌಡ ಪಾಟೀಲ, ನಬೀಸಾಬ್ ಬಾಣಕಾರ, ಜೆ.ಎಸ್. ಪಾಟೀಲ, ಟಿ.ಎ. ಕುರಿ, ಜಿ.ಸಿ. ಮುತ್ತಲದಿನ್ನಿ, ಶೇಖಣ್ಣ ಸಂಗಣ್ಣವರ, ಚಂದ್ರಪ್ಪ ಹದ್ಲಿ, ರಾಮಣ್ಣ ಕಾಳಿ, ಬಾಲಪ್ಪ ವಗ್ಗರ, ಮಹಾಂತಯ್ಯ ಗಣಾಚಾರಿ, ಸಂಗಮೇಶ ಸಾಲಿಮಠ, ಪ್ರಕಾಶ ತುಪ್ಪದ, ಗುರಪ್ಪ ಹುಗ್ಗಿ, ಬಸವರಾಜ ಕಾಳಗಿ, ಬಸಯ್ಯ ಗಣಾಚಾರಿ ಹಾಜರಿದ್ದರು.ಕಾಳಗಿ, ನಿಡಗುಂದಿ, ಬಳಬಟ್ಟಿ, ಹುಲ್ಲೂರ, ಇಟಗಿ, ಮುದ್ದಾಪೂರ, ಯಲಗೂರ, ಕಾಶಿನಕುಂಟಿ, ಯಲ್ಲಮ್ಮನ ಬೂದಿಹಾಳ ಭಾಗದ ರೈತರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.