ಭಾನುವಾರ, ಜೂಲೈ 12, 2020
29 °C

ಕಾಲುವೆಗೆ ನೀರು: ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಕೃಷ್ಣಾ ಭಾಗ್ಯ ಜಲ ನಿಗಮದ ಇಂಡಿ ಶಾಖಾ ಕಾಲುವೆಯಿಂದ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಜೇವರ್ಗಿ- ಲೋಕಾಪುರ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಜೇರಟಗಿ ಬಳಿ ರಸ್ತೆ ತಡೆ ನಡೆಸಿದರು.



ಇಂಡಿ ಶಾಖಾ ಕಾಲುವೆಯ ವಿತರಣಾ ಕಾಲುವೆ 8, 9 ಹಾಗೂ 11 ರಿಂದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಂಡಿ ಶಾಖಾ ಕಾಲುವೆಯ ವ್ಯಾಪ್ತಿಯಲ್ಲಿ ಜೇವರ್ಗಿ ತಾಲ್ಲೂಕಿನ 20 ಹಳ್ಳಿಗಳು ಬರುತ್ತವೆ. 20 ಹಳ್ಳಿಗಳ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸದ್ದರಿಂದ ಬೆಳೆಗಳು ಒಣಗುತ್ತಿವೆ.ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯವಾಗಿ ಅನೇಕ ಬಾರಿ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.



ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಶೋಭಾ ಬಾಣಿ ಇಂಡಿ ಶಾಖಾ ಕಾಲುವೆಯ ವಿತರಣಾ ಕಾಲುವೆಗಳಿಗೆ ತಡೆಗೋಡೆ ನಿರ್ಮಿಸಿ 20 ಹಳ್ಳಿಗಳ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಬೇಕು. ಬದನಿಹಾಳ ತಾಂಡಾದ ಸುಮಾರು 5 ಜನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರ ಜಮೀನುಗಳು ಸ್ವಾಧೀನ ಪಡಿಸಿಕೊಂಡು ಏತ ನೀರಾವರಿ ಯೋಜನೆ ಕೈಗೊಂಡು ಸುಮಾರು ಒಂದು ಸಾವಿರ ಎಕರೆ ಜಮೀನಿಗೆ ನೀರು ಸರಬುರಾಜು ಮಾಡಬಹುದಾಗಿತ್ತು. ಆದರೆ ರೈತರಿಗೆ ಭೂ ಸ್ವಾಧೀನದ ಹಣ ತಲುಪದ ಕಾರಣ ನೀರು ವಿತರಿಸುತ್ತಿಲ್ಲ. ಸಂಬಂಧಪಟ್ಟ ರೈತರಿಗೆ ಹಣ ಬಿಡುಗಡೆಗೊಳಿಸಿ ಸಾವಿರ ಎಕರೆ ಜಮೀನಿನಲ್ಲಿರುವ ಬೆಳೆಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.  ಒಂದು ಗಂಟೆ ರಸ್ತೆ ತಡೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ಪ್ರಯಾಣಿಕರು ಪರದಾಡುವಂತಾಗಿತ್ತು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೃಷ್ಣಾ ಭಾಗ್ಯ ಜಲ ನಿಗಮದ (ಇಂಡಿ ಶಾಖಾ ಕಾಲುವೆ)ಯ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಷ ಮರಕುಂದಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.



ರೈತರ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ರಸ್ತೆ ತಡೆಯನ್ನು ಹಿಂದಕ್ಕೆ ಪಡೆಯಲಾಯಿತು. ಬೈಲಪ್ಪ ನೆಲೋಗಿ, ಗುಂಡಪ್ಪಗೌಡ ಹಾಲಘತ್ತರಗಾ, ಭೂತಾಳಿ ದಾವಜಿ, ಸಿದ್ರಾಮಪ್ಪಗೌಡ ಸಿದ್ನಾಳ, ದೊಡ್ಡಪ್ಪಗೌಡ ಹುಲ್ಲೂರ, ಅಣ್ಣು ದೇಸಾಯಿ ಜೇರಟಗಿ, ನಿಂಗಣ್ಣಗೌಡ ಮೋಗನಿಟಗಾ, ಮರೆಪ್ಪ ಸಿಂಗೆ, ಪಂಡಿತ ಪವಾರ, ದತ್ತಪ್ಪ ರಂಜಣಗಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.