ಕಾಲ ಕಸ ತೆಗೆವ ಮಂದಿಯ ನೆತ್ತಿಗೆ ನೆರಳುಇಲ್ಲ!

7

ಕಾಲ ಕಸ ತೆಗೆವ ಮಂದಿಯ ನೆತ್ತಿಗೆ ನೆರಳುಇಲ್ಲ!

Published:
Updated:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ 400 ಕಾಯಂ ಹಾಗೂ 300 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಅವರಿಗೆ ನಿವೇಶನವನ್ನಾಗಲಿ, ನೆತ್ತಿಯ ಮೇಲೊಂದು ಸೂರು ಒದಗಿಸುವ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ ಎಂಬ ಆರೋಪ ಇದೆ. ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ಪಾಲನೆಯಾಗದ ಸರ್ಕಾರದ ಆದೇಶದ ಪ್ರತಿ!ಸರ್ಕಾರದ ಆದೇಶ ಪ್ರತಿಯಲ್ಲಿ, `ಇದೊಂದು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ, ದಾವಣಗೆರೆ ತಾಲ್ಲೂಕು ದೊಡ್ಡಬೂದಿಹಾಳ್ ಗ್ರಾಮದ ಸರ್ವೇ ನಂ: 112ರಲ್ಲಿ 10.2 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳ 1966 ನಿಯಮ 97(4)ರ ಅನ್ವಯ ಗೋಮಾಳ ಶೀರ್ಷಿಕೆಯಿಂದ ಬದಲಿಸಿ,ಕರ್ನಾಟಕದ ಭೂ ಮಂಜೂರಾತಿ ನಿಯಮಗಳ 1969ರ ನಿಯಮ 20ರ ಅನ್ವಯ ಮಾರುಕಟ್ಟೆ ಬೆಲೆಯ ಶೇ 50ರಷ್ಟು ಮೊತ್ತ ವಿಧಿಸಿ, ಆ ಮೊತ್ತವನ್ನು ದಾವಣಗೆರೆ ಮಹಾನಗರ ಪಾಲಿಕೆಗೆ ಪಾವತಿಸುವ ಷರತ್ತಿಗೆ ಒಳಪಟ್ಟು ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸುವ ಸಲುವಾಗಿ, ಈ ಭೂಮಿಯನ್ನು ಪಾಲಿಕೆಗೆ ಹಸ್ತಾಂತರಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ~ ಎಂದು ಉಲ್ಲೇಖಿಸಿ ಮೇ 24ರಂದು ಆದೇಶ ನೀಡಲಾಗಿದೆ.ಆದರೆ, ಈ ಭೂಮಿ ಎಲ್ಲಿದೆ? ಯಾವ ಸ್ಥಿತಿಯಲ್ಲಿದೆ? ಅದನ್ನು ಸ್ವಚ್ಛಗೊಳಿಸುವ ಬಗ್ಗೆ, ಅದರಲ್ಲಿ ಎಷ್ಟು ನಿವೇಶನ ಮಾಡಲು ಸಾಧ್ಯ? ಯಾವ ಅಳತೆಯಲ್ಲಿ ನಿವೇಶನ ಮಾಡಿದರೆ ಎಲ್ಲರಿಗೂ ಲಭ್ಯ ಆಗಬಹುದೇ ಎಂಬ ಬಗ್ಗೆಯಾಗಲಿ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ. ಯಾವ ಯೋಜನೆಯನ್ನೂ ಸಿದ್ಧಪಡಿಸಿಲ್ಲ ಎಂಬ ದೂರು ಪೌರಕಾರ್ಮಿಕರದ್ದು.ಉಳ್ಳವರ ಸೇವೆ ಎಂಬತೆ ಹೊಲಸು, ಹೇಸಿಗೆ ಎನ್ನದೆ ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳುವ ಈ ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ನಡೆಸಿರುವ ಹೋರಾಟ ಒಂದೆರಡಲ್ಲ.`ನಿವೇಶನ ಗುರುತು ಮಾಡಿ, ಹಕ್ಕುಪತ್ರ ನೀಡಿ. ಗುತ್ತಿಗೆ ಪೌರಕಾರ್ಮಿಕರಿಗೆ ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿಕೊಡಿ~ ಎಂಬ ಬೇಡಿಕೆ ಪತ್ರ ಹಿಡಿದು ಆರಂಭಿಸಿದ ಹೋರಾಟ ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿಭಟನೆ, ಪಾಲಿಕೆಗೆ ಮುತ್ತಿಗೆ, ಮೇಯರ್, ಆಯುಕ್ತರಿಗೆ ಮುತ್ತಿಗೆ, ಘೇರಾವ್, ಧರಣಿ, ಸತ್ಯಾಗ್ರಹ ಎಲ್ಲ ಬಗೆಯ ಹೋರಾಟಗಳನ್ನು ನಡೆಸಿದರು. ಕೊನೆಯಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿ, ಪ್ರತಿಭಟಿಸುವ ಮೂಲಕ ಮನವಿಯನ್ನೂ ಸಲ್ಲಿಸಿದ್ದಾಯಿತು.ಇದಕ್ಕೂ ಮಣಿಯದಿದ್ದಾಗ, ನಗರದ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ ಕೇವಲ ಒಂದು ದಿನ ಧರಣಿ ನಡೆಸಿದರು. ಇದರ ಪರಿಣಾಮ ಇಡೀ ನಗರದ ಜನ ಮೂಗು ಹಿಡಿದು ನಡೆದಾಡುವಂತಾಗಿತ್ತು. ಅವರ ಕಾರ್ಯದ ಅನಿವಾರ್ಯತೆ ಇದ್ದರೂ ಕಾರ್ಮಿಕರ ಬೇಡಿಕೆ ಈಡೇರಿಸುವ ಹಾಗೂ ಅವರಿಗೊಂದು ನಿವೇಶನ ನೀಡುವ, ನೆತ್ತಿಯ ಮೇಲೊಂದು ಸೂರು ಒದಗಿಸುವ ಕಾರ್ಯ ತೆವಳುತ್ತಲೇ ಸಾಗಿದೆ.ಪಾಲಿಕೆಯ ಅಧಿಕಾರಿಗಳು ಸರ್ಕಾರದ ಆದೇಶದಂತೆ ಕೂಡಲೇ ಭೂಮಿ ಇರುವ ಸ್ಥಳ ಗುರುತಿಸಬೇಕು. ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಅದರಲ್ಲಿ ಎಷ್ಟು ನಿವೇಶನ ಮಾಡುಬಹುದು ಎಂದು ಯೋಜನೆ ತಯಾರಿಸಬೇಕು. ನಂತರ, ಅಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಡಲು ಹಸ್ತಾಂತರಿಸಬೇಕು ಎಂದು ಒತ್ತಾಯಿಸುತ್ತಾರೆ ಪಾಲಿಕೆ ಪೌರಕಾರ್ಮಿಕರ ಮತ್ತು `ಡಿ~ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ.ನಗರದಲ್ಲಿ ಕೆಲವೆಡೆ ನೀಡಿರುವ ಆಶ್ರಯ ಮನೆಗಳಿಗೆ ಸರಿಯಾಗಿ ಫಲಾನುಭವಿಗಳಿಂದ ವೆಚ್ಚದ ಮರುಪಾವತಿ ಆಗುತ್ತಿಲ್ಲ. ಆದರೆ, ಪೌರಕಾರ್ಮಿಕರು ಪಾಲಿಕೆಯಿಂದಲೇ ವೇತನ ಪಡೆಯುತ್ತಿರುವುದರಿಂದ ಅವರಿಗೆ ನಿವೇಶನ, ಮನೆ ಒದಗಿಸಿದರೆ ಅವರು ತಮ್ಮ ವೇತನದ ಹಣದಲ್ಲಿ ಸಾಲದ ಕಂತನ್ನು ಮರುಪಾವತಿ ಮಾಡಲು ಸಿದ್ಧರಿದ್ದಾರೆ. ಇದನ್ನೆಲ್ಲ ಮನವರಿಕೆ ಮಾಡಿಕೊಟ್ಟಿದ್ದರೂ ನಮ್ಮ ಬೇಡಿಕೆ ಕಡತಗಳಲ್ಲೇ ಉಳಿದಿದೆ ಎಂದು ದೂರುತ್ತಾರೆ ಅವರು.ಕುಟುಂಬದ ಸಮಸ್ಯೆಗಳನ್ನು ಬದಿಗೊತ್ತಿ, ಇಡೀ ನಗರವನ್ನು ಸ್ವಚ್ಛವಾಗಿಡಲು ದುಡಿಯುವ ಶ್ರಮಿಕವರ್ಗಕ್ಕೆ ಕನಿಷ್ಠ ಸೌಲಭ್ಯ ಒದಗಿಸಲು ಸರ್ಕಾರ, ಅಧಿಕಾರಿಗಳು ಮಿನ-ಮೇಷ ಎಣಿಸುತ್ತಿದ್ದಾರೆ. ಪೌರಕಾರ್ಮಿಕರ ಹಿತ ಕಾಯಲು ಐ.ಪಿ.ಡಿ ಸಾಲಪ್ಪ ಅವರ ವರದಿಯನ್ನು ಜಾರಿಗೊಳಿಸಬೇಕು. ಜತೆಗೆ, ಬಜೆಟ್‌ನಲ್ಲಿ ಪೌರಕಾರ್ಮಿಕರಿಗೆ ನಿವೇಶನ, ಮನೆ ನಿರ್ಮಾಣ, ನವೋದಯ ಮಾದರಿಯ ಶಾಲೆಗಳ ಆರಂಭಕ್ಕೆಂದು ಪ್ರತ್ಯೇಕ ಹಣ ಮೀಸಲಿರಿಸಬೇಕು. ಈ ಮೂಲಕ `ಕಾಲ ಕಸ ತೆಗೆಯುವ ಮಂದಿಯ ನೆತ್ತಿಗೆ ನೆರಳು~ ನೀಡಿ ಅವರನ್ನು ಕಾಯುವ ಕೆಲಸ ಆಗಲಿ ಎಂಬುದು ಎಲ್ಲರ ಒತ್ತಾಸೆ.  ಎಲ್ಲೆಲ್ಲಿ ಪೌರಕಾರ್ಮಿಕರ ಕೊರತೆ?

ಡಿ. ದೇವರಾಜ ಅರಸು ಬಡಾವಣೆ ಎ,ಬಿ ಮತ್ತು ಸಿ ಬ್ಲಾಕ್ ಯಲ್ಲಮ್ಮ ನಗರ, ವಿನಾಯಕ ಬಡಾವಣೆ, ಶಾಂತಿ ನಗರ, ಹಳೇ ಕುಂದುವಾಡ, ಹೊಸ ಕುಂದುವಾಡ, ನಿಜಲಿಂಗಪ್ಪ ಬಡಾವಣೆ, ಎಸ್.ಎಸ್. ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಶಾಮನೂರು, ಆಂಜನೇಯ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ತರಳಬಾಳು ಬಡಾವಣೆ, ಆಂಜನೇಯ ಮಿಲ್ ಬಡಾವಣೆ, ಆವರಗೆರೆ, ಬಾಡ ಕ್ರಾಸ್, ಹೊಸ ಚಿಕ್ಕನಹಳ್ಳಿ, ಹಳೇ ಚಿಕ್ಕನಹಳ್ಳಿ, ಎಸ್‌ಒಜಿ ಕಾಲೊನಿ, ಶ್ರೀರಾಮ ನಗರ, ಕೈಗಾರಿಕಾ ನಗರ, ಬಸಾಪುರ, ಆನೆಕೊಂಡ,ಇಂದಿರಾ ನಗರ, ಶಿವನಗರ, ಬಾಷಾ ನಗರ, ಚೌಡೇಶ್ವರಿ ನಗರ, ಮಿರ್ಜಾ ಇಸ್ಮಾಯಿಲ್ ನಗರ, ಎಸ್.ಎಂ ಕೃಷ್ಣ ನಗರ, ಎಸ್‌ಪಿಎಸ್ ನಗರ, ಎಸ್‌ಜಿಎಂ ನಗರ, ಅಶೋಕ ನಗರ, ಯರಗುಂಟೆ ಸೇರಿದಂತೆ ಪಾಲಿಕೆ ವ್ಯಾಪ್ತಿಗೆ ಸೇರಿದ ಇತರ ಹೊಸ ಬಡಾವಣೆಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry