ಕಾಲುವೆಗೆ ನೀರು: ರೈತರ ಬೃಹತ್ ಪ್ರತಿಭಟನೆ

7

ಕಾಲುವೆಗೆ ನೀರು: ರೈತರ ಬೃಹತ್ ಪ್ರತಿಭಟನೆ

Published:
Updated:

ಆಲಮಟ್ಟಿ: ಆಲಮಟ್ಟಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಕಲ್ಪಿಸಿ ಕೊಡದಿದ್ದರೆ ನಮ್ಮ ರಕ್ತ ಕೊಟ್ಟಾದರೂ ಸರಿ ನೀರು ಪಡೆಯುತ್ತೇವೆ ಎಂದು ರೈತ ಮುಖಂಡ ಎಂ.ಕೆ. ಮುತ್ತಣ್ಣವರ ಆಕ್ರೋಶ ವ್ಯಕ್ತಪಡಿಸಿದರು.ಅವರು ಸೋಮವಾರ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಡಿಯಲ್ಲಿ ಆಲಮಟ್ಟಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ನೀರು ಹರಿಸುವ ಕುರಿತು ರೈತರು ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು.ನೀರಾವರಿ ಸಲಹಾ ಸಮಿತಿ ಸಭೆ ಇದೇ 25ರ ವರೆಗೆ ನೀರು ನೀಡುವುದಾಗಿ ಹೇಳಿದ್ದು ಸಭೆಯ ನಿರ್ಣಯ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದರಿಂದ ಈ ಭಾಗದ ಲಕ್ಷಾಂತರ ರೈತರಿಗೆ ಅಪಾರ ಹಾನಿಯಾಗಲಿದೆ. ಈ ಭಾಗದ ಭೂಮಿಯ ಗುಣಮಟ್ಟವನ್ನು ಆಧರಿಸಿ ರೈತರು ಬಿತ್ತನೆ ಮಾಡುತ್ತಿದ್ದು ಏಪ್ರಿಲ್ ಅಂತ್ಯದವರೆಗೆ ಕಾಲುವೆಗಳಿಗೆ ನೀರು ಪೂರೈಸದಿದ್ದರೆ ಅಪಾರ ಪ್ರಮಾಣದ ಬೆಳೆನಾಶವಾಗಲಿದೆ ಇದರಿಂದ ರೈತನ ಬದುಕು ಕೊಚ್ಚಿ ಹೋಗುತ್ತದೆ. ಸಾಮೂಹಿಕವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ನೂರಾರು ರೈತರು ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ನಂತರ ಪ್ರತಿಭಟನಾ ರ‌್ಯಾಲಿ ನಡೆಸಿ ಮುಖ್ಯ ಎಂಜಿನಿಯರ್ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಮನವಿಯನ್ನು ಮುಖ್ಯ ಎಂಜಿನಿಯರ್ ಪರವಾಗಿ ಎಡದಂಡೆ ಕಾಲುವೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಚವ್ಹಾಣ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಸೇರಿದ ನೂರಾರು ರೈತರನ್ನು ಉದ್ದೇಶಿಸಿ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ವಾರಾಬಂದಿ ಜಾರಿಗೆ ತಂದು ಕೊನೆಯ ಹಂತದ ರೈತರಿಗೆ ನೀರು ತಲುಪುವಂತಾಗಬೇಕು. ನೀರು ಬಳಕೆದಾರರ ಸಹಕಾರಿ ಸಂಘ ಸ್ಥಾಪಿಸಬೇಕು, ಅಲ್ಲಲ್ಲಿ ಒಡೆದ ಹೋದ ಕಾಲುವೆಗಳನ್ನು ದುರಸ್ತಿಗೊಳಿಸ ಬೇಕೆಂದು ವಿನಂತಿಸಿದರು.ಇದೇ ಸಂದರ್ಭದಲ್ಲಿ ರೈತರು ಚರ್ಚೆ ನಡೆಸಿ, ರೈತರ ಬೇಡಿಕೆಗಳಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನೀರಾವರಿ ಸಚಿವರು ಅಧಿಕಾರಿಗಳು ಸ್ಪಂದಿಸದಿದ್ದರೆ ಜಿಲ್ಲೆಯ ಸಾವಿರಾರು ರೈತರು ನೀರಾವರಿ ಕಚೇರಿ ಮುಂದೆ ಇದೇ 13ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದರು.ಈ ಸಂದರ್ಭದಲ್ಲಿ ರೈತರಾದ ಅರ್.ಎಸ್. ಉಕ್ಕಲಿ, ನಿಂಗಪ್ಪಾ ತೆಲಗಿ, ಮೌಲಾಸಾಬ ವಾಲಿಕಾರ, ಸಂಗಪ್ಪ. ಅರಮನಿ, ಶಿವಪ್ಪ. ಜಟಗಿ, ಪ್ರಕಾಶ. ಕಾರಕೂನ, ಶಶಿಕಾಂತ. ಪಾಟೀಲ, ನಿಂಗಪ್ಪ. ದಡ್ಡಿ, ಹನುಮಂತ ಬಿರಾದಾರ, ಸೇರಿದಂತೆ ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry