ಕಾಲುವೆ ನೀರಿಗಾಗಿ ತೀವ್ರ ಪ್ರತಿಭಟನೆ

7

ಕಾಲುವೆ ನೀರಿಗಾಗಿ ತೀವ್ರ ಪ್ರತಿಭಟನೆ

Published:
Updated:
ಕಾಲುವೆ ನೀರಿಗಾಗಿ ತೀವ್ರ ಪ್ರತಿಭಟನೆ

ಹುಣಸಗಿ:  ಎಡದಂಡೆ ಕಾಲುವೆಗೆ ನೀರು ಹರಿಸಲು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಿನ ಕಾವು ಪಡೆಯುತ್ತಿದೆ. ನಾರಾಯಣಪುರ ಮುಖ್ಯ ಎಂಜಿನಿಯರ್ ಕಚೇರಿ ಎದಿರು ತೀವ್ರ ಪ್ರತಿಭಟನೆ ನಂತರ ಜಲಾಶಯಕ್ಕೆ ಮುತ್ತಿಗೆ ಯತ್ನ ಕೂಡಾ ನಡೆಯಿತು. ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ರೈತರು ಮತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಬುಧವಾರ ಕರವೇ ಕಾರ್ಯಕರ್ತರು ಮತ್ತು ರಾಜ್ಯ ರೈತ ಸಂಘ, ಮತ್ತು ಹಸಿರುಸೇನೆ  ಕಾರ್ಯಕರ್ತರು ವಾಲ್ಮೀಕಿ ವೃತ್ತದಿಂದ ಮುಖ್ಯ ಎಂಜಿನಿಯರ್ ಕಚೇರಿವರೆಗೆ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ಸಜ್ಜೆ, ಸೇಂಗಾ, ಸೂರ್ಯಕಾಂತಿ ಬೆಳೆಗಳನ್ನು ಹಾಕಿದ್ದು ಕಾಳು ಕಟ್ಟುವ ಹಂತದಲ್ಲಿಯೇ ನೀರು ಸ್ಥಗಿತ ಮಾಡಿದರೇ ರೈತರ ಕುತ್ತಿಗೆ ಹಿಚುಕಿದಂತಾಗುತ್ತದೆ. ನೀರು ಕೊಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ ಗುಡುಗಿದರು.ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ ಅಧಿಕಾರಿಗಳು ರಾಜಕಾರಣಿಗಳು ನಮ್ಮ ಅಣ್ಣ ತಮ್ಮಂದಿರೇ ಆದ್ದರಿಂದ ತಕ್ಷಣ ರೈತರ ನೆರವಿಗೆ ಬನ್ನಿ. ಇಲ್ಲದಿದ್ದರೇ ನೀವೆ ರೈತರಿಗೆ ತೊಟ್ಟು ವಿಷಕೊಡಿ ಎಂದು ನೊಂದು ನುಡಿದರು.ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿಗಳು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗೆ ಸ್ಪಂದಿಸಲಿ ಎಂದು ಖಾರವಾಗಿ ನುಡಿದರು.ಕರವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಪ್ಯಾಪಲಿ, ನಂದಣ್ಣ ದೊರೆ, ವೆಂಕಟೇಶ ಬೈರಿಮಡ್ಡಿ, ರವಿರಾಜ ನಗನೂರ, ಅಯ್ಯಣ್ಣ ಹಾಲಬಾವಿ, ಶರಣಪ್ಪ ಕೊಳಿಹಾಳ, ಮೈಲಾರಪ್ಪ ಸಗರ, ಬಸನಗೌಡ, ಶಿವಲಿಂಗ ಮಾಳನೂರ, ವಿರೇಶ. ಮಂಜುನಾಥ ದಳಪತಿ, ಭೀಮನಗೌಡ ಗೌಡಗೇರಿ, ಪ್ರಕಾಶ ಕುಪ್ಪಿ, ಮಲ್ಲನಗೌಡ ಕಕ್ಕೇರಿ, ಬಸವರಾಜ ಚನ್ನೂರ  ಪ್ರತಿಭಟನೆಯಲ್ಲಿ ಇದ್ದರು.ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಡ್ಯಾಂ ಬಳಿ ಕರವೇ ಗ್ರಾಮ ಘಟಕದ ಅಧ್ಯಕ್ಷರೊಬ್ಬರು ಬೇಲಿ ಎರಲು ಪ್ರಯತ್ನಿಸಿದರು. ನಂತರ ಪೊಲೀಸರು ಕೆಳಗಿಳಿಸಲು ಪ್ರಯತ್ನಿಸಿದರು. ಮುಖ್ಯ ಎಂಜಿನಿಯರ್ ಕಚೇರಿ ಬಳಿ ಯಾದಗಿರಿ ಜಿಲ್ಲೆಯ ಪೊಲೀಸರು, ಜಲಾಶಯದ ಬಳಿ ವಿಜಾಪುರ ಜಿಲ್ಲೆಯ ಪೊಲೀಸರು ಸೂಕ್ತ ಬಂದೊಬಸ್ತ್ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry