ಮಂಗಳವಾರ, ಜೂನ್ 15, 2021
27 °C

ಕಾಲೇಜು ಶಿಕ್ಷಕರ ಸಾಂಕೇತಿಕ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಕೇಂದ್ರ ಕಚೇರಿ ಕೊಟ್ಟ ಕರೆಯ ಮೇರೆಗೆ ಸ್ಥಳೀಯ ಬಿಎಲ್‌ಡಿಇಎ ಕಾಲೇಜಿನ ಶಿಕ್ಷಕರು ಸೋಮವಾರ ಕಪ್ಪುಪಟ್ಟಿ ಧರಿಸಿ ತರಗತಿಗಳಿಗೆ ಹಾಜರಾಗುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಟಿ.ಪಿ. ಗಿರಡ್ಡಿ ಅವರ ಅಧ್ಯಕ್ಷತೆಯಲ್ಲಿ  ಸಭೆ ನಡೆಸಿ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಯುಜಿಸಿ ವೇತನ ಬಾಕಿ ಮತ್ತು ಸೇವಾ ಮುಂಬಡ್ತಿ ಬಾಕಿ ಸೇರಿದಂತೆ ಎಲ್ಲ ಬಾಕಿ ಇರುವ ವೇತನ ಹಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡಲೇ ಬಿಡುಗಡೆ ಮಾಡಬೇಕು. ಯುಜಿಸಿ ವೇತನ ಶ್ರೇಣಿ ಮತ್ತು ಪಿಎಚ್.ಡಿ ಮುಂಗಡ ವೇತನ ಬಡ್ತಿ ನೀಡಿಕೆಯಲ್ಲಿನ ದೋಷಗಳನ್ನು ಸರಿಪಡಿಸಬೇಕು.ಪುನರ್ ಮನನ ಮತ್ತು ದಿಕ್ಸೂಚಿ ಕೋರ್ಸ್‌ಗಳನ್ನು ಪೂರೈಸಲು ಅವಧಿ ವಿಸ್ತರಿಸಬೇಕು. ರಾಜ್ಯ ಸರಕಾರ ಸೇವಾ ಮುಂಬಡ್ತಿ ನಿಯಮಗಳನ್ನು ರಚಿಸಿ ಕೂಡಲೇ ಅನುಷ್ಠಾನ ಮಾಡಬೇಕು. ಗುತ್ತಿಗೆ, ಅರೆಕಾಲಿಕ ಹಾಗೂ ಅತಿಥಿ ಉಪನ್ಯಾಸಕರಿಗೆ ಯೋಗ್ಯ ಹಾಗೂ ಸಮರ್ಥನೀಯ ವೇತನ ನಿಗದಿಪಡಿಸಬೇಕು.ಹೊಸ ಪಿಂಚಣಿ ಯೋಜನೆಯನ್ನು ಕೈಬಿಡಬೇಕು. ಶಿಕ್ಷಣ ಮಸೂದೆ ಕುರಿತು ರಾಷ್ಟ್ರ ಮಟ್ಟದ ಚರ್ಚೆಗೆ ಅವಕಾಶ ನೀಡಬೇಕು. ಉನ್ನತ ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಸಾಂಕೇತಿಕ ಪ್ರತಿಭಟನೆ ನಡೆಸಿದರು.ಸಭೆಯ ನಂತರ ತಹಶೀಲ್ದಾರರ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ ಡಾ.ಸಿದ್ದು ಹುಲ್ಲೋಳಿ ಅವರ ಮೂಲಕ ಮುಖ್ಯಮಂತ್ರಿ ಸದಾನಂದಗೌಡರಿಗೆ ಮನವಿ ಸಲ್ಲಿಸಿದರು.ಪ್ರೊ.ಎ.ಎಸ್. ಕಂದಗಲ್ಲ, ಪ್ರೊ.ಬಸವರಾಜ ಕಡ್ಡಿ, ಡಾ.ಬಿ.ಎಂ.ಕಲಶೆಟ್ಟಿ, ಪ್ರೊ.ಎ.ವಿ. ಸೂರ್ಯವಂಶಿ, ಪ್ರೊ.ಜಿ.ಜಿ. ಕೋರೆ, ಪ್ರೊ.ಎಂ.ಸಿ. ಸಂಗಣ್ಣವರ, ಡಾ.ಪಿ.ಡಿ. ಪೋಳ, ಪ್ರೊ.ಎಚ್.ಎಸ್. ಗಿಡ್ಡನವರ, ಪ್ರೊ.ಜಿ.ಎ. ಅನೂರೆ, ಪ್ರೊ.ವಿ.ಎಸ್. ಕರಿಭಂಟನಾಳ  ನಿಯೋಗದಲ್ಲಿದ್ದರು.ಕಪ್ಪುಬಟ್ಟೆ ಪ್ರತಿಭಟನೆ

ಬನಹಟ್ಟಿ: ರಾಜ್ಯ ಸರ್ಕಾರ ಯು.ಜಿ.ಸಿ ನಿಯಮಾವಳಿ ಪ್ರಕಾರ 6ನೇ ವೇತನದ ಐದು ವರ್ಷದ ಅಂತರ ಬಾಕಿಯನ್ನು ನೀಡಲು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ  ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘದ ಸುತ್ತೋಲೆ ಮೇರೆಗೆ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರು ಸೋಮವಾರ  ಕಪ್ಪುಬಟ್ಟೆ ಕಟ್ಟಿಕೊಂಡು ತರಗತಿಗಳಿಗೆ ಹಾಜರಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಪ್ರೊ.ಪೂರ್ಣಿಮಾ ನಾಯ್ಕ, ಡಾ.ಎಸ್.ಬಿ. ಮಟೋಳಿ, ಡಾ.ಬಸವರಾಜ ಹದ್ಲಿ, ಡಾ.ಎಂ.ಪಿ. ತಾನಪ್ಪಗೋಳ, ಪ್ರೊ.ವೈ.ಡಿ. ಬಾಗಿ, ಪ್ರೊ.ವಿಶ್ವಜ ಕಾಡದೇವರ, ಪ್ರೊ.ಎಸ್.ಎಲ್. ಸಿಂಧ್ಯೆ, ಡಾ.ಜಿ.ಆರ್.ಜುನ್ನಾಯ್ಕರ, ಪ್ರೊ.ಎಂ.ಎನ್. ಬೆನ್ನೂರ, ಡಾ.ಎಸ್.ಬಿ. ಸುಗಮದ, ಪ್ರೊ.ಎಂ.ಐ. ಮನ್ವಾಚಾರ್ಯ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.