ಕಾಳಸಂತೆಯಲ್ಲಿ ಪಡಿತರ ಮಾರಿದರೆ ಜೈಲು

ಮಂಗಳವಾರ, ಜೂಲೈ 23, 2019
27 °C
ರೂ 1ಕ್ಕೆ 1 ಕೆ.ಜಿ. ಅಕ್ಕಿ ನೀಡುವ `ಅನ್ನಭಾಗ್ಯ' ಯೋಜನೆಗೆ ಜಿಲ್ಲೆಯಲ್ಲೂ ಚಾಲನೆ

ಕಾಳಸಂತೆಯಲ್ಲಿ ಪಡಿತರ ಮಾರಿದರೆ ಜೈಲು

Published:
Updated:

ದಾವಣಗೆರೆ: ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗೆಂದು ರೂ1ಕ್ಕೆ 1 ಕೆ.ಜಿ. ಅಕ್ಕಿ ನೀಡುತ್ತಿದೆ. ಅಕ್ಕಿ ಪಡೆದವರು ಇತರರಿಗೆ ಮಾರಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು; ಅಂಥವರ ಚೀಟಿ ರದ್ದುಪಡಿಸಲಾಗುವುದು. ವ್ಯಾಪಾರಸ್ಥರು ಕಾಳಸಂತೆಯಲ್ಲಿ ಖರೀದಿ ಮಾಡಿದರೆ ಜೈಲಿಗೆ ಕಳುಹಿಸಲಾಗುವುದು.- ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಫಲಾನುಭವಿಗಳು ಹಾಗೂ ಮಾರಾಟಗಾರರಿಗೆ ನೀಡಿದ ಎಚ್ಚರಿಕೆ ಇದು.ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಇಲ್ಲಿನ ಎಸ್.ಎಂ.ಕೃಷ್ಣ ನಗರದ ಡಾನ್‌ಬಾಸ್ಕೋ ಶಾಲೆಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ `ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ.ಯಂತೆ ಅಕ್ಕಿ ವಿತರಣೆ ಯೋಜನೆ'ಗೆ ಜಿಲ್ಲೆಯಲ್ಲಿಯೂ ಚಾಲನೆ ನೀಡಿದ ಅವರು ಮಾತನಾಡಿದರು.`ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ರೂ 1ಕ್ಕೆ ರೂ 1 ಕೆ.ಜಿ. ಅಕ್ಕಿ ಯೋಜನೆ ಘೋಷಿಸಿದ್ದರು. ರೈತರು ನೀಡುವ ಹಾಲಿಗೆ ರೂ 4 ಸಹಾಯಧನ ಮತ್ತು ವಿವಿಧ ನಿಗಮಗಳಲ್ಲಿದ್ದ ಪರಿಶಿಷ್ಟರ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಇದು ಎಲ್ಲ ವರ್ಗದವರ ಪ್ರೀತಿಗೆ ಪಾತ್ರವಾಗಿತ್ತು. ಹೀಗೆ, ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಜವಾಬ್ದಾರಿಯಿಂದ ಜಾರಿಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ' ಎಂದು ಹೇಳಿದರು.ಆತಂಕಗೊಳ್ಳುವ ಅಗತ್ಯವಿಲ್ಲ: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಏಕ ವ್ಯಕ್ತಿ ಕುಟುಂಬಕ್ಕೆ 10 ಕೆ.ಜಿ., ಇಬ್ಬರಿದ್ದರೆ 20 ಕೆ.ಜಿ ಹಾಗೂ ಮೂವರಿಗಿಂತ ಹೆಚ್ಚಿನ ಸದಸ್ಯರಿರುವ ಕುಟುಂಬಕ್ಕೆ ರೂ30 ಕೆ.ಜಿ. ಅಕ್ಕಿಯನ್ನು ನೀಡಲಾಗುವುದು (ಮಾಸಿಕ). ಜಿಲ್ಲೆಯಲ್ಲಿ ಇದಕ್ಕೆ ತಕ್ಕಂತೆ ಅಕ್ಕಿ, ಗೋಧಿ ದಾಸ್ತಾನು ಇದೆ. ಪಡಿತರ ಚೀಟಿದಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಈ ಅಕ್ಕಿಯ ಗುಣಮಟ್ಟವೂ ಚೆನ್ನಾಗಿದೆ. ಊಟಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದರು.`ಅನ್ನಭಾಗ್ಯ' ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ 4,200 ಕೋಟಿ ಹೊರೆ ಆಗುತ್ತಿತ್ತು. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಿಂದ ಶೇ 60ರಷ್ಟು (ರೂ 2 ಸಾವಿರ ಕೋಟಿ)ಹೊರೆ ಕಡಿಮೆಯಾಗಿದೆ. ಬಡವರಿಗೆ ಆಹಾರ ಭದ್ರತೆ ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧವಾಗಿವೆ ಎಂದು ಹೇಳಿದರು.ಹಿಂದೆ ಪಡಿತರ ಖರೀದಿಸಿ ಬೇರೆ ಚೀಲಕ್ಕೆ ತುಂಬಿ ಬೇರೆಡೆ ರವಾನಿಸಲಾಗುತ್ತಿತ್ತು. ಆಗ, ಪರಿಣಾಮಕಾರಿಯಾಗಿ ವಿಚಕ್ಷಣೆ ಮಾಡುತ್ತಿರಲಿಲ್ಲ. ದುರ್ಬಳಕೆ ಆಗುತ್ತದೆ ಎಂಬ ಅರಿವು ಸರ್ಕಾರಕ್ಕೆ ಇದೆ. ಯಾವುದೇ ಕಾರಣಕ್ಕೂ ಪಡಿತರ ಮಾರಾಟ ಮಾಡಬಾರದು. ಮಾರಿದಲ್ಲಿ, ತೊಂದರೆಗೆ ಒಳಗಾಗುತ್ತೀರಿ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಪ್ರತಿ ತಿಂಗಳಿಗೆ ಬೇಕಾಗುವಷ್ಟು ಅಕ್ಕಿ, ಗೋಧಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ಬಡವರು ಪಡೆಯಬೇಕು. ಅಕ್ಕಿ ಅಗ್ಗವಾಗಿ ಸಿಗುವುದರಿಂದ, ಮನೆಯ ಖರ್ಚು ಸಹ ಕಡಿಮೆಯಾಗಲಿದೆ ಎಂದು ಹೇಳಿದರು.ಆಹಾರ ಭದ್ರತೆ ಒದಗಿಸಲು...: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‌ಕುಮಾರ್ ಮಾತನಾಡಿ, `ಅನ್ನಭಾಗ್ಯ' ಯೋಜನೆಯಡಿ ಜಿಲ್ಲೆಯ 3,69,224 ಕುಟುಂಬಗಳಿಗೆ ಸೌಲಭ್ಯ ದೊರೆಯಲಿದೆ. ಸರ್ಕಾರಕ್ಕೆ ಹೊರೆ ಸಹಿಸಿಕೊಳ್ಳುವ ಶಕ್ತಿ ಇದೆ. ಸಂಪನ್ಮೂಲ ಸಂಗ್ರಹಿಸಿ ಭರಿಸುವ ದಿಟ್ಟ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ಆಹಾರ ಭದ್ರತೆ ಒದಗಿಸುವ ದೃಷ್ಟಿಯಲ್ಲಿ ಉತ್ತಮ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.ಅಕ್ಕಿ ಅಗ್ಗವಾಗಿ ಸಿಗುತ್ತದೆ ಎಂದು ಬಡವರು ಸೋಮಾರಿಗಳಾಗಬಾರದು. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು, ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಬೇಕು. ಅಕ್ಕಿ ದರ್ಬಳಕೆ ಮಾಡಿಕೊಂಡರೆ ನ್ಯಾಯಬೆಲೆ ಅಂಗಡಿ ಮಾಲೀಕರು, ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಚೀಟಿದಾರರು ಅಕ್ಕಿ ಗುಣಮಟ್ಟ ಖಾತರಿಪಡಿಸಿಕೊಂಡು ತೆಗೆದುಕೊಳ್ಳಬೇಕು. ಕಳಪೆ ಗುಣಮಟ್ಟ ಕಂಡುಬಂದಲ್ಲಿ ಮಾಹಿತಿ ನೀಡಬೇಕು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತಮ ಅಕ್ಕಿ ದೊರೆಯುವಂತೆ ಮಾಡುತ್ತಾರೆ ಎಂದು ತಿಳಿಸಿದರು.ವಾರ್ಡ್ ಪಾಲಿಕೆ ಸದಸ್ಯ ಗೋಣೆಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಚಮನ್‌ಸಾಬ್, ಅಪ್ಪಣ್ಣ, ಬಸಪ್ಪ, ಗೌರಮ್ಮ, ಮಂಜಮ್ಮ, ದಿಲ್‌ಶಾದ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಾ ಮೊದಲಾದವರು ಪಾಲ್ಗೊಂಡಿದ್ದರು.

ಇದೇ ವೇಳೆ ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಯಿತು.ಆಹಾರ ಇಲಾಖೆ ಉಪ ನಿರ್ದೇಶಕ ಬಿ.ಟಿ.ಮಂಜುನಾಥ ಸ್ವಾಗತಿಸಿದರು.ಫಲಾನುಭವಿಗಳ ಅನಿಸಿಕೆ

ದಾವಣಗೆರೆ: ಬಡವರಿಗೆ ರೂ 1ಕ್ಕೆ ರೂ 1 ಕೆ.ಜಿ. ಅಕ್ಕಿ ನೀಡುವ ಯೋಜನೆ ಜಾರಿಗೊಳಿಸಿರುವ ಸರ್ಕಾರದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲ ಫಲಾನುಭವಿಗಳು ಪ್ರಜಾವಾಣಿ ಜತೆ ಹಂಚಿಕೊಂಡ ಅನಿಸಿಕೆ ಇಲ್ಲಿದೆ.ಬಹಳ ಒಳ್ಳೆಯದು...

.ನಮಗೆ ರೂ 1ಕ್ಕೆ 1 ಕೆ.ಜಿ. ಅಕ್ಕಿ ಕೊಟ್ಟಿದ್ದರಿಂದ ಬಹಳ ಒಳ್ಳೆಯದಾಗಿದೆ. ಕೂಲಿಯಿಂದ ಬರುವ ಹಣವನ್ನು ಇತರ ಕೆಲಸಕ್ಕೆ ಬಳಸುತ್ತೇವೆ. ಸರ್ಕಾರ ಬಡವರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲಿ.

- ಪಕ್ಕೀರಮ್ಮಸರ್ಕಾರಕ್ಕೆ ಪುಣ್ಯ ಬರಲಿ...


ನಾವು ಬಡವರು. ರೂ 1ಕ್ಕೆ 1 ಕೆ.ಜಿ. ಅಕ್ಕಿ ಕೊಟ್ಟಿದ್ದರಿಂದ ಬಹಳ ಅನುಕೂಲವಾಗಿದೆ. ಈ ಸರ್ಕಾರಕ್ಕೆ ಪುಣ್ಯ ಬರಲಿ. ಕಡಿಮೆ ದರಕ್ಕೆ ಅಕ್ಕಿ ಸಿಕ್ಕುವುದರಿಂದ ನಮಗೆ ಹೊರೆ ಕಡಿಮೆಯಾಗುತ್ತದೆ. ಹೀಗೆಯೇ ಇದು ಮುಂದುವರಿಯಲಿ.

- ಮೈಲಮ್ಮ`ಸೋಮಾರಿಗಳಾಗುತ್ತಾರೆ ಎನ್ನುವುದು ಸರಿಯಲ್ಲ'

ನ್ಯಾಯಬೆಲೆ ಅಂಗಡಿಗಳ ಸಂಘದ ಹನುಮಂತಪ್ಪ ಮಾತನಾಡಿ, ರೂ 1ಕ್ಕೆ 1 ಕೆ.ಜಿ. ಅಕ್ಕಿ ನೀಡುವುದು ಐತಿಹಾಸಿಕ ಕಾರ್ಯಕ್ರಮ. ಅಗ್ಗಕ್ಕೆ ಅಕ್ಕಿ ಸಿಕ್ಕರೆ ಸೋಮಾರಿಗಳಾಗುತ್ತಾರೆ ಎಂದು ಹೇಳುವವರು ಪಟ್ಟಭದ್ರ ಹಿತಾಸಕ್ತಿಗಳು. ಆಂಧ್ರಪ್ರದೇಶ ಮೊದಲಾದೆಡೆ ಈ ಯೋಜನೆ ಜಾರಿಯಲ್ಲಿದೆ. ಇದರಿಂದ ಯಾರೂ ಸೋಮಾರಿಗಳಾಗಿಲ್ಲ. `ಅನ್ನಭಾಗ್ಯ' ಯೋಜನೆ ಕ್ರಾಂತಿಕಾರಕ ಬದಲಾವಣೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.ಬಡವರಿಗೆ ಇಂತಹ ಅವಕಾಶ ದೊರೆಯುವುದಿಲ್ಲ. ಬೀಡಿಯೂ ಬಾರದಷ್ಟು ಹಣಕ್ಕೆ 1 ಕೆ.ಜಿ.ಅಕ್ಕಿ ಸಿಗುತ್ತಿದೆ. ಈ ಸೌಲಭ್ಯ ಸದುಪಯೋಗ ಮಾಡಕೊಳ್ಳಬೇಕು. ಆದಾಯ ಕೂಡಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry