ಶುಕ್ರವಾರ, ಆಗಸ್ಟ್ 23, 2019
21 °C

ಕಾಲೇಜಿಗೆ ಹೊಸ ವೇಳಾಪಟ್ಟಿ ಬಂತು

Published:
Updated:

ಕೋಲಾರ: ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯವೈಖರಿ ಈಗ ಬದಲಾಗಿದೆ. ಅದೂ, ಲೋಕಾಯುಕ್ತ ಡಾ.ವೈ.ಭಾಸ್ಕರರಾವ್ ಅವರು ಭೇಟಿ ನೀಡಿದ ಒಂದೇ ವಾರದೊಳಗೆ ಎಂಬುದು ವಿಶೇಷ.ಈ ಮೊದಲು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ತರಗತಿಗಳು ನಡೆಯುವಂತೆ ವೇಳಾಪಟ್ಟಿ ಇತ್ತು. ಅದನ್ನು ಬದಲಿಸಿ ಈಗ ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ತರಗತಿ ಚಟುವಟಿಕೆಗಳು ನಡೆಯುವ ರೀತಿಯಲ್ಲಿ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಶಿಸ್ತುಪಾಲನಾ ಸಮಿತಿಯು ಚುರುಕುಗೊಂಡಿದೆ. ತರಗತಿಗಳಿಗೆ ಹೋಗದೆ ಕಾಲೇಜು ಆವರಣದಲ್ಲಿ ತಿರುಗಾಡುವ, ಹರಟೆ ಹೊಡೆಯುತ್ತ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೂ ಚುರುಕು ಮುಟ್ಟಿಸುತ್ತಿದೆ.ಕಾಲೇಜಿಗೆ ಬಂದ ಕೂಡಲೇ ತರಗತಿಯೊಳಕ್ಕೆ ನಡೆಯುತ್ತಿದ್ದ ಬಹಳಷ್ಟು ಶಿಕ್ಷಕರು ಅಸಮಾಧಾನದ ನಡುವೆಯೇ ಮೊದಲು ಹಾಜರಾತಿ ರಿಜಿಸ್ಟರ್‌ಗೆ ಸಹಿ ಮಾಡಲು ಮುಂದಾಗುತ್ತಿದ್ದಾರೆ. ವಿದ್ಯಾರ್ಥಿಗಳೂ ಈ ಬದಲಾವಣೆಯನ್ನು ಗಮನಿಸಿದ್ದಾರೆ. ಲೋಕಾಯುಕ್ತರು ಬಂದು ಹೋದ ಬಳಿಕ ಹೆಚ್ಚು ತರಗತಿಗಳು  ನಡೆಯುತ್ತಿವೆ. ಕಾಲೇಜಿನ ಶೈಕ್ಷಣಿಕ ವಾತಾವರಣ ಸುಧಾರಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಲೋಕಾಯುಕ್ತ ಡಾ.ವೈ.ಭಾಸ್ಕರರಾವ್ ಅವರು ಜು 29ರಂದು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಹುತೇಕ ಉಪನ್ಯಾಸಕರು ಹಾಜರಾತಿ ರಿಜಿಸ್ಟರ್‌ನಲ್ಲಿ ಸಹಿ ಮಾಡಿರಲಿಲ್ಲ. ಅವರು ಭೇಟಿ ನೀಡಿದ ತರಗತಿಗಳಲ್ಲಿ ವಿದ್ಯಾರ್ಥಿಗಳು ಬೆರಳೆಣಿಕೆಯಷ್ಟಿದ್ದರು. ವಿದ್ಯಾರ್ಥಿಗಳ ಹಾಜರಾತಿ ರಿಜಿಸ್ಟರ್‌ನಲ್ಲಿ ವಿದ್ಯಾರ್ಥಿಗಳ ಹಾಜರಾತಿ ನಮೂದಿಸದೆ ಪಾಠಮಾಡುತ್ತಿದ್ದುದೂ ಬೆಳಕಿಗೆ ಬಂದಿತ್ತು. ಬೋರ್ಡೆ ಇಲ್ಲದ ತರಗತಿಯಲ್ಲಿ ಪಾಠ ಮಾಡುತ್ತಿದ್ದ ದೃಶ್ಯವನ್ನು ಕಂಡು ಲೋಕಾಯುಕ್ತರು ವಿಷಾದ ವ್ಯಕ್ತಪಡಿಸಿದ್ದರು.ನಂತರ ಬೆಂಗಳೂರಿಗೆ ತೆರಳಿದ ಅವರು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಾಲೇಜಿನ ಕಾರ್ಯವೈಖರಿಯ ಕುರಿತು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ, ಜು 29ರಂದು ಹಾಜರಾತಿ ರಿಜಿಸ್ಟರ್‌ನಲ್ಲಿ ಸಹಿ ಮಾಡದ ಎಲ್ಲ ಅಧ್ಯಾಪಕರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.ಲೋಕಾಯುಕ್ತರ ಭೇಟಿಯ ಮಾರನೇ ದಿನ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಸೀಮಾ ಅವರೂ ಭೇಟಿ ನೀಡಿ ವೇಳಾಪಟ್ಟಿ ಬದಲಿಸುವಂತೆ ನೀಡಿದ ಸೂಚನೆ ಮೇರೆಗೆ ಕಾಳೇಜಿನ ವೇಳಾಪಟ್ಟಿ ಬದಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ಎಲ್ಲ ಅಧ್ಯಾಪಕರೂ ಕಾಲೇಜಿನಲ್ಲಿ ಇರುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ.ಏನಾಗಿತ್ತು?: ವಿಪರ್ಯಾಸವೆಂದರೆ ಕಳೆದ ವರ್ಷವೇ 10ರಿಂದ5ರವರೆಗಿನ ವೇಳಾಪಟ್ಟಿ ಕಾಲೇಜಿನಲ್ಲಿ ಜಾರಿ ಇತ್ತು. ಆದರೆ, ಬಸ್ ವ್ಯವಸ್ಥೆ ಇಲ್ಲದಿರುವುದು, ಊಟಕ್ಕೆ ಕಷ್ಟವಾಗುವುದು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮೇರೆಗೆ ವೇಳಾಪಟ್ಟಿಯನ್ನು 9ರಿಂದ2ವರೆಗೆ ಬದಲಿಸಲಾಗಿತ್ತು ಎನ್ನುತ್ತಾರೆ ಪ್ರಾಂಶುಪಾಲ ವೆಂಕಟೇಸು.ಬೆಳಿಗ್ಗೆ  9 ಗಂಟೆಗೆ ಪರಿಸರ ಅಧ್ಯಯನ, ಸಂವಿಧಾನ ಅಧ್ಯಯನದಂಥ ಫಲಿತಾಂಶದಲ್ಲಿ ಲೆಕ್ಕಕ್ಕೆ ಇಲ್ಲದ ವಿಷಯಗಳ ತರಗತಿಗಳನ್ನು ನಡೆಸಲಾಗುತ್ತಿತ್ತು. ಅಂಕಲೆಕ್ಕಕ್ಕೆ ಇಲ್ಲದ ವಿಷಯಗಳಾದ್ದರಿಂದ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರಲಿಲ್ಲ. ಬೇರೆ ವಿಷಯಗಳ ತರಗಳಿಗಳಿಗೂ ಬೆಳಿಗ್ಗೆ 9ಕ್ಕೆ ಬಹುತೇಕ ವಿದ್ಯಾರ್ಥಿಗಳು ಬಾರದಿರುವುದು ಸಾಮಾನ್ಯ ಸಂಗತಿ ಎನ್ನುತ್ತಾರೆ ಇಲ್ಲಿನ ಉಪನ್ಯಾಸಕರು.

ಲೋಕಾಯುಕ್ತರು ಭೇಟಿ ನೀಡಿದ ದಿನ 9 ಗಂಟೆಯ ತರಗತಿಗಳು ಹಲವು ನಡೆಯುತ್ತಿದ್ದವು. ಅವರು ಕೆಲವೇ ತರಗತಿಗಳಿಗೆ ಮಾತ್ರ ಭೇಟಿ ನೀಡಿದ್ದರಿಂದ ಈ ವಿಷಯ ಅವರ ಗಮನಕ್ಕೆ ಬರಲಿಲ್ಲ. ಈ ವಿಷಯವನ್ನು ನೋಟಿಸಿಗೆ ನೀಡುವ ಉತ್ತರದಲ್ಲಿ ತಿಳಿಸುತ್ತೇವೆ ಎನ್ನುತ್ತಾರೆ ಉಪನ್ಯಾಸಕರು.ಧಾವಂತ: ಬೆಂಗಳೂರಿನಿಂದ ನಿತ್ಯ ಕೋಲಾರಕ್ಕೆ ಪ್ರಯಾಣಿಸುವ ಧಾವಂತದ ಉಪನ್ಯಾಸಕರೂ ಈ ಕಾಲೇಜಿನಲ್ಲಿದ್ದಾರೆ. ಅವರು ಮಧ್ಯಾಹ್ನದ ವೇಳೆಗೆ ಕಾಲೇಜನ್ನು ತೊರೆದು ಬೆಂಗಳೂರು ಸೇರುವ ತವಕದಲ್ಲಿರುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ರೂಪಿಸುವ ಕೆಲಸವೂ ನಡೆಯುತ್ತಿದೆ. ವಿಪರ್ಯಾಸವೆಂದರೆ, ತರಗತಿಗಳಲ್ಲಿ ತಪ್ಪದೆ ಪಾಠ ನಡೆಸುವ ವಿಷಯದಲ್ಲಿ ಈ `ಪ್ರಯಾಣಿಕ ಉಪನ್ಯಾಸಕರ' ಬದ್ಧತೆಯನ್ನು ಇದೇ ಕಾಲೇಜಿನ, ಸ್ಥಳೀಯ ಉಪನ್ಯಾಸಕರು ಶ್ಲಾಘಿಸುತ್ತಾರೆ. ಬದ್ಧತೆ ಇಲ್ಲದ ಇದೇ ಊರಿನ ಹಲವು ಉಪನ್ಯಾಸಕರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.

Post Comments (+)