ಕಾಲೇಜು ಆಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಅಸ್ನೋಟಿಕರ್

7

ಕಾಲೇಜು ಆಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಅಸ್ನೋಟಿಕರ್

Published:
Updated:

ಕಾರವಾರ: ಜಿಲ್ಲಾ ಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಇದ್ದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮೀನುಗಾರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಹೇಳಿದರು.ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ನಗರದಲ್ಲಿ ಭಾನುವಾರ ನಡೆದ ವಿವಿಧ ಸಂಘಟನೆ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. `ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ಆರೋಗ್ಯ ಸಚಿವ ರಾಮದಾಸ್ ಒಪ್ಪಿಗೆ ಸೂಚಿಸಿದ್ದರು. ಆದರೆ ಸಚಿವ ಸಂಪುಟ ಸಭೆಯ ಅಜೆಂಡಾದಲ್ಲಿ ಈ ಪ್ರಸ್ತಾವ ಸೇರ್ಪಡೆಯಾಗಿರಲಿಲ್ಲ. ಈ ಕಾರಣಕ್ಕಾಗಿ ಸಭೆ ಬಹಿಷ್ಕರಿಸಿದ್ದೇನೆ. ಸಭೆಯ ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೊಡನೆ ಕಾಲೇಜು ಕುರಿತು ಚರ್ಚಿಸಿದಾಗ ಅ. 25ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಾಲೇಜು ಸ್ಥಾಪನೆ ಬಗ್ಗೆ ಸ್ಪಷ್ಟ ನಿರ್ಣಯ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ~ ಎಂದು ತಿಳಿಸಿದರು.`ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಪ್ರಾರಂಭದಲ್ಲಿಯೇ ಪ್ರಸ್ತಾವ ಕಳುಹಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ ಜಿಲ್ಲೆಯಲ್ಲಿ ಎರಡು ಕಡೆ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕೆನ್ನುತ್ತಿರುವ ಕಾರಣದಿಂದಾಗಿ ಪ್ರಸ್ತಾವನೆ ಅಂಗೀಕಾರವಾಗಿಲ್ಲ. ಈಗಾಗಲೇ ಜಿಲ್ಲಾಡಳಿತವೂ ಜಿಲ್ಲಾಕೇಂದ್ರದಲ್ಲಿಯೇ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶಿಫಾರಸು ಮಾಡಿದ್ದು, ಅದಕ್ಕೆ ಸಲ್ಲಿಸಬೇಕಾದ ರೂ 3.50ಲಕ್ಷ ಶುಲ್ಕ ಭರಿಸಲು ಸಿದ್ಧವಿದೆ~ ಎಂದರು.`ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ  ಸಚಿವ ಸಂಪುಟ ಸಭೆ ಸೂಕ್ತ ನಿರ್ಣಯ ಕೈಗೊಳ್ಳದೇ ಇದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧನಾಗಿದ್ದೇನೆ. ಈ ಹೋರಾಟ ಜನರ ಹಿತಕ್ಕಾಗಿಯೇ ಹೊರತು ಸ್ವ- ಹಿತಾಸಕ್ತಿ ಅಥವಾ ರಾಜಕೀಯ ಲಾಭಕ್ಕಾಗಿ ಅಲ್ಲ~ ಎಂದರು.ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸಹ ಸಂಚಾಲಕ ಜಾರ್ಜ್ ಫನಾಂಡೀಸ್, ರಾಮಾ ನಾಯ್ಕ, ಡಾ. ನಿತೀನ ಪಿಕಳೆ, ಮಾಧವ ನಾಯ್ಕ, ಟಿ.ಎಂ.ಗುಡಿನೊ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry