ಶನಿವಾರ, ಆಗಸ್ಟ್ 17, 2019
27 °C

ಕಾಲೇಜುವಾರು ಆದ್ಯತೆಗೆ ಇಂದು ಕೊನೆ ದಿನ

Published:
Updated:

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕಾಲೇಜುವಾರು ಹಾಗೂ ಕೋರ್ಸ್‌ವಾರು ಆದ್ಯತೆಗಳನ್ನು ಗುರುತಿಸಲು ಮಂಗಳವಾರ ಕೊನೆಯ ದಿನ.ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆ ಗುರುತಿಸಲು ಮಂಗಳವಾರ ರಾತ್ರಿ 10 ಗಂಟೆವರೆಗೂ ಅವಕಾಶ ಇದೆ. ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ 9 ಗಂಟೆವರೆಗೆ ಆದ್ಯತೆಗಳನ್ನು ಗುರುತಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.ಶುಲ್ಕ ವಾಪಸ್‌ಗೆ ಪಟ್ಟು: ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೈಕಿ ಕೆಲವರು ಸೋಮವಾರ ಸೀಟು ವಾಪಸ್ ಮಾಡಿದ್ದು, ಅವರು ಶುಲ್ಕ ಹಿಂತಿರುಗಿಸುವಂತೆ ಪಟ್ಟು ಹಿಡಿದ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಸೀಟು ವಾಪಸ್ ಮಾಡಲು ಜುಲೈ 31 ಕೊನೆಯ ದಿನವಾಗಿತ್ತು. ಆದರೆ, ಕೆಲ ವಿದ್ಯಾರ್ಥಿಗಳು ಸೋಮವಾರ ಸೀಟು ವಾಪಸ್ ಮಾಡಿದ್ದಾರೆ. ಹೀಗಾಗಿ, ಶುಲ್ಕ ಹಿಂತಿರುಗಿಸಲು ಅವಕಾಶ ಇಲ್ಲ ಎಂದು ತಿಳಿಸಲಾಯಿತು. ಆದರೂ ವಿನಾಕಾರಣ ಗೊಂದಲ ಸೃಷ್ಟಿಸಿದರು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಪಿ. ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು.ಈ ವಿಷಯವನ್ನು ಉನ್ನತ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ. ಸರ್ಕಾರ ಒಪ್ಪಿದರೆ ಶುಲ್ಕ ಹಿಂತಿರುಗಿಸಬಹುದು. ತಡವಾಗಿ ಸೀಟು ಹಿಂತಿರುಗಿಸಿದರೆ, ಆ ಸೀಟುಗಳನ್ನು ಭರ್ತಿ ಮಾಡಲು ಅವಕಾಶ ಇಲ್ಲ. ಸೀಟುಗಳು ಖಾಲಿ ಉಳಿಯುವುದರಿಂದ ಕಾಲೇಜುಗಳ ಆಡಳಿತ ಮಂಡಳಿಗೆ ನಷ್ಟವಾಗುತ್ತದೆ. ಹೀಗಾಗಿ ಶುಲ್ಕ ಹಿಂತಿರುಗಿಸಲು ಕಾಲೇಜುಗಳು ಒಪ್ಪುವುದಿಲ್ಲ ಎಂದರು.50 ವೈದ್ಯಕೀಯ ಸೀಟು

ಹೆಚ್ಚುವರಿಯಾಗಿ ಲಭ್ಯವಾಗಿರುವ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಸರ್ಕಾರ ಕಳುಹಿಸಿಕೊಟ್ಟಿದೆ. ವೈದ್ಯಕೀಯ ವಿಭಾಗದಲ್ಲಿ 50 ಸೀಟುಗಳು ಲಭ್ಯವಾಗಲಿದ್ದು, ಈ ತಿಂಗಳ 10ರ ನಂತರ ಕ್ಯಾಷುಯಲ್ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕುಲಕರ್ಣಿ ತಿಳಿಸಿದರು.

Post Comments (+)