ಕಾಲುವೆ ಸೇತುವೆ ಕುಸಿದು ಸಂಚಾರ ಸ್ಥಗಿತ

7

ಕಾಲುವೆ ಸೇತುವೆ ಕುಸಿದು ಸಂಚಾರ ಸ್ಥಗಿತ

Published:
Updated:

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತುಂಗಭದ್ರಾ ಬಲದಂಡೆ ಕಾಲುವೆಗೆ ನಿರ್ಮಿಸಿದ ಸೇತುವೆಯು ಭಾನುವಾರ ಬೆಳಗಿನಜಾವ ಕುಸಿದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತೋರಣಗಲ್ಲು- ಕುರೆಕೊಪ್ಪ ಗ್ರಾಮಗಳ ನಡುವೆ ಇರುವ ಕಾಲುವೆಗೆ ನಿರ್ಮಿಸಿರುವ ಈ ಸೇತುವೆಯು ಬೆಳಗಿನಜಾವ 4.15ರ ಸುಮಾರಿಗೆ ಅಧಿಕ ಭಾರದ ಸರಕು ಸಾಗಣೆಯ ಲಾರಿಯೊಂದು ಸಾಗುತ್ತಿದ್ದಂತೆಯೇ ಕುಸಿದು ಬಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಕಳೆದ ವರ್ಷವಷ್ಟೇ ಈ ಸೇತುವೆಗೆ ತಡೆಗೋಡೆ ಇಲ್ಲದ್ದರಿಂದ ಕಾರೊಂದು  ಕಾಲುವೆಗೆ ಬಿದ್ದು, ಐವರು ಮೃತಪಟ್ಟಿದ್ದರು. 50 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಸೇತುವೆ ಮೇಲೆ ಇತ್ತೀಚಿನ ವರ್ಷಗಳಲ್ಲಿ ಅಧಿಕ ಭಾರದ ಕಬ್ಬಿಣದ ಅದಿರು, ಉಕ್ಕು ಹಾಗೂ ವಿವಿಧ ಕಾರ್ಖಾನೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭಾರಿ ಗಾತ್ರದ ಉಪಕರಣಗಳನ್ನು ಲಾರಿಗಳ ಮೂಲಕ ಸಾಗಿಸುತ್ತಿರುವುದು ಸೇತುವೆ ಕುಸಿಯಲು ಕಾರಣವಾಗಿದೆ.ಸೇತುವೆ ಕುಸಿದ ಪರಿಣಾಮ ಬಳ್ಳಾರಿಯಿಂದ ಹೊಸಪೇಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಸ್ಥಗಿತಗೊಂಡಿದೆ. ತೋರಣಗಲ್‌ನಿಂದ ಹೊಸಪೇಟೆಯತ್ತ ಸಾಗಲು ಬೇರೆ ಮಾರ್ಗ ಅವಲಂಬಿಸಬೇಕಾಗಿದೆ. ಬಳ್ಳಾರಿಯಿಂದ ಹೊಸಪೇಟೆಗೆ ಸಾಗುವ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಲಘು ವಾಹನಗಳು ಕುಡತಿನಿಯಿಂದ ದರೋಜಿ, ದೇವಲಾಪುರ, ಸೀತಾರಾಮ ತಾಂಡಾ ಹಾಗೂ ಕಮಲಾಪುರ ಮಾರ್ಗವಾಗಿ ತೆರಳುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry