ಕಾಲುವೆ ಪದ್ಧತಿಯಲ್ಲಿ ಮಾವಿನ ಗಿಡ ನಾಟಿ

7

ಕಾಲುವೆ ಪದ್ಧತಿಯಲ್ಲಿ ಮಾವಿನ ಗಿಡ ನಾಟಿ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾದಂತೆ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೊಸ ಪದ್ಧತಿ­ಯನ್ನು ಅನುಸರಿಸಲು ರೈತರು ಮುಂದಾಗಿದ್ದಾರೆ. ಧರೆಗೆ ಬಿದ್ದ ಪ್ರತಿ ಹನಿ ಮಳೆ ನೀರನ್ನೂ ಸಮಪರ್ಕವಾಗಿ ಬಳಸಿ­ಕೊಳ್ಳುವ ವಿಧಾನಗಳನ್ನು ತಾವೇ ಕಂಡು­ಕೊಳ್ಳುತ್ತಿದ್ದಾರೆ.ತಾಲ್ಲೂಕು ಮಾವಿನ ಬೆಳೆಗೆ ಪ್ರಸಿದ್ಧಿ. ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶ­ದಲ್ಲಿ ಮಾವನ್ನು ಬೆಳೆಯ­ಲಾಗಿದೆ. ಈಗಲೂ ಮಾವಿನ ಬೆಳೆಯ ವಿಸ್ತರಣೆ ಮುಂದುವರೆದಿದೆ. ಶತಮಾನ­ಗಳಿಂದ ಇಲ್ಲಿ ಮಾವನ್ನು ಗುಳಿ ಪದ್ಧತಿ­ಯಲ್ಲಿ ನಾಟಿ ಮಾಡಲಾಗುತ್ತಿತ್ತು. ಸುಮಾರು ಎರಡು ಅಡಿ ಆಳದ ಗುಳಿ ತೋಡಿ ಗಿಡ ನೆಡಲಾಗುತ್ತಿತ್ತು. ಸಾಕಷ್ಟು ಮಳೆ ಸುರಿಯುತ್ತಿದ್ದ ಕಾಳದಲ್ಲಿ ಅದು ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಅಂಥ ಮಳೆ ಇತಿಹಾಸವಾಗಿದೆ. ನಾಟಿ ಮಾಡುವ ಗಿಡಗಳಲ್ಲಿ ಬದುಕಿ ಉಳಿ­ಯುವ ಗಿಡಗಳ ಸಂಖ್ಯೆ ಕಡಿಮೆಯಾಗಿದೆ.ಈ ಸಮಸ್ಯೆ ನಿವಾರಣೆಗೆ ರಾಂಪುರ ಗ್ರಾಮದ ಪ್ರಗತಿಪರ ರೈತ ಹಾಗೂ ಪರಿಸರವಾದಿ ಅಶೋಕ್‌ ಕುಮಾರ್‌ ಕಾಲುವೆ ಪದ್ಧತಿಯಲ್ಲಿ ಮಾವಿನ ಗಿಡ ನಾಟಿ ಮಾಡಿದ್ದಾರೆ. ಜಮೀನಿನ ಇಳಿ­ಜಾರಿಗೆ ಅಡ್ಡಲಾಗಿ ಕಾಲುವೆಗಳನ್ನು ನಿರ್ಮಿಸಿ ಕಾಲುವೆಗೆ ಸೊಪ್ಪು ಸದೆ ತುಂಬಿ ಮಣ್ಣು ಮುಚ್ಚಿದ ನಂತರ ಮಾವಿನ ಸಸಿ­ಗಳನ್ನು ನೆಟ್ಟಿದ್ದಾರೆ. ಕಾಲುವೆ ಪಕ್ಕದಲ್ಲಿ ಎರಡೂ ಕಡೆ ತೊಗರಿ ಗಿಡ ಬೆಳೆಸಿದ್ದಾರೆ. ಈ ವಿಧಾನದಲ್ಲಿ ಬೆಳೆ ನಳನಳಿಸುತ್ತಿದೆ.ಗುಳಿ ಪದ್ಧತಿಯಲ್ಲಿ ಮಳೆ ನೀರು ಹರಿದು ವ್ಯಥರ್ವಾಗುತ್ತದೆ. ಕಾಲುವೆ ಪದ್ಧತಿಯಲ್ಲಿ ಸುರಿದ ಮಳೆ ನೀರು ಜಮೀನಿನಿಂದ ಹೊರಗೆ ಹರಿದು ಹೋಗದೆ ಕಾಲುವೆಯಲ್ಲಿ ನಿಲ್ಲುತ್ತದೆ. ಇದರಿಂದ ಹೆಚ್ಚು ಕಾಲ ತೇವ ಉಳಿ­ಯಲು ಸಾಧ್ಯವಾಗುತ್ತದೆ. ಕಾಲುವೆ ಪಕ್ಕದಲ್ಲಿ ನಾಟಿ ಮಾಡಲಾದ ತೊಗ­ರಿಗೂ ತೇವಾಂಶ ಸಿಕ್ಕಿ ಬೆಳೆ ಹುಲುಸಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಂಪುರ ಅಶೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಈಗಾಗಲೇ ಅವರು ಗಿಡದ ಬೇರಿಗೆ ಬಾಟಲ್‌ ನೀರು ಉಣಿಸುವ ಮೂಲಕ ಬೇಸಿಗೆಯಲ್ಲೂ ಗಿಡ ಸೊರಗದಂತೆ ಮಾಡಿದ್ದಾರೆ. ಕಳೆಗಳನ್ನು ಬೆಳೆಯಲು ಬಿಟ್ಟು ಅದಕ್ಕೆ ಕಟ್ಟರ್‌ ಹಾಕಿಸಿ ಮಣ್ಣಿಗೆ ಸೇರಿಸುವುದರ ಮೂಲಕ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಜೊತೆಗೆ ಎರೆ ಗೊಬ್ಬರ ತಯಾರಿಸಿ ಜಮೀನಿನ ಫಲವತ್ತತೆ ಹೆಚ್ಚಿಸುತ್ತಿದ್ದಾರೆ. ಅಂತರ್ಜಲದ ಕೊರತೆ ಹಾಗೂ ಮಳೆ ಅಭಾವದಿಂದಾಗಿ ಕಂಗೆಟ್ಟಿರುವ ರೈತರು, ಲಭ್ಯವಿರುವ ನೀರನ್ನು ಹೆಚ್ಚು ಜೋಪಾನ­ವಾಗಿ ಬಳಸದಿದ್ದರೆ, ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಸಿಗುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ.ಅಶೋಕ್‌ ಕುಮಾರ್‌ ಒಬ್ಬ ಪ್ರಯೋಗ­ಶೀಲ ಕೃಷಿಕ. ಅವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳು ಇತರ ರೈತರಿಗೆ ಮಾದರಿಯಾಗಿ ಅನುಸರಿ­ಸಲ್ಪಡುತ್ತಿವೆ. ಇದನ್ನು ರೈತ ಸಮು­ದಾಯ ಸಾಂಘಿಕವಾಗಿ ರೂಢಿಸಿ­ಕೊಂಡಲ್ಲಿ ನೀರಿನ ಸದ್ಬಳಕೆ ಸಾಧ್ಯ­ವಾಗುತ್ತದೆ. ಬೆಳೆಯೂ ಕೈಗೆ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry