ಕಾಳಸಂತೆಯಲ್ಲಿ ಪಡಿತರ ಮಾರಾಟ ಆರೋಪ

7
ಬಸಾಪುರ ಗ್ರಾಮಸ್ಥರ ಪ್ರತಿಭಟನೆ, ಆಕ್ರೋಶ

ಕಾಳಸಂತೆಯಲ್ಲಿ ಪಡಿತರ ಮಾರಾಟ ಆರೋಪ

Published:
Updated:

ದಾವಣಗೆರೆ:  ಸಮೀಪದ ಬಸಾಪುರದ ಆನೆಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾನುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಸರ್ಕಾರ ನೀಡುವ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ, ಹಣ ಮಾಡಿಕೊಳ್ಳುತ್ತಿದ್ದಾರೆ. ಬಡವರಿಗೆ ಮೋಸ ಮಾಡಲಾಗುತ್ತಿದೆ ಎಂದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸಂಪೂರ್ಣ ಲೋಪವಾಗಿದೆ. ಮೊದಲನೇ ದಿನ ಬಂದವರಿಗೆ ಮಾತ್ರ ಅಕ್ಕಿ, ಸಕ್ಕರೆ, ಗೋಧಿ ವಿತರಣೆ ಆಗುತ್ತಿದೆ. ಎರಡನೇ ದಿನ ಹೋದರೆ ಅಕ್ಕಿಯೊಂದೇ ಗತಿ! ‘ದಾಸ್ತಾನು ಇಲ್ಲ’ ಎಂದು ಹೇಳುವ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಕಾರ್ಡ್‌ಗೆ ಎರಡು ಲೀಟರ್‌ ಸೀಮೆಎಣ್ಣೆ ವಿತರಣೆ ಮಾತ್ರ ಮಾಡುತ್ತಿದ್ದಾರೆ. ಗ್ಯಾಸ್‌ ಸಂಪರ್ಕ ಇರುವ ಕುಟುಂಬಗಳಿಗೆ ಏನೂ ಇಲ್ಲ ಎಂದು ನೋವು ತೋಡಿಕೊಂಡರು.ಬೆಳಿಗ್ಗೆ ಪಡಿತರ ತರಲು ತೆರಳಿದರೆ ಸಂಜೆಯ ತನಕ ಕಾಯಬೇಕು. ಬಳಿಕ ಸಂಜೆ ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ. ಪ್ರತಿ ತಿಂಗಳು ರೇಷನ್‌ ಕಾರ್ಡ್‌ ತರಲು ಜಗಳವಾಡಬೇಕಾದ ಸ್ಥಿತಿಯಿದೆ. ಪ್ರತಿ ತಿಂಗಳು ಗ್ರಾಮಸ್ಥರ ಗೋಳು ಹೇಳತೀರದು. ಅವರ ವಿರುದ್ಧ ಮಾತನಾಡಿದರೆ ಪೊಲೀಸರನ್ನು ಕರೆಸುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry