ಶುಕ್ರವಾರ, ಮೇ 14, 2021
35 °C

ಕಾಲೇಜಿನಲ್ಲಿ ಭೂತ ಚೇಷ್ಟೆ....!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜಿನಲ್ಲಿ ಭೂತ ಚೇಷ್ಟೆ....!

ಈಗಂತೂ ಎಲ್ಲ  ಕಾಲೇಜುಗಳಲ್ಲಿ`ಪ್ರೆಶರ್ಸ್‌ ಡೇ~ ಸಂಭ್ರಮ. ಕಿರಿಯರಿಗೆ ಸ್ವಾಗತ ಕೋರಲು  ಹಿರಿಯ ವಿದ್ಯಾರ್ಥಿಗಳು ಅನುಸರಿಸುತ್ತಿರುವ ದಾರಿಗಳೂ ವಿಭಿನ್ನ.ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೆ ಹೋಗಿ, ಭೂತ ಚೇಷ್ಟೆಯ ಮೂಲಕ ಕಿರಿಯರನ್ನು ಭಯ ಭೀತಗೊಳಿಸಿ ಸ್ವಾಗತಿಸಿದರು.ಯುವ ಮನಸ್ಸುಗಳೇ ಹಾಗೆ. ಮನಸ್ಸೋ ಎಲ್ಲ್ಲ್ಲೆಲೋ ಓಡುತ್ತಿರುತ್ತದೆ, ತಿರುಗುತ್ತಿರುತ್ತದೆ. ಏನೇನೋ ಮಾಡಬೇಕೆಂಬ ಬಯಕೆ ಮನದೊಳಗೆ ಮೂಡುತ್ತಿರುತ್ತದೆ.

 

ಜತೆಗೆ ಹುಚ್ಚೆದ್ದು ಕುಣಿಯಬೇಕೆಂಬ ಬಯಕೆಯೂ ತುಡಿಯುತ್ತಿರುತ್ತದೆ. ಅದಕ್ಕೇ ಕ್ಯಾಂಪಸ್‌ನೊಳಗೆ ಈ ಯುವಮನಸ್ಸುಗಳು ಅದೇನೇನೋ ಕ್ರಿಯೇಟಿವಿಟಿಯತ್ತ ಸಾಗುತ್ತವೆ.ಫ್ರೆಶರ್ಸ್‌ ಡೇ, ವೆಲ್‌ಕಂ ಡೇ, ಕಾಲೇಜು  ಫೆಸ್ಟ್ ಬಂದರೆ ಸಾಕು, ಪಾಠಗಳನ್ನೆಲ್ಲ ಬದಿಗೊತ್ತಿ ನಲಿದು ಕುಣಿದಾಡಲು ಮಾರ್ಗ ಕಂಡು ಹುಡುಕುತ್ತವೆ. ಅಂತೆಯೇ ಈ ಬಾರಿ ನಗರದ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ರೀಸರ್ಚ್‌ನ ಸೀನಿಯರ್ ವಿದ್ಯಾರ್ಥಿಗಳು ಏನೋ ನಿರ್ಧರಿಸಿದಂತಿತ್ತು.

 

ಹೊಸದಾಗಿ ಕ್ಯಾಂಪಸ್ ಪ್ರವೇಶಿಸುವ ಜೂನಿಯರ್ ವಿದ್ಯಾರ್ಥಿಗಳಿಗೆ ಅತ್ಯಪೂರ್ವ ಸ್ವಾಗತ ಕೋರಲು ಅವರು ಮೊದಲೇ ಯೋಚಿಸಿದ್ದರು. ಅಂತೂ ಆ ದಿನ ಬಂತು `ಫ್ರೆಶರ್ಸ್‌  ಡೇ~. ಕಾಯ್ದುಕೊಂಡವರಂತೆ ಎಲ್ಲಾ ಸೀನಿಯರ್‌ಗಳು ಅಂದು ಸಜ್ಜಾದರು. ಅತ್ಯಪೂರ್ವ ರೀತಿಯಲ್ಲಿ ಸ್ವಾಗತ ಕೋರಿಯೇ ಬಿಟ್ಟರು.ಅಂದು ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ಬೊಬ್ಬೆ ಹೊಡೆದು ಕೂಗುತ್ತಿರುವ ಶಬ್ದ ಕ್ಯಾಂಪಸ್‌ನ ಹೊರಗೂ ಕೇಳಿಸುತ್ತಿತ್ತು. ಸೀನಿಯರ್ ವಿದ್ಯಾರ್ಥಿಗಳ ಹುರುಪು, ಉತ್ಸಾಹ ಜೂನಿಯರ್‌ಗಳಿಗೂ ಬಂದಿತ್ತು.ಅದಕ್ಕೇ ಹಿರಿಯ ವಿದ್ಯಾರ್ಥಿಗಳು ಹೇಳಿದಂತೆ ಎಲ್ಲರೂ ಚಿತ್ರ ವಿಚಿತ್ರ ಶೈಲಿಯಲ್ಲಿ ಮಾಟಗಾರರ, ಭೂತ ಪಿಶಾಚಿಯ ವೇಷ ಧರಿಸಿ ಬಂದರು. ಕ್ಯಾಂಪಸ್ ತುಂಬಾ ಮಾಂತ್ರಿಕರು, ಮಾಟಗಾರರು, ಮಾಟಗಾರ್ತಿಯರು, ಭೂತಗಳೇ ತುಂಬಿದ್ದವು. |ಕೇವಲ ಭೂತ ಪಿಶಾಚಿಗಳ ಕಾರ್ಯಕ್ರಮವಾದರೆ ಎಲ್ಲರೂ ಭೀತಿಗೊಳಗಾಗಬಹುದು ಎಂಬುದರಿಂದಲೋ ಏನೋ ನೃತ್ಯ ಕಾರ್ಯಕ್ರಮ, ಸಮೂಹ ಗಾಯನ ಮುಂತಾದ ಸಾಂಸಕ್ಕೃತಿಕ ಕಾರ್ಯಕ್ರಮಗಳೂ ಅಲ್ಲಿದ್ದವು.`ಫ್ರೆಶರ್ಸ್‌  ಡೇ~ ಹಿನ್ನೆಲೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಭಾಂಗಣವನ್ನು ರಂಜನೀಯವಾಗಿ ಅಲಂಕರಿಸಲಾಗಿತ್ತು. ಒಂದು ದಿನದ ಮಟ್ಟಿಗಂತೂ ಇಡೀ ವಾತಾವರಣವೇ ಸಂಪೂರ್ಣವಾಗಿ ವಿಚಿತ್ರ ಮಯವಾಗಿತ್ತು.

ಸಭಾಂಗಣದ ಪ್ರವೇಶದ್ವಾರವನ್ನು `ಸತ್ತವರ ಗೇಟ್~ ಎಂದು ನಾಮಕರಣ ಮಾಡಲಾಗಿತ್ತಲ್ಲದೆ ಅದರೊಳಗಿಂದ ಪ್ರವೇಶಿಸುವ ಎಲ್ಲಾ ಜೂನಿಯರ್‌ಗಳನ್ನು ಸೀನಿಯರ್ ವಿದ್ಯಾರ್ಥಿಗಳು ಸ್ವಾಗತಿಸಿದರು.ಭೂತದ ವೇಷ, ಅಲ್ಲಿ ಹರಡಿದ್ದ ಸುವಾಸನೆ ಎಲ್ಲವೂ ನರಕದ ಕಲ್ಪನೆಯನ್ನು ಮೂಡಿಸಿದ್ದವು. ಎಲ್ಲರ ಉಡುಪುಗಳಲ್ಲೂ ಕ್ರಿಯೇಟಿವಿಟಿ ಕಂಡುಬಂದಿತ್ತು. ಸೀನಿಯರ್ ವಿದ್ಯಾರ್ಥಿಗಳು ವೇದಿಕೆ ಮೇಲೇರಿ ನಿಜವಾದ ಭೂತದ ಸ್ವರದಲ್ಲಿ ಅರಚಿಕೊಂಡಾಗಲೇ ಅಸಲಿ ಕಾರ್ಯಕ್ರಮ ಆರಂಭವಾಯಿತಲ್ಲದೆ ಇಡೀ ಸಭಾಂಗಣ ಭಯದಲ್ಲಿ ಮುಳುಗಿ ಹೋಯಿತು.ಇಲ್ಲಿಗೇ ಮುಗಿಯಲಿಲ್ಲ. ಸಮಾರಂಭದಲ್ಲಿ ಹಾಜರಿದ್ದ ಅಧ್ಯಾಪಕರುಗಳೂ ವಿದ್ಯಾರ್ಥಿಗಳ ಸಂತಸದಲ್ಲಿ ಭಾಗಿಯಾದರು. ಕಾಲೇಜಿನ ಡೀನ್ ವೇದಿಕೆ ಮೇಲೇರಿ ಹೊಸ ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತವಚನಗಳನ್ನು ನೀಡಿದರು.ಬಳಿಕದ ಕಾರ್ಯಕ್ರಮಗಳೆಲ್ಲವೂ ವಿದ್ಯಾರ್ಥಿಗಳಿಗಾಗಿಯೇ ಮೀಸಲಾಗಿತ್ತು.ಜೂನಿಯರ್ ವಿದ್ಯಾರ್ಥಿಗಳು ವೇದಿಕೆ ಮೇಲೇರಿ ಕ್ರಿಯಾತ್ಮಕವಾದ ರೀತಿಯಲ್ಲಿ ತಮ್ಮನ್ನು ಪರಿಚಯ ಮಾಡಿಕೊಳ್ಳಬೇಕಿತ್ತು.ಅವರು ತಾವು ಧರಿಸಿದ ಉಡುಪಿನ ಕುರಿತು ವಿವರಣೆ ನೀಡಬೇಕಿತ್ತಲ್ಲದೆ ಈ ವಿಚಿತ್ರ ನರಕದೊಳಗೆ ಪ್ರವೇಶಿಸಲು ಯಾವ ಪಾಪವನ್ನು ಮಾಡಿದ್ದರೆನ್ನುವುದನ್ನು ವಿವರಿಸಬೇಕಿತ್ತು.ಹೊಸ ವಿದ್ಯಾರ್ಥಿಗಳಿಗೇನು ಹಿಂಜರಿಕೆಯೇ? ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಹೊಸ ಹೊಸ ಕ್ರಿಯೇಟಿವ್ ಉತ್ತರಗಳೊಂದಿಗೆ ವೇದಿಕೆಯಲ್ಲಿ ಮಿಂಚಿದಾಗ ಅಲ್ಲೊಂದು ದೊಡ್ಡ ಚರ್ಚೆಯೇ ನಡೆಯಿತು.ಬಳಿಕ ಸಂಗೀತ ಕುರ್ಚಿ ಕಾರ್ಯಕ್ರಮ ನಡೆಯಿತು. ಅದಾದ ನಂತರ ವಿದ್ಯಾರ್ಥಿಗಳ ಆಸಕ್ತಿಯ `ಮಾಟಗಾರರ ನಿಧಿ ಶೋಧನೆ~ ಕಾರ್ಯಕ್ರಮ ನಡೆಯಿತು. ಎಲ್ಲದರಲ್ಲಿಯೂ ವಿದ್ಯಾರ್ಥಿಗಳ ಕ್ರಿಯೇಟಿವಿಟಿ ಇತ್ತೆನ್ನಿ. ಫ್ಯಾಷನ್ ಶೋದಲ್ಲಿಯೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಲ್ಲಿ ಒಬ್ಬರನ್ನು ಮಿ. ಡೆವಿಲ್ ಮತ್ತು ಮಿಸ್ ಡೆವಿಲ್ ಆಗಿ ಆರಿಸಲಾಯಿತು. ಈ ಭೂತಗಳ ಕಿರೀಟವೂ ಕೊಂಬುಗಳೊಂದಿಗೆ ಅಸಲಿ ಭೂತವನ್ನು ನಾಚಿಸುವಂತಿತ್ತು. ನೃತ್ಯದೊಂದಿಗೆ ಎಲ್ಲಾ ಕಾರ್ಯಕ್ರಮಗಳು ಕೊನೆಗೊಂಡವು.ಯುವಜನಾಂಗ ಎಲ್ಲದರ್ಲ್ಲಲೂ ಮುಂದು ಎನ್ನುವುದು ಸರಿಯೇ. ಆದರೆ ಕೆಲವೊಮ್ಮೆ ಈ ಯುವಜನಾಂಗ ಎಲ್ಲೆ ಮೀರಿ ಹೋಗುತ್ತಿದೆ ಎಂದನ್ನಿಸದೇ ಇರದು. ಸಂತೋಷ, ಮಜಾದ ಹೆಸರಿನಲ್ಲಿ ಕ್ಯಾಂಪಸ್‌ನಲ್ಲಿ ಕಪಿ ಚೇಷ್ಟೆಯ ಜತೆಗೆ ಇದೀಗ ಭೂತ ಚೇಷ್ಟೆಯೂ ನುಸುಳಿದೆಯೇ ಎಂಬ ಪ್ರಶ್ನೆಯೂ ಇದರೊಂದಿಗೆ ಮೂಡದೇ ಇರದು.           

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.