ಕಾಲೇಜು ಸ್ಥಳಾಂತರಕ್ಕೆ ವಿರೋಧ

ಮಂಗಳವಾರ, ಜೂಲೈ 23, 2019
24 °C

ಕಾಲೇಜು ಸ್ಥಳಾಂತರಕ್ಕೆ ವಿರೋಧ

Published:
Updated:

ಚಳ್ಳಕೆರೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ತರಗತಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನೂತನವಾಗಿ ಸೋಮಗುದ್ದು ರಸ್ತೆಯಲ್ಲಿ ನಿರ್ಮಿಸಿರುವ ಕಾಲೇಜು ಕಟ್ಟಡದಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಸಮಸ್ಯೆ ಕಾಡುತ್ತಿದೆ. ಇದಲ್ಲದೇ ಕಾಲೇಜಿಗೆ ಹೋಗಿ ಬರುವಾಗ ಪಡ್ಡೆ ಹುಡುಗರು ಚುಡಾಯಿಸುತ್ತಾರೆ. ಹೊಸ ಕಟ್ಟಡದಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಸೂಕ್ತ ಪರಿಕರಗಳು ಲಭ್ಯ ಇಲ್ಲದೇ ಹಳೇ ಕಟ್ಟಡಕ್ಕೆ ಬರಬೇಕು. ಹೊಸ ಕಟ್ಟಡದಿಂದ ಹಳೇ ಕಟ್ಟಡಕ್ಕೆ ಸಾಕಷ್ಟು ದೂರ ಇರುವುದರಿಂದ ಇಲ್ಲಿಯೇ ತರಗತಿ ನಡೆಸಬೇಕು ಎಂದು ವಿದ್ಯಾರ್ಥಿನಿಯರು ತಮ್ಮ ಗೋಳು ತೋಡಿಕೊಂಡರು.ಸಾಕಷ್ಟು ಭಾರಿ ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರ ಹತ್ತಿರ ಹೇಳಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ, ಬೇಡಿಕೆ ಈಡೇರಿಸುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ವಿದ್ಯಾರ್ಥಿನಿಯರು ತರಗತಿಗಳ ಮುಂಭಾಗದಲ್ಲಿ ಧರಣಿ ನಡೆಸಿದರು.ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ತಿಪ್ಪೇಸ್ವಾಮಿ, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ವಿದ್ಯಾರ್ಥಿನಿಯರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ಸಮಸ್ಯೆ ನಿವಾರಣೆ ಮಾಡಬೇಕು. ಶನಿವಾರ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂದು ಪ್ರಿನ್ಸಿಪಾಲ್ ಶೋಭಾ ಅವರಿಗೆ ಸೂಚಿಸಿದರು.ಕಟ್ಟಡದ ಆಸುಪಾಸಿನಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸು ವವರ ಬಗ್ಗೆ ತೀವ್ರ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಪಿಎಸ್‌ಐ ವೈ.ಎಸ್. ಚಂದ್ರಶೇಖರ್ ಅವರಿಗೆ ಶಾಸಕರು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ. ಬೋರನಾಯಕ, ಟಿ.ಜೆ. ತಿಪ್ಪೇಸ್ವಾಮಿ, ಎಪಿಎಂಸಿ ಸದಸ್ಯ ಬಿ.ವಿ. ಸಿರಿಯಣ್ಣ, ಮಾಜಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ದೊರೆಬೈಯಣ್ಣ, ಎಬಿವಿಪಿ ಸಂಚಾಲಕ ಕುಬೇರ, ಮಂಜುನಾಥ್, ತಿಪ್ಪೇಸ್ವಾಮಿ ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry