ಕಾಲ ಬದಲಾಗಿದೆ, ನೀವೂ ಬದಲಾಗಿ

ಮಂಗಳವಾರ, ಮೇ 21, 2019
24 °C

ಕಾಲ ಬದಲಾಗಿದೆ, ನೀವೂ ಬದಲಾಗಿ

Published:
Updated:

ಯಾದಗಿರಿ: “ಕಾಲ ಬದಲಾಗಿದೆ. ನೀವು ಬದಲಾಗಬೇಕು. ಆಗದೇ ಇದ್ದರೆ ಜನರೇ ಬದಲಾಯಿಸುತ್ತಾರೆ. ಇದು ಮನರಂಜನಾ ಕಾರ್ಯಕ್ರಮವಲ್ಲ. ಸರಿಯಾಗಿ ಮಾಹಿತಿ ನೀಡಿ”ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಹವಾಲ ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಅಧಿಕಾರಿಗಳಿಗೆ ನೀಡಿದ ಸಲಹೆ ಇದು.ವೆಂಕೋಬ ದೊರೆ ಎಂಬುವವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ 2008 ರಲ್ಲಿ ಮಂಜೂರಾಗಿರುವ ಕಾಮಗಾರಿಗಳು ಇದುವರೆಗೂ ಜಾರಿಗೆ ಬಂದಿಲ್ಲ ಎಂದು ದೂರು ಸಲ್ಲಿಸಿದರು. ಈ ಬಗ್ಗೆ ಉತ್ತರಿಸುವಂತೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ನ ಕಾರ್ಯನಿರ್ವಾಹಕ ಎಂಜಿನಿಯರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಆದರೆ ಎಂಜಿನಿಯರ್ ಮಾತ್ರ, ಆಗಿದೆ, ಆಗುತ್ತಿದೆ. ಒಂದು ಕಟ್ಟಡ ಆರಂಭವಾಗಿದೆ. ಇನ್ನೊಂದು ಕಟ್ಟಡಕ್ಕೆ ನಿವೇಶನವೇ ಸಿಕ್ಕಿಲ್ಲ ಎಂದು ಹೇಳಲು ಆರಂಭಿಸಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾ. ಶಿವರಾಜ ಪಾಟೀಲ ಮೇಲಿನಂತೆ ಸಲಹೆ ಮಾಡಿದರು.ಕೆಲಸ ಆಗಿದ್ದರೆ ಆಗಿರುವುದಾಗಿ ಹೇಳಿ. ಆಗದಿದ್ದರೆ, ಇಂತಿಷ್ಟು ಕಾಲಮಿತಿಯಲ್ಲಿ ಮಾಡಿಸುವುದಾಗಿ ಹೇಳಿ. ಅದನ್ನು ಬಿಟ್ಟು ಏನೇನೋ ಹೇಳುತ್ತ ಕೂರಬೇಡಿ. ಸಮಯ ವ್ಯರ್ಥ ಮಾಡಬೇಡಿ. ನೀವು ಆಗಿದೆ ಎಂದು ಹೇಳುತ್ತೀರಿ. ದೂರು ನೀಡಿದವರು ಆಗಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಸತ್ಯಾಂಶದ ಮೇಲೆ ತಪ್ಪು ಮಾಡಿದವರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನಾವು ಕಥೆ ಕೇಳಲು ಬಂದಿಲ್ಲ:


ಸಭೆಯುದ್ದಕ್ಕೂ ನಗುತ್ತಲೇ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನ್ಯಾ. ಶಿವರಾಜ ಪಾಟೀಲರು, ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪ್ರಸನ್ನಕುಮಾರ ಎಂಬುವವರು ತಮ್ಮ ಹೊಲದಲ್ಲಿ ಹಾದು ಹೋಗಿರುವ ಲಾಟರಲ್ ಕೆನಾಲ್ ಒಡೆಯುತ್ತಿರುವುದರಿಂದ ಬೆಳೆ ಹಾನಿ ಆಗಿದೆ ಎಂದು ದೂರು ಸಲ್ಲಿಸಿದ್ದರು. ಈ ಸಮಯದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಯಾವೊಬ್ಬ ಅಧಿಕಾರಿಗಳೂ ಹಾಜರಿರಲಿಲ್ಲ. ಇಷ್ಟಕ್ಕೆ ಸುಮ್ಮನಾದ ನ್ಯಾಯಮೂರ್ತಿಗಳು, ಮಧ್ಯಾಹ್ನ ಅಧಿಕಾರಿಗಳನ್ನು ಕರೆಯಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಮಧ್ಯಾಹ್ನ 3 ಗಂಟೆಗೆ ಮತ್ತೆ ಸಭೆ ಆರಂಭವಾದಾಗಲೂ ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ತಾರಾಸಿಂಗ ರಾಠೋಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಕೆ. ನರಸಿಂಹ ಮೂರ್ತಿ ಸಭೆಗೆ ಆಗಮಿಸಿರಲಿಲ್ಲ. ಕಚೇರಿಯ ಸಹಾಯಕರೊಬ್ಬರನ್ನು ಸಭೆಗೆ ಕಳುಹಿಸಿದ್ದರು. ಆದರೆ ಕಚೇರಿ ಸಹಾಯಕರೂ ಸಮಸ್ಯೆಯ ಬಗ್ಗೆ ಸ್ಪಷ್ಟ ಉತ್ತರ ನೀಡದೇ, ಅನುದಾನ ಬಂದ ಮೇಲೆ ಕೆಲಸ ಮಾಡುತ್ತೇವೆ ಎಂದು ಸಬೂಬು ಹೇಳಲು ಆರಂಭಿಸಿದರು.ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾ. ಶಿವರಾಜ ಪಾಟೀಲ “ಕಥೆ ಹೇಳಬೇಡಿ. ನಿಗಮದ ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಭೆಗೆ ಬಂದಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಸ್ಪಷ್ಟನೆ ನೀಡಲು ಕಚೇರಿಯ ಸಹಾಯಕರೊಬ್ಬರನ್ನು ಕಳುಹಿಸಿದ್ದಾರೆ. ಈ ನೀವು ಕಥೆ ಹೇಳುತ್ತಿದ್ದೀರಿ. ಕೆಲಸ ಇಲ್ಲದ್ದಕ್ಕೆ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿದುಕೊಂಡಿದ್ದೀರಾ? ನಾವಿಲ್ಲ ಕಥೆ ಕೇಳಲು ಬಂದಿಲ್ಲ. ನಿಮ್ಮ ಮನೋಭಾವ ಬದಲಾಯಿಸಿಕೊಳ್ಳಿ. ಇಲ್ಲವಾದಲ್ಲಿ ಓಣಿಯಲ್ಲಿ ಓಡಾಡುವುದು ಕಷ್ಟವಾದೀತು. ಲೋಕಾಯುಕ್ತ ನ್ಯಾಯಮೂರ್ತಿಗಳೆಂದರೆ ಏನು ಎಂಬುದನ್ನು ನಿಮ್ಮ ಅಧಿಕಾರಿಗಳಿಗೆ ತೋರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.ಸರಿಯಾದ ಮಾಹಿತಿ ನೀಡಬೇಕು:

ದೂರಿಗೆ ಸರಿಯಾದ ಪ್ರತಿಕ್ರಿಯೆ ನೀಡುವುದು ಅಧಿಕಾರಿಗಳ ಜವಾಬ್ದಾರಿ. ಅದೇ ರೀತಿ, ಸಾರ್ವಜನಿಕರೂ ಸರಿಯಾದ ಮಾಹಿತಿಯನ್ನು ಒಳಗೊಂಡ ದೂರನ್ನು ನೀಡಬೇಕು ಎಂದು ನ್ಯಾ. ಶಿವರಾಜ ಪಾಟೀಲ, ದೂರು ನೀಡುವವರಿಗೂ ಸಲಹೆ ಮಾಡಿದರು.ಶಹಾಪುರದಲ್ಲಿ ಪುರಸಭೆಯ ಜಾಗೆಯನ್ನು ವ್ಯಕ್ತಿಯೊಬ್ಬರು ಅತಿಕ್ರಮ ಮಾಡಿರುವ ಬಗ್ಗೆ ದೂರು ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂದು ಅಧಿಕಾರಿ ವಿವರಿಸಿದರು. ಆದರೆ ದೂರು ನೀಡಿದವರು ಮಾತ್ರ, ನ್ಯಾಯಾಲಯದಿಂದ ತಡೆ ಇಲ್ಲ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ವಾದಿಸಿದರು. ಆದರೆ ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿಗಳು ಹಾಗೂ ಪುರಸಭೆಯ ಆಯುಕ್ತರು, ಹೈಕೋರ್ಟ್ ಆದೇಶದ ಪ್ರತಿಯನ್ನು ಲೋಕಾಯುಕ್ತರಿಗೆ ನೀಡಿದರು.ಇದನ್ನು ಗಮನಿಸಿದ ನ್ಯಾ. ಶಿವರಾಜ ಪಾಟೀಲರು, ಕೇವಲ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅಧಿಕಾರಿಗಳ ವಿರುದ್ಧ ದೂರು ನೀಡುವವರೂ ಸರಿಯಾಗಿ ನೋಡಿಕೊಂಡು ದೂರು ನೀಡಬೇಕು ಎಂದು ಸೂಚಿಸಿದರು.ಉದ್ಯೋಗ ಖಾತರಿಗೆ ಸಂಬಂಧಿಸಿದ ಹಲವಾರು ದೂರುಗಳು ಕೇಳಿಬಂದವು. ನಗರದಲ್ಲಿ ಮೂಲಸೌಕರ್ಯ, ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಸುಮಾರು 94 ದೂರುಗಳು ದಾಖಲಾದವು.ಜಿಲ್ಲಾಧಿಕಾರಿ ಗುರುನೀತ ತೇಜ್ ಮೆನನ್, ಲೋಕಾಯುಕ್ತ ಮುಖ್ಯ ಎಂಜಿನಿಯರ್ ಅನಿಲಕುಮಾರ, ಸಹಾಯಕ ರಜಿಸ್ಟ್ರಾರ್ ವಿ. ಸೋಮಶೇಖರ, ಎಸ್ಪಿ ಡಿ. ರೂಪಾ, ಲೋಕಾಯುಕ್ತ ಎಸ್ಪಿ ಬಿ.ಎನ್. ನೀಲಗಾರ, ಲೋಕಾಯುಕ್ತ ಡಿಎಸ್ಪಿ ರವಿ ಪಾಟೀಲ, ಇನ್ಸ್‌ಪೆಕ್ಟರ್ ಮಹೇಶಗೌಡ ಎಸ್.ಯು.  ಮುಂತಾದವರು ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry