ಕಾಳಿಂಗರಾಯರಿಗೆ ದನಿಯಾಗಿದ್ದವರ ದೈನ್ಯ ಸ್ಥಿತಿ

7

ಕಾಳಿಂಗರಾಯರಿಗೆ ದನಿಯಾಗಿದ್ದವರ ದೈನ್ಯ ಸ್ಥಿತಿ

Published:
Updated:
ಕಾಳಿಂಗರಾಯರಿಗೆ ದನಿಯಾಗಿದ್ದವರ ದೈನ್ಯ ಸ್ಥಿತಿ

ಬೆಂಗಳೂರು: ‘ಬರುವ ಒಂದು ಸಾವಿರ ರೂಪಾಯಿ ಮಾಸಾಶನದಲ್ಲಿ ನನ್ನ ಊಟದ ವೆಚ್ಚ ಮತ್ತು ಆಸ್ಪತ್ರೆಯ ವೆಚ್ಚವನ್ನು ಹೇಗೆ ನಿಭಾಯಿಸಬೇಕು ನೀವೇ ಹೇಳಿ? ಬದುಕಲು ಊಟ ಮಾಡಲೇಬೇಕೆಂದೇನಿಲ್ಲ. ಕಪ್ ಚಹಾದೊಂದಿಗೆ ಬ್ರೆಡ್ ತಿಂದರೂ ಆಯ್ತು.ಇದೆಲ್ಲ ನನಗೆ ರೂಢಿಯಾಗಿದೆ! -ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಪಿ.ಕಾಳಿಂಗರಾಯರೊಂದಿಗೆ ಹಲವಾರು ಭಾವಗೀತೆಗಳಿಗೆ ಧ್ವನಿಯಾದ ಗಾಯಕಿ ದಿ.ಮೋಹನ್‌ಕುಮಾರಿ ಅವರ ಅಕ್ಕ ಸೋಹನ್‌ಕುಮಾರಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಜೀವನದ ಇಂದಿನ ಸ್ಥಿತಿ ಮತ್ತು ಅಸಹಾಯಕತೆಯನ್ನು ಹೊರಗೆಡವಿದ್ದು ಹೀಗೆ. ಸಹೋದರಿಯ ಮರಣದ ನಂತರದ ಪರಿಸ್ಥಿತಿ ಬಗ್ಗೆ ತಿಳಿಯಲು ಶೇಷಾದ್ರಿಪುರದ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಇರುವ ಎರಡು ಕೋಣೆಯ ಬಾಡಿಗೆ ಮನೆಗೆ ಭೇಟಿ ನೀಡಿದಾಗ ಅವರು ಹಂಚಿಕೊಂಡ ಕೆಲ ಮಾತುಗಳು, ನೋವು ಇಲ್ಲಿದೆ.‘ನಮಗೆ ಕೇವಲ ಐದು ವರ್ಷವಾಗಿದ್ದಾಗಲೇ ತಂದೆ ಅನಂತ ಪದ್ಮನಾಭ ತಿವಾರಿ, ತಾಯಿ ಭಾಗೀರಥಿ ಇಹಲೋಕ ತೀರಿಹೋದರು. ತಬ್ಬಲಿಯಾದ ನಮ್ಮನ್ನು ಮದರಾಸಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಸಂಗೀತ ವಿಭಾಗದ ಶಿಕ್ಷಕರಾಗಿದ್ದ ನಮ್ಮ ಚಿಕ್ಕಪ್ಪ ಪಿ.ಕಾಳಿಂಗರಾಯರು ಬೆಂಗಳೂರಿಗೆ ಕರೆದುಕೊಂಡು ಬಂದರು. ನಾವು ತಬ್ಬಲಿಗಳೆಂಬ ಸಹಾನುಭೂತಿಯಿಂದ ಸಾಕಿ-ಸಲುಹಿದರು. ಯಾವುದೇ ಗಾಯನ ಕಾರ್ಯಕ್ರಮವಿದ್ದರೂ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು’ ಎಂದು ನೆನಪಿಸಿಕೊಂಡರು.‘ಮೋಹನ್‌ಕುಮಾರಿ ತುಂಬಾ ಚೆನ್ನಾಗಿ ಹಾಡುತ್ತಿದ್ದಳು. ನನ್ನ ಸ್ವರ ಅಪಸ್ವರವಾಗುತ್ತಿತ್ತು. ಒಂದು ದಿನ ಕಾಳಿಂಗರಾಯರೇ ಇದನ್ನು ನೇರವಾಗಿ ಹೇಳಿದರು. ಆದರೆ ಅಪಸ್ವರವೂ ಸ್ವರವಲ್ಲವೇ ಎಂದು ಹಾಸ್ಯ ಚಟಾಕಿ ಹಾರಿಸಿದ್ದೆ. ತಂಗಿ ಇರುವ ತನಕ ನನಗೆ ದುಡ್ಡಿನ ಸಮಸ್ಯೆ ಇರಲಿಲ್ಲ. ಆದರೆ ನಾವು ‘ಯಾರಿಗಾಗಿ’ ಸಿನಿಮಾ ನಿರ್ಮಾಣ ಮಾಡಿದ ನಂತರ ರೂ 17 ಲಕ್ಷ ಕೈಬಿಟ್ಟಿತು. ಕಾಳಿಂಗರಾಯರು, ನಾನು ಮತ್ತು ತಂಗಿ ಕೂಡಿಟ್ಟ ಹಣವೆಲ್ಲ ಇದಕ್ಕೆ ಖರ್ಚಾಯಿತು. ಸಂಪಂಗಿ ರಾಮನಗರದಲ್ಲಿ ಕೊಂಡುಕೊಂಡಿದ್ದ ಸೈಟನ್ನು ಮಾರಬೇಕಾಯಿತು. ಕೊನೆಗೆ ಸಿನಿಮಾವನ್ನು 1 ಲಕ್ಷಕ್ಕೆ ವಿತರಿಸಿ ನಷ್ಟ ಅನುಭವಿಸಿದೆವು. ಅದು ಬಿಡುಗಡೆಯೂ ಆಗಲಿಲ್ಲ. ಆಗ ತಂಗಿ ನೊಂದುಕೊಂಡಳು. ಆದರೆ ನಾನು ಧೈರ್ಯವಂತ ಮಹಿಳೆ (ಮನೆಯಲ್ಲಿ ತೂಗುಹಾಕಿದ್ದ ಭಾವಚಿತ್ರ ತೋರಿಸಿ) ಇಂದಿರಾಗಾಂಧಿ ಇದ್ದಂತೆ. ವೇರಿ ಬೋಲ್ಡ್ ಲೇಡಿ. ಆದರೆ ಮೋಹನ್‌ಕುಮಾರಿ ನನ್ನಷ್ಟು ಧೈರ್ಯವಂತೆ ಇರಲಿಲ್ಲ’‘ಮನೆಯಲ್ಲಿ ಏನೋ ತೆಗೆದುಕೊಳ್ಳಲು ಹೋದಾಗ ಮೋಹನ್‌ಕುಮಾರಿ ಆಯತಪ್ಪಿ ಬಿದ್ದು ಗಾಯಗೊಂಡಳು. ಇದೇ ನೆಪದಿಂದಲೇ ಅವಳು ತೀರಿಕೊಂಡಳು. ತಂಗಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾಗ ಖರ್ಚಾಗಿದ್ದ ರೂ 54,000 ಸಾಲ ಇನ್ನೂ ಹಾಗೆಯೇ ಇದೆ. ಮನೆ ನೀಡಿದ ರಾಜೇಂದ್ರನ್ ಬಾಡಿಗೆ ಹಣದ ಬಗ್ಗೆ ವಿಚಾರಿಸಿದವರಲ್ಲ. ತಮ್ಮನ ಮಗಳು ಮೋನಿಕಾ ಪ್ರಿಯದರ್ಶಿನಿ ಈಗ ಬಿಬಿಎಂ ಓದುತ್ತಿದ್ದಾಳೆ. ಅವಳಿಗೆ ಫೀಸ್ ಕಟ್ಟಬೇಕು’.‘ನನಗೆ ಈಗ ಕಲಾವಿದರ ಮಾಸಾಶನ ರೂ 1000 ಬರುತ್ತಿದೆ. ನಾನು ನಿಯಮಿತವಾಗಿ ಊಟ ಮಾಡುತ್ತಿಲ್ಲವಾದ ಕಾರಣ ಆ ಹಣ ತಿಂಗಳ ಖರ್ಚಿಗೆ ಸಾಕಾಗುತ್ತದೆ. ಆರೋಗ್ಯ ಕೆಟ್ಟಾಗ ತೋರಿಸಿಕೊಳ್ಳಲು ಹಣ ಹೊಂದಿಸಬೇಕು. ಆದರೆ ಮೋನಿಕಾಳನ್ನು ಮೋಹನ್‌ಕುಮಾರಿ ಬದುಕಿರುವವರೆಗೂ ಓದಿಸಿದಳು. ಈಗ ನನ್ನ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟಾದರೂ ಅವಳಿಗೆ ಓದಿಸಬೇಕು. ತಂಗಿ ತೀರಿ ಹೋದ ನೆನಪಿನಲ್ಲೇ ಕಾಲ ನೂಕುತ್ತೇನೆ. ಕಾಲುಗಳು ಬಾತುಕೊಂಡಿರುವುದರಿಂದ ಹೊರಗಡೆ ಹೋಗಲಾಗುವುದಿಲ್ಲ’ ಎಂದು ಕಣ್ಣೀರು ಹಾಕಿದರು.ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬಣಕಾರ್ ಎಂಬ ಶಿಕ್ಷಕರು ಪತ್ರಿಕೆಯಲ್ಲಿ ಇವರ ಕುರಿತು ಬಂದ ವರದಿ ನೋಡಿ ರೂ 1000 ನಗದಿನೊಂದಿಗೆ ಕಳುಹಿಸಿದ ಪತ್ರವನ್ನು ಜತನದಿಂದ ಕಾಪಾಡಿರುವ ಅವರು, ‘ನನಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ಈ ರೀತಿ ಸ್ಪಂದಿಸಿದ್ದಾರೆ. ಆದ್ದರಿಂದಲೇ ನನ್ನ ಜೀವನದ ಅಮೂಲ್ಯ ಆಸ್ತಿಯೆಂದು ಈ ಪತ್ರವನ್ನು ರಕ್ಷಿಸಿಟ್ಟಿದ್ದೇನೆ.ಬೆಂಗಳೂರಿನ ಗೆಳೆಯರ ಬಳಗದ ಸದಸ್ಯರೂ ಸಹ ಕಳೆದ ವರ್ಷ ರೂ 70,916 ನೀಡಿದ್ದಾರೆ. ಅವರ ಸಹಾಯವನ್ನು ಹೇಗೆ ಮರೆಯಲಿ’ ಎಂದು ಕೆಲ ಹೊತ್ತು ಭಾವುಕರಾದರು.ಸಹಾಯ ನೀಡಲಿಚ್ಛಿಸುವವರು ಅವರ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು-ಸೋಹನ್‌ಕುಮಾರಿ ತಿವಾರಿ, ಖಾತೆ ಸಂಖ್ಯೆ 17525, ಕಾರ್ಪೊರೇಷನ್ ಬ್ಯಾಂಕ್, ಸೌತ್ ಎಂಡ್ ರಸ್ತೆ, ಮಿಲ್ಲರ್ ಕಾರ್ನರ್, ಮಲ್ಲೇಶ್ವರ ಶಾಖೆ. ಮನೆ ವಿಳಾಸ-ನಂ 10, ಮೊದಲನೇ ಮಹಡಿ, ಫ್ಲ್ಯಾಟ್‌ಫಾರಂ ರಸ್ತೆ, ಆರ್.ಎನ್.ಶೆಟ್ಟಿ ಬಡಾವಣೆ, ಶೇಷಾದ್ರಿಪುರ, ಬೆಂಗಳೂರು. ದೂರವಾಣಿ: 080-2346 0838.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry