ಕಾಲೇಜಿಗೆ ಮೂಲಸೌಕರ್ಯ: ದತ್ತ

7

ಕಾಲೇಜಿಗೆ ಮೂಲಸೌಕರ್ಯ: ದತ್ತ

Published:
Updated:

ಬೀರೂರು: ‘ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾದಾನ ಮಾಡಲು 1942ರಲ್ಲಿಯೇ ಆರಂಭಗೊಂಡು ಪಿಯು ಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜಿ­ನಲ್ಲಿ ಮೂಲಸೌಕರ್ಯ ಕೊರತೆ ಬೇಸರ ಮೂಡಿಸಿದ್ದು ಕಾಲೇ­ಜಿಗೆ ಮೂಲಸೌಕರ್ಯ ಕಲ್ಪಿಸುವೆ’ ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.ಪಟ್ಟಣದ ಕೆಎಲ್‌ಕೆ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಸೌಲಭ್ಯವನ್ನು ಪ್ರಜೆಗಳಿಗೆ ತಲುಪಿಸಬೇಕಾದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಕಾರ್ಯವೈಖರಿ ಬೇಸರ ತಂದಿದ್ದು, ಕ್ಷೇತ್ರದ ಸಮಸ್ಯಗೆಳ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ವೈಯಕ್ತಿಕವಾಗಿ ಪಾಪಪ್ರಜ್ಞೆ  ಮೂಡಿ­ಸಿದೆ. ಮಕ್ಕಳ ಕಲಿಸುವಿಕೆಗೆ ಸಹಕಾರ ನೀಡಬೇಕಾದ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಇಲಾಖಾ ಮುಖ್ಯಸ್ಥರ ಮಾತಿಗೂ ಮನ್ನಣೆ ನೀಡು­ತ್ತಿಲ್ಲ ಎನ್ನುವುದು ನೋವುಂಟು ಮಾಡಿದೆ. ದಶಕಗಳು ಕಳೆದರೂ ಕೊಠಡಿ, ಉಪನ್ಯಾಸಕರು, ಶೌಚಾ­ಲಯ ಮುಂತಾದ ಮೂಲ­ಸೌಕರ್ಯಗಳ ಕೊರತೆಯನ್ನು ನೀಗು­ವಂತೆ ಶಬರಿಯಾಗಿ ಕಾದಿರುವ ಕಾಲೇ­ಜಿಗೆ ಸಾಲ ಮಾಡಿಯಾದರೂ ಹಣ­ತಂದು ಸೌಕರ್ಯ ಕಲ್ಪಿಸಿ ಶಾಪವಿಮೋ­ಚನೆ ಮಾಡುವುದಾಗಿ ಭರವಸೆ ನೀಡಿದರು.ವಿದ್ಯಾರ್ಜನೆಯೊಂದೇ ಶಿಕ್ಷಣದ ಉದ್ದೇಶವಲ್ಲ, ವಿದ್ಯಾರ್ಥಿಗಳು ‘ವಿದ್ಯೆ­ಗಿಂತ ಬುದ್ಧಿ ಲೇಸು’ ಎಂದು ಅರಿತು ಕಲಿಕೆಯ ಜೊತೆಗೆ ಹೊರಜಗತ್ತಿನ ವಿದ್ಯ­ಮಾನಗಳ ಜ್ಞಾನಾರ್ಜನೆ ಮಾಡುವ ಮೂಲಕ ಅರಿವಿನ ಹರಹನ್ನು ವಿಸ್ತರಿಸಿ­ಕೊಳ್ಳಬೇಕು ಎಂದು ಕರೆ ನೀಡಿದ ಅವರು, ತಾವು ಶಾಸಕರಾಗಿ ಇರುವ­ವರೆಗೆ ವಾರ್ಷಿಕ ಉತ್ತಮ ಫಲಿತಾಂಶ ಗಳಿಸುವ 6 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಬಹು­ಮಾನ ನೀಡುವುದಾಗಿ ಘೋಷಿಸಿ ಸ್ಥಳ­ದ­ಲ್ಲಿಯೇ ಪ್ರಾಂಶುಪಾಲರಿಗೆ ಹಣ ಹಸ್ತಾಂತರಿಸಿದರು. ಯಾವುದೇ ಟೀಕೆ­ಗಳಿಗೆ ಹೆದರದೆ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ತಿಳಿಸಿದ ಅವರು ವರ್ಷಾಂತ್ಯದ ಒಳಗೆ ಕಡೂರು–ಬೀರೂರು ಜನತೆಗೆ ಸಿಹಿನೀರು ಕೊಡು­ವುದಾಗಿ ಭರವಸೆ ವ್ಯಕ್ತಪಡಿಸಿದರು.ಕಾಲೇಜು ಪ್ರಾಂಶುಪಾಲರಾದ ಜಿ.ಎಚ್‌.ಯಶೋದಾ ಪ್ರಾಸ್ತಾವಿಕ­ವಾಗಿ ಮಾತನಾಡಿ, ಮಾನವೀಯ­ತೆಯ ವಿಕಸನಕ್ಕೆ ಶಿಕ್ಷಣವೇ ಮೂಲ­ವಾಗಿದ್ದು ಮಕ್ಕಳಿಗೆ ಮೂಲಸೌಕರ್ಯ­ಗಳ ಕೊರತೆ ಇರದಿದ್ದರೆ ಉತ್ತಮ ಶಿಕ್ಷಣ ನೀಡಬಹುದು. ಶಾಸಕರು 800 ಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಮೂಲಸೌಕರ್ಯ ಕೊರ­ತೆಯ ಶಾಪವಿಮೋಚನೆ ಮಾಡುವಂತೆ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry