ಭಾನುವಾರ, ಜೂನ್ 20, 2021
28 °C
ತಿಳವಳ್ಳಿ ಗ್ರಾಮ: ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಕ್ಕೆ

ಕಾಲೇಜು ಕಟ್ಟಡ ಕಾಮಗಾರಿಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್‌: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನ ತಿಳವಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಬೇಡಿಕೆಗೆ  ಶಾಸಕ ಮನೋಹರ ತಹಶೀಲ್ದಾರ್‌  ಸಮ್ಮತಿಸಿದ ಕಾರಣ ಧರಣಿ ಹಿಂಪಡೆಯಲಾಯಿತು.ಎರಡು ವರ್ಷಗಳ ಹಿಂದೆ ತಿಳವಳ್ಳಿ ಗ್ರಾಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿತ್ತು. ಅಲ್ಲದೆ, ಸ್ವಂತ ಕಟ್ಟಡಕ್ಕಾಗಿ ₨ 2 ಕೋಟಿ ಬಿಡುಗಡೆಗೊಂಡು 10 ಎಕರೆ ಜಾಗೆಯು ನಿಗದಿಯಾಗಿತ್ತು. ಇತ್ತೀಚೆಗೆ ಮತ್ತೆ ಬೇರೆಡೆ 3 ಎಕರೆ ಸ್ಥಳ ನಿಗದಿ ಮಾಡುವ ಕೆಲವರ ವಿಚಾರ ಕಟ್ಟಡ ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು. ಸ್ಥಳೀಯ ಮುಖಂಡರಲ್ಲಿನ ಭಿನ್ನಾಭಿಪ್ರಾಯದಿಂದ ಸ್ಥಳ ನಿಗದಿಯಲ್ಲಿ ಗೊಂದಲವಾಗಿ ಕಟ್ಟಡ ಕಾಮಗಾರಿ ಚಾಲನೆ ಪಡೆದಿರಲಿಲ್ಲ.ಬಾಡಿಗೆ ಕಟ್ಟಡ, ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ವರ್ಗಗಳು ನಡೆಯುತ್ತಿದ್ದವು. ಇದರಿಂದ ರೋಸಿಹೋಗಿದ್ದ ವಿದ್ಯಾರ್ಥಿಗಳು ಕಟ್ಟಡ ಕಾಮಗಾರಿ ಆರಂಭಿಸುವಂತೆ ಹಲವಾರು ಬಾರಿ ಸಂಬಂಧಿಸಿದವರಲ್ಲಿ ಮನವಿ ಮಾಡಿಕೊಂಡಿದ್ದು ಪ್ರಯೋಜನವಾಗದ ಪರಿಣಾಮ ಶನಿವಾರದಿಂದ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.ಮಂಗಳವಾರ ಪ್ರತಿಭಟನೆ ತೀವ್ರ ಗೊಳಿಸಿದ ವಿದ್ಯಾರ್ಥಿಗಳಿಗೆ ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳು, ಸಂಘ–ಸಂಸ್ಥೆಗಳಲ್ಲದೆ, ಸಾರ್ವ ಜನಿಕರು ಸಹಕಾರ ನೀಡಿದ್ದರಿಂದ ಬೆಳಿಗ್ಗೆಯಿಂದಲೇ ತಿಳವಳ್ಳಿ ಸಂಪೂರ್ಣ ಬಂದ್‌ ಆಗಿತ್ತು.ಅಂಗಡಿ ಮುಂಗಟ್ಟುಗಳು ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದವು. ಬಸ್‌ ಸೇರಿದಂತೆ ವಾಹನ ಓಡಾಟ ಸ್ಥಗಿತಗೊಳಿಸಿ ತಿಳವಳ್ಳಿ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿಹಚ್ಚಿ ಸಂಚಾರ ತಡೆಯಲಾಗಿತ್ತು.ವಿದ್ಯಾರ್ಥಿಗಳು ಮತ್ತು ಗ್ರಾಮದ ಮುಖಂಡರ ಧರಣಿ ನಡೆಸುತ್ತಿದ್ದ ಗ್ರಾಮದ ಹರ್ಡಿಕರ ವೃತ್ತಕ್ಕೆ ಮಧ್ಯಾಹ್ನ ಆಗಮಿಸಿದ ಶಾಸಕ ಮನೋಹರ ತಹಶೀಲ್ದಾರ್‌, ‘ಈ ಹಿಂದೆ ಗುರುತಿಸಿರುವ 10 ಎಕರೆ ಜಾಗವು ಕಾಲೇಜು ವಾತಾವರಣಕ್ಕೆ ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಈಗ ಸಮ್ಮಸಗಿ–ಬೀರೂರ ಮುಖ್ಯರಸ್ತೆಗೆ ಹೊಂದಿಕೊಂಡ ಭಾಗದಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಇದರಲ್ಲಿ ಪ್ರತಿಷ್ಠೆಯ ಪ್ರಶ್ನೆಯಿಲ್ಲ. ಸ್ಥಳೀಯರ ಸಭೆ ನಡೆಸಿ ಸ್ಥಳ ನಿಗದಿ ಮಾಡಲಾಗಿದೆ.ಕಾಮಗಾರಿಯ ವಿಳಂಬದಿಂದ ಅನುದಾನ ವಾಪಸ್‌ ಹೋಗುವುದಿಲ್ಲ. ಇದಕ್ಕೆ ಆತಂಕ ಪಡುವ ಅವಶ್ಯಕತೆಯಿಲ್ಲ’ ಎಂದರು.

ಪ್ರತಿಭಟನಾ ನಿರತರು ಶಾಸಕರ ಮಾತಿಗೆ ಸಮ್ಮತಿಸದಿದ್ದಾಗ ವಾರದ ಗಡುವು ನೀಡಿದರೆ ಸ್ಥಳದ ಅಂತಿಮ ನಿರ್ಣಯ ಮಾಡಲಾಗುತ್ತದೆ ಎಂದು ಶಾಸಕ ಮನೋಹರ ಹೇಳಿದರು.ಆದರೆ ಗಡುವು ನೀಡಲು ಸಿದ್ಧರಿಲ್ಲ ಈಗಲೇ ಸ್ಥಳ ನಿಗದಿ ಅಂತಿಮವಾಗಬೇಕು. 3 ಎಕರೆಗಿಂತ 10 ಎಕರೆ ಪ್ರದೇಶವೇ ಕಾಲೇಜು ನಿರ್ಮಾಣಕ್ಕೆ ಸೂಕ್ತ ಎಂಬ ಎಲ್ಲರ ವಾದಕ್ಕೆ ಸಮ್ಮತಿಸಿದ ಶಾಸಕ ಮನೋಹರ ತಹಸೀಲ್ದಾರ್ ಈ ಹಿಂದೆ ನಿಗದಿಯಾದ 10 ಎಕರೆ ಜಾಗೆಯಲ್ಲಿಯೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸಮ್ಮತಿಸಿ ಸ್ಥಳದಲ್ಲಿದ್ದ ಪಿಡಬ್ಲುಡಿ ಎಂಜನಿಯರ್‌ ಬಂಡಿವಡ್ಡರ ಅವರಿಗೆ ಕಾಮಗಾರಿ ಆರಂಭಿಸುವಂತೆ ಆದೇಶಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭಟನೆಯು ಸುಖಾಂತ್ಯ ಕಂಡಿತು.ತಹಶೀಲ್ದಾರ್‌ ಡಾ.ನಾಗೇಂದ್ರ ಹೊನ್ನಳ್ಳಿ, ಪಿಡಬ್ಲುಡಿ   ಜಿಲ್ಲಾ ಪಂಚಾಯತಿ ಸದಸ್ಯ ಮಹದೇವಪ್ಪ ಬಾಗಸರ, ಮುಖಂಡರಾದ ಮಲ್ಲನಗೌಡ ಪಾಟೀಲ, ಆರ್‌.ಎಸ್‌.ಪಾಟೀಲ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.