ಬುಧವಾರ, ಏಪ್ರಿಲ್ 14, 2021
24 °C

ಕಾಲೇಜುಗಳಿಗೆ ಸೌಲಭ್ಯಕ್ಕೆ ರೂ 300 ಕೋಟಿ

ಪ್ರಜಾವಾಣಿ ವಾರ್ತೆ/ಎಂ. ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ರೂ 300 ಕೋಟಿ ಯೋಜನೆ ರೂಪಿಸಿದೆ.ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ತರಗತಿ ಕೊಠಡಿ, ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಹಾಗೂ ಪ್ರಯೋಗಾಲಯಗಳು ಅಗತ್ಯಕ್ಕೆ ತಕ್ಕಂತೆ ಇಲ್ಲ. ರಾಜ್ಯದಲ್ಲಿರುವ 356 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೇವಲ 186 ಕಾಲೇಜುಗಳು ಸ್ವಂತ ಕಟ್ಟಡ ಹೊಂದಿವೆ.110 ಕಾಲೇಜುಗಳ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಇತರ ಕಾಲೇಜುಗಳು, ಪ್ರೌಢ ಮತ್ತು ಹಿರಿಯ ಪ್ರೌಢಶಾಲೆಗಳ ಕಟ್ಟಡಗಳನ್ನು ಅವಲಂಬಿಸಿವೆ. ಕೆಲವೆಡೆ, `ಪಾಳಿ ಪದ್ಧತಿ~ಯಲ್ಲಿ (ಬೆಳಿಗ್ಗೆ ಕಾಲೇಜು ನಂತರ ಪ್ರೌಢಶಾಲೆಗಳಿಗೆ ತರಗತಿ ನಡೆಸುವುದು) ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ.ಪ್ರಸ್ತುತ ಸ್ಥಿತಿ: ಒಂದೇ ತರಗತಿ ಕೊಠಡಿಗಳನ್ನು ಹಿರಿಯ ಪ್ರೌಢಶಾಲೆ ಹಾಗೂ ಪ್ರಥಮದರ್ಜೆ ಕಾಲೇಜುಗಳಿಗೆ ಬಳಸುವುದರಿಂದ ನಿಗದಿತ ಕನಿಷ್ಠ ಬೋಧನಾ ಅವಧಿಗಳನ್ನು ಮುಗಿಸುವುದು ಸಹ ಕಷ್ಟವಾಗಿದೆ. ಹಲವೆಡೆ, ಕಾಲೇಜಿನ ಆವರಣದಲ್ಲಿರುವ ಮರದ ಕೆಳಗೆ, ರಂಗಮಂದಿರದಲ್ಲಿ `ಗುರುಕುಲ ಮಾದರಿ~ಯಲ್ಲಿ ಪಾಠ-ಪ್ರವಚನ ನಡೆಸುತ್ತಿರುವುದನ್ನು ಕಾಣಬಹುದು. ಇದು, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ, ಪ್ರತಿ ವರ್ಷ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುತ್ತಿದೆ. ಪ್ರವೇಶ ಬೇಡಿಕೆಯ್ಲ್ಲಲೂ ಏರಿಕೆ ಕಂಡುಬಂದಿದೆ. ಹಿಂದಿಗಿಂತ ಈಗ ವಿವಿಧ ಹೆಚ್ಚುವರಿ ವಿಭಾಗಗಳನ್ನು ತೆರೆಯಲಾಗಿದೆ. ಈ ಬೇಡಿಕೆಗೆ ತಕ್ಕಂತೆ, ಸೌಲಭ್ಯ ಕಲ್ಪಿಸಲು ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸರ್ಕಾರ ಕಳೆದ ತಿಂಗಳು ಅನುಮೋದನೆ ನೀಡಿದೆ.ರೂ 300 ಕೋಟಿ ಅಂದಾಜು ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೌಚಾಲಯ, ಪ್ರಯೋಗಾಲಯ, ಹೆಚ್ಚುವರಿ ಕೊಠಡಿ ಹಾಗೂ ಕಟ್ಟಡ ಕಾಮಗಾರಿಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ, ಕರ್ನಾಟಕ ಗೃಹ ಮಂಡಳಿ ಹಾಗೂ ~ರೈಟ್~ ಸಂಸ್ಥೆಗೆ ಕಟ್ಟಡ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ.ಎಲ್ಲೆಲ್ಲಿ ಎಷ್ಟೆಷ್ಟು?: `ರೈಟ್ಸ್~ ಸಂಸ್ಥೆ ಮೂಲಕ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಸಖರಾಯಪಟ್ಟಣದಲ್ಲಿ ಹೊಸಕಟ್ಟಡ. ಚಿಕ್ಕಮಗಳೂರಿನ ಐಡಿಎಸ್ ಸರ್ಕಾರಿ ಕಾಲೇಜು, ಬೀರೂರು, ಮೂಡಿಗೆರೆ, ಅಜ್ಜಂಪುರ, ಕಡೂರಿನಲ್ಲಿ ಹೆಚ್ಚುವರಿ ಕೊಠಡಿ. ಇದಕ್ಕಾಗಿ ಒಟ್ಟು ರೂ 12.75 ಕೋಟಿ ಅನುದಾನ.ದಕ್ಷಿಣ ಕನ್ನಡ ಜಿಲ್ಲೆಯ ಸಿದ್ದಕಟ್ಟೆ, ಮಂಗಳೂರಿನ ರಥಬೀದಿ, ಪುಂಜಾಲಕಟ್ಟೆಯಲ್ಲಿ ಹೊಸ ಕಟ್ಟಡ. ಬಂಟ್ವಾಳ, ಪುತ್ತೂರು, ಸುಳ್ಯ, ಕಾವೂರು, ವಿಟ್ಲದಲ್ಲಿ ಹೆಚ್ಚುವರಿ ಕೊಠಡಿ. ಅನುದಾನ ರೂ 11 ಕೋಟಿ.ಧಾರವಾಡ ಜಿಲ್ಲೆಯ ಹುಬ್ಬಳಿಯ ರಂಜಾನಗರ, ನವಲಗುಂದದಲ್ಲಿ ಹೊಸ ಕಟ್ಟಡ. ಧಾರವಾಡ, ಕಲಘಟಗಿಯಲ್ಲಿ ಹೆಚ್ಚುವರಿ ಕಟ್ಟಡ. ಅನುದಾನ ರೂ 4.25 ಕೋಟಿ. ಬೆಳಗಾವಿ ಜಿಲ್ಲೆಯ ಬೆಳಗಾವಿ, ಯರಗಟ್ಟಿ ಕಾಲೇಜಿಗೆ ಹೊಸ ಕಟ್ಟಡ. ಐನಾಪುರ, ಮೂಡಲಗಿ, ಪಾಶ್ಚಾಪುರ, ಹುಕ್ಕೇರಿ, ಖಾನಾಪುರ, ರಾಮದುರ್ಗ, ಅಥಣಿ, ಕೊಕಟನೂರು, ಸವದತ್ತಿ, ಬೈಲಹೊಂಗಲ, ಚಿಕ್ಕೋಡಿ, ಸದಲಗಾ, ನೇಸರ್ಗಿಯಲ್ಲಿ ಹೆಚ್ಚುವರಿ ಕೊಠಡಿ. ಅನುದಾನ ರೂ 12.75 ಕೋಟಿ.ವಿಜಾಪುರ ಜಿಲ್ಲೆಯ ವಿಜಾಪುರ, ಸಿಂಧಗಿಯಲ್ಲಿ ಹೆಚ್ಚುವರಿ ಕೊಠಡಿ. ಅನುದಾನ ರೂ 2 ಕೋಟಿ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಮಂಕಿ, ಸಿದ್ದಾಪುರದಲ್ಲಿ ಹೊಸ ಕಟ್ಟಡ. ಮುಂಡಗೋಡ, ಯಲ್ಲಾಪುರ, ಅಂಕೋಲದಲ್ಲಿ ಹೆಚ್ಚುವರಿ ಕೊಠಡಿ. ಅನುದಾನ ರೂ 8.25 ಕೋಟಿ.ಗುಲ್ಬರ್ಗಾ ಜಿಲ್ಲೆಯ ಗುಲ್ಬರ್ಗಾದ ಜೇವರ್ಗಿ ಕಾಲೊನಿ, ಆಳಂದದಲ್ಲಿ ಹೊಸ ಕಟ್ಟಡ. ಗುಲ್ಬರ್ಗಾ, ಕಾಳಗಿಯಲ್ಲಿ   ಹೆಚ್ಚುವರಿ ಕೊಠಡಿ. ಅನುದಾನ ರೂ 6.35 ಕೋಟಿ. ರಾಯಚೂರು ಜಿಲ್ಲೆಯ ಸಿಂಧನೂರು, ರಾಯಚೂರು, ಮಸ್ಕಿ, ಮುದಗಲ್, ಲಿಂಗಸಗೂರು- ಹೆಚ್ಚುವರಿ ಕೊಠಡಿ. ರೂ 4.75 ಕೋಟಿ.ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಬಳ್ಳಾರಿ, ಸಂಡೂರು, ಕೂಡ್ಲಿಗಿಯಲ್ಲಿ ಹೆಚ್ಚುವರಿ ಕೊಠಡಿ. ಅನುದಾನ ರೂ 3.25 ಕೋಟಿ. ಬೀದರ್ ಜಿಲ್ಲೆಯ ಬಸವಕಲ್ಯಾಣ, ಔರಾದ್, ಹುಮನಾಬಾದ್, ಭಾಲ್ಕಿಯಲ್ಲಿ ಹೊಸ ಕಟ್ಟಡ. ಹಲಸೂರು, ಮನಳ್ಳಿಯಲ್ಲಿ ಹೆಚ್ಚುವರಿ ಕೊಠಡಿ. ರೂ 9.20 ಕೋಟಿ.ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ 27.30 ಕೋಟಿ ನೀಡಲಾಗಿದೆ. ಕರ್ನಾಟಕ ಗೃಹಮಂಡಳಿ ಮೂಲಕ ಕಟ್ಟಡ ನಿರ್ಮಾಣಕ್ಕೆ ರೂ 115.65 ಕೋಟಿ.,ಲೋಕೋಪಯೋಗಿ ಇಲಾಖೆಗೆ ರೂ 201.10 ಕೋಟಿ (ಕೊಠಡಿ) ಹಾಗೂ ರೂ 21 ಕೋಟಿ (ಶೌಚಾಲಯ ನಿರ್ಮಾಣಕ್ಕೆ) ನೀಡಲು ಉದ್ದೇಶಿಸಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.