ಕಾಲೇಜಿನಲ್ಲಿ ಜಾನಪದ ಸಂಭ್ರಮ

7

ಕಾಲೇಜಿನಲ್ಲಿ ಜಾನಪದ ಸಂಭ್ರಮ

Published:
Updated:

ಸಿಂದಗಿ: ಇಲ್ಲಿಯ ಪ್ರತಿಷ್ಠಿತ ಪದ್ಮರಾಜ ವಿದ್ಯಾವರ್ದಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಕಾಲೇಜಿನಲ್ಲಿ ಅಂದು ಹಬ್ಬದ ಸಂಭ್ರಮ. ವಿದ್ಯಾರ್ಥಿಗಳಲ್ಲಿ ಎಲ್ಲಿಲ್ಲದ ಚೈತನ್ಯ, ಹುರುಪು-ಹುಮ್ಮಸ್ಸು ಕಂಡು ಬರುತ್ತಿತ್ತು. ಜಿನ್ಸ್, ಟೀ ಶರ್ಟ್ ತೊಡುವ ಕಾಲೇಜ್ ಪೋರರು ದೋತಿ, ನೆಹರು ಶರ್ಟ್ ಉಟ್ಟಿದ್ದರೆ, ಮಿನಿ ಸ್ಕರ್ಟ್, ಚೂಡಿದಾರ ತೊಡುವ ಪೋರಿಯರು ಇಲಕಲ್ ಸೀರೆ, ಗುಳೇದಗುಡ್ಡ ಕುಪ್ಪಸ ತೊಟ್ಟಿದ್ದರು. ಜಾನಪದ ಸಿರಿ ಅಲ್ಲಿ ತುಂಬಿಕೊಂಡಿತ್ತು.ಅದುವೇ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಜಾನಪದ ಸಂಭ್ರಮ~ ಸಾಂಸ್ಕೃತಿಕ ಉತ್ಸವದ ಅಪರೂಪದ ದೃಶ್ಯ.ದೇಸಿಯ ಜಾನಪದ ಸೊಗಡು ತುಂಬಿಕೊಂಡಿದ್ದ ಈ ವಿದ್ಯಾರ್ಥಿಗಳ ಸಂಭ್ರಮ ಕಾಣಲು ಪಾಲಕರ ಸಮಾವೇಶವೂ ಇತ್ತು. ಪಾಲಕರು ತಮ್ಮ ಮಕ್ಕಳ ಕಲೆಯನ್ನು ಕಂಡು ಹಿರಿ, ಹಿರಿ ಹಿಗ್ಗಿದರು.ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜ್‌ನ ಪ್ರಾಧ್ಯಾಪಕರು ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ನೃತ್ಯ, ರೂಪಕ, ನಾಟಕಗಳಲ್ಲಿ ಕಾಲೇಜಿನ ಪೋರ-ಪೋರಿಯರಲ್ಲಿ ಸಹಜ ಅಭಿನಯ ಇತ್ತು.ಆರಂಭದಲ್ಲಿ `ಓಂಕಾರ ಅಭಿದಪ ಪ್ರಿಯಾ... ಎಂಬ ಶಾಸ್ತ್ರೀಯ ಗೀತೆಗೆ ಅಶ್ವಿನಿ ಅವಟಿ ಸುಂದರವಾಗಿ ಭರತ ನಾಟ್ಯ ಮಾಡಿದರು. ಲಂಬಾಣಿ ಮಹಿಳೆ ವೇಷದಲ್ಲಿ ಲಕ್ಷ್ಮಿ ಚವ್ಹಾಣ ನೃತ್ಯ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಮರೆಯಾಗುತ್ತಿರುವ ಜಾನಪದ ಪರಿಕರ ಬಿಸುಕಲ್ಲಿನಲ್ಲಿ ಜೋಳ ಬೀಸುತ್ತ `ಅಣ್ಣನ ಹೊಟ್ಟೀಲಿ ಗಂಡ, ನನ್ನ ಹೊಟ್ಟೀಲಿ ಹೆಣ್ಣ, ಮಾಡುಣು ಬಾ ಮದುವೀಯ...~ ಎಂಬ ಗೀತೆಯನ್ನು ಮೀನಾಕ್ಷಿ ಕೆಲೋಜಿ, ಜಗದೇವಿ ಪಡಶೆಟ್ಟಿ ಹಾಡಿದರು.ಜೋ.. ಜೋ.. ಜ್ಯೋತಿಯ ಕಂದಾ ಜೋ.. ಜೋ ಕಾಯಕದಿ ಕೈಲಾಸಿ ಕಂಡಾಳ ತಾಯಿ... ಎಂಬ ಜೋಗುಳ ಪದವನ್ನು ಜಗದೇವಿ, ರಿಯಾನಾಬೇಗಂ ಮುಲ್ಲಾ ಹಾಡಿದರು.ಚೌಡಕಿ ಮೇಳ ವೇಷದಲ್ಲಿ ಮಲ್ಲಮ್ಮ ಪೂಜಾರಿ ಹಾಗೂ ಅರ್ಚನಾ ಹವಾಲ್ದಾರ ಕಾಣಿಸಿಕೊಂಡರು.ಪವಿತ್ರಾ ತಾಳಿಕೋಟಿ ಅವರ `ಸೀಮಂತ ಕಾರ್ಯ~ವನ್ನು ಥೇಟ್ ಹಳ್ಳಿಗಳಲ್ಲಿ ಮಾಡುವ ಹಾಗೆಯೇ ಮಾಡಿದರು. `ಒಂದಂಟು ತಿಂಗಳಿಗೆ ಒಂದೇನ ಬಯಸ್ಯಾಳ ಅಂಗೈಯಲುಪ್ಪಾ ಎಳೆಹುಣಸಿ, ಎರಡಂಬು ತಿಂಗಳಿಗೆ ಎರಡೇನ ಬಯಸ್ಯಾಳ ಎರಡಲಿಗೊಂಡ ಎಳೆಮಾವ~ ಎಂದು ಸುಮಂಗಲೆಯರು ಕುಬಸದ ಹಾಡು ಹೇಳುತ್ತಿದ್ದರು.

ನಾಗಪ್ಪ ಹಡಪದ ಸಂಗಡಿಗರು `ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು~ ಗೀತೆಗೆ ಸುಂದರವಾಗಿ ಸಾಮೂಹ ನೃತ್ಯ ಮಾಡಿದರು.`ಆ ನಾಡದ ಕೊರಿವ್ಯಲ್ಲ ಈ ನಾಡದ ಕೊರಿವ್ಯಲ್ಲ, ದೇವಲೋಕದ ಕೊರಿವಿದ್ದೀನಿ ಚಲೋ ಆಗತೈತಿ, ಚಲೋ ಆಗತೈತಿ~ ಎಂದು ಕವಿತಾ ಏವೂರ ಕೊರವಂಜಿ ಪ್ರಾಧ್ಯಾಪಕರಿಗೂ ಕಣಿ ಹೇಳಿದಳು.ಒನಕೆ ಓಬವ್ವ ರೂಪಕದಲ್ಲಿ ಮಾಲಾಶ್ರೀ ಸುಂಟೇದ ಸಭಿಕರ ಗಮನ ಸೆಳೆದಳು. ಮೀನಾಕ್ಷಿ ಕುಮಸಗಿ, ಯಲ್ಲಾಲಿಂಗ ಪೂಜಾರಿ ಇವರಿಬ್ಬರೂ ಗಂಡ-ಹೆಂಡಿರ ಜಗಳ ಗಂಧ ತೀಡಿದಾಂಗ ಎಂಬ ರೀತಿಯಲ್ಲಿ ಜಗಳ ಮಾಡಿದರು.ದುರಗ-ಮುರಗಿ ರೂಪಕದಲ್ಲಿ ಶಿವೂ ಕಲಕೇರಿ ಬಾರಕೋಲದಿಂದ ಹೊಡೆದುಕೊಳ್ಳುತ್ತಿದ್ದರೆ ಆತನ ಹೆಂಡತಿ ಪಾತ್ರದಾರಿ ಮಾಲಾಶ್ರೀ ಜೋಳದಂಥ ಆಹಾರಧಾನ್ಯ ಸಂಗ್ರಹಿಸುತ್ತಿದ್ದಳು. ಕಸ್ತೂರಿ ಪೂಜಾರಿ ಕೃಷ್ಣ ವೇಷಧಾರಿಯಾಗಿ ಲೀಲಾ ನೃತ್ಯ ಮಾಡಿದರು. ಕನ್ನಡ ಪ್ರಾಧ್ಯಾಪಕ, ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ನಾಗರಾಜ ಮುರಗೋಡ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry